ಬನ್ನೂರು ಪಟ್ಟಣದ ಅಭಿವೃದ್ದಿಗೆ ಆಯವ್ಯಯದಲ್ಲಿ ಯೋಜನೆ

| Published : Dec 12 2024, 12:34 AM IST

ಸಾರಾಂಶ

ವಿಧ ಬಡಾವಣೆಗಳಲ್ಲಿ ನೆನೆಗುದಿಗೆ ಬಿದ್ದಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸ

ಕನ್ನಡಪ್ರಭ ವಾರ್ತೆ ಟಿ. ನರಸೀಪುರಬೆಳೆಯುತ್ತಿರುವ ಬನ್ನೂರು ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ನಾಗರೀಕರಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಆದ್ಯತೆ ನೀಡಿ ಆಯವ್ಯಯದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಾಧಿಕಾರಿ ಆರ್.ಹೇಮಂತ್ ರಾಜು ಹೇಳಿದರು. ತಾಲೂಕಿನ ಬನ್ನೂರಿನಲ್ಲಿರುವ ಪುರಸಭೆಯ ಸಿ.ಡಿ.ಎಸ್. ಭವನದಲ್ಲಿ ಕರೆಯಲಾಗಿದ್ದ 2025-26ನೇ ಸಾಲಿನ ಆಯವ್ಯಯ ಅಂದಾಜು ತಯಾರಿಸುವ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಅಭಿಪ್ರಾಯ ಆಲಿಸಿ ಅವರು ಮಾತನಾಡಿದರು.ವಿವಿಧ ಬಡಾವಣೆಗಳಲ್ಲಿ ನೆನೆಗುದಿಗೆ ಬಿದ್ದಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು. ಸ್ವಚ್ಚತೆ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಲು ಅನುದಾನವನ್ನು ಬಳಕೆಗೆ ಯೋಜನೆಯಲ್ಲಿ ಸೇರಿಸಲಾಗುವುದು ಎಂದರು.ಸಾಂಸ್ಕೃತಿಕ ನಗರಿ ಮೈಸೂರಿಗೆ ಸನಿಹದಲ್ಲಿರುವ ಬನ್ನೂರು ಪಟ್ಟಣದ ಸಮಗ್ರವಾಗಿ ನಗರ ಪ್ರದೇಶದಂತೆ ಬೆಳವಣಿಗೆಯಾಗಬೇಕು. ಮುಡಾ ಅನುಮೋದನೆಯಂತೆ ಬಡಾವಣೆಗಳು ನಿರ್ಮಾಣಗೊಳ್ಳಬೇಕು. ರಾಜ್ಯ ಸರ್ಕಾರವೂ ಕೂಡ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮದಲ್ಲಿ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡುವ ಅಮೂಲ್ಯ ಸಲಹೆಗಳು ಆಯವ್ಯಯದಲ್ಲಿ ಯೋಜನೆ ರೂಪಿಸಲು ಸಹಕಾರಿಯಾಗಲಿವೆ ಎಂದು ಅವರು ತಿಳಿಸಿದರು. ಸದಸ್ಯ ಮಹೇಶ್ ಮಾತನಾಡಿ, ಬನ್ನೂರು ಪಟ್ಟಣ ಸ್ವಚ್ಛತೆ ನಿರ್ವಹಣೆಗಾಗಿ ನಾಗಪುರ ಪ್ರವಾಸವನ್ನು ಹಮ್ಮಿಕೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಘೋಷಣೆ ಮಾಡಬೇಕು ಎಂಬ ಸಲಹೆಯನ್ನು ನೀಡಿದರು. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಬೇಡಪುರಸಭೆ ಅಧ್ಯಕ್ಷ ಕೃಷ್ಣಗೌಡ ಮಾತನಾಡಿ, ರಾಜ್ಯದ ಆಡಳಿತರೂಢ ಸರ್ಕಾರ ಅಭಿವೃದ್ಧಿಗೆ ಅನುದಾನ ಹಂಚಿಕೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕಷ್ಟೇ ವಿಶೇಷ ಅನುದಾನ ಕೊಟ್ಟು, ಉತ್ತರ ಸಮುದಾಯಗಳನ್ನ ನಿರ್ಲಕ್ಷಿಸಿರುವುದು ತಾರತಮ್ಯದ ಧೋರಣೆಯಾಗಿದೆ. ಬನ್ನೂರಿನ 23 ವಾರ್ಡುಗಳಲ್ಲಿ ಜೆಡಿಎಸ್ ಸದಸ್ಯರೇ ಗೆದ್ದಿಲ್ಲ. ಕಾಂಗ್ರೆಸ್ ಸದಸ್ಯರು ಕೂಡ ಚುನಾಯಿತರಾಗಿದ್ದಾರೆ. ಕ್ಷೇತ್ರದ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಅವರು ಟೌನ್ ಕೆಲವರ ಮಾತಿಗೆ ಕಿವಿಗೊಡದೆ ಪುರಸಭೆ ವ್ಯಾಪ್ತಿಯ ಪಟ್ಟಣದ ಅಭಿವೃದ್ಧಿಗೆ ಸಮಾನವಾಗಿ ಅನುದಾನ ಮಂಜೂರು ಮಾಡಬೇಕು ಎಂದರು.ದಲಿತ ಯುವ ಮುಖಂಡ ಬಿ.ಎಸ್. ಸುನಿಲ್ ಕುಮಾರ್ ಮಾತನಾಡಿ, ಪ. ಜಾತಿ ಮತ್ತು ಶೈಕ್ಷಣಿಕ ಸವಲತ್ತುಗಳನ್ನ ನೀಡಿರುವಂತೆಯೇ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದಂತೆ ಪ್ರೋತ್ಸಾಹ ಧನವನ್ನು ನೀಡಲು ಬಜೆಟ್ ನಲ್ಲಿ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.ಸಭೆಯ ಆರಂಭದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಕೆಲವು ನಿಮಿಷಗಳ ಕಾಲ ಮೌನಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಅಧ್ಯಕ್ಷ ಕೃಷ್ಣೇಗೌಡ ಸಂತಾಪ ನುಡಿಗಳನ್ನು ತಿಳಿಸಿದರು. ಉಪಾಧ್ಯಕ್ಷೆ ನಾಗರತ್ನ ಪ್ರಭಾಕರ್, ಮುಖಂಡರಾದ ಪುಟ್ಟಣ್ಣ, ಎಲ್.ಪಿ. ಮನು, ಶ್ರೀನಿವಾಸ್, ಪರಿಸರ ಎಂಜಿನಿಯರ್ ಎಸ್. ನಸೀಮಾ ಅಂಜುಮ್, ಲೆಕ್ಕಿಗ ಪ್ರಭ, ಅಧೀಕ್ಷಕಿ ವಿನುತ, ಕಂದಾಯ ಅಧಿಕಾರಿ ಬಸವರಾಜು, ನಿರೀಕ್ಷಕ ಅಮಿತ್, ಪ್ರಥಮ ದರ್ಜೆ ಸಹಾಯಕಿ ಪುಷ್ಪ, ಅರುಣ್, ದ್ವಿತೀಯ ದರ್ಜೆ ಸಹಾಯಕಿ ಲತಾ, ಕರ ವಸೂಲಿಗಾರ ಹರೀಶ್, ಹೆಲ್ತ್ ಇನ್ ಸ್ಪೆಕ್ಟರ್ ಪ್ರೇಮ, ಸಿಬ್ಬಂದಿಗಳಾದ ಸೈಯದ್ ಆಫಾಜ್, ಕಾಂತರಾಜು, ಅಕ್ಷಯ್ ಇದ್ದರು.