ಸುಂಟಿಕೊಪ್ಪ: ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರಶ್ನಿಸುವ ಗುಣಗಳನ್ನು ಸಹಕಾರ ಕ್ಷೇತ್ರದ ಪ್ರತಿ ಸದಸ್ಯರು ಬೆಳೆಸಿಕೊಂಡಾಗ ಮಾತ್ರ ಸಹಕಾರ ಕ್ಷೇತ್ರ ಬಲಿಷ್ಠವಾಗಿ ಬೆರೂರಲು ಸಾಧ್ಯ. ಕೊಡಗು ಜಿಲ್ಲೆಯಲ್ಲಿ ಪ್ರಶ್ನೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾ.ಪಂ.ನ ಸಮುದಾಯ ಭವನದಲ್ಲಿ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘ ಹಾಗೂ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಶ್ರಯದಲ್ಲಿ ಜರುಗಿದ ಅಭಿನಂದನಾ ಸಮಾರಂಭ ಹಾಗೂ 3 ಸಂಘಗಳ ಜಾಗದ ದಾಖಲೆ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಶಾಸಕರು ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ರಂಗಸಮುದ್ರ ಸಹಕಾರ ದವಸ ಭಂಡಾರ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ತಲಾ 5 ಲಕ್ಷ ರು.ಗಳ ಅನುದಾನ ಘೋಷಿಸಿದರು. ಗ್ರಾಮೀಣ ಭಾಗದ ಜನತೆ ಹೈನುಗಾರಿಕೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೆಲೆಯ ಆಮಿಷಕ್ಕೊಳಗಾಗಿ ಯಾರೂ ತಮ್ಮ ಜಮೀನುಗಳನ್ನು ಮಾರಾಟ ಮಾಡದಂತೆ ರೈತರಲ್ಲಿ ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘದ ಅಧ್ಯಕ್ಷ ಎ.ಎಂ. ಲೋಕನಾಥ್ ಅವರು ಸಂಘಗಳ ಬೆಳವಣಿಗೆ ವಿವರ ನೀಡಿದರು.ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ಅಧ್ಯಕ್ಷತೆ ವಹಿಸಿದ್ದರು.
ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಬಿ.ಎಂ. ಸಾಗರ್ ಅವರು ಸಂಘಗಳ ಜಾಗದ ದಾಖಲಾತಿಗಳನ್ನು ಸರಿಪಡಿಸಿ ಒದಗಿಸಿಕೊಟ್ಟ ಅಧಿಕಾರಿಗಳನ್ನು ಸ್ಮರಿಸಿದರು. 3 ಸಹಕಾರ ಸಂಘಗಳ ವತಿಯಿಂದ ಶಾಸಕ ಡಾ. ಮಂತರ್ ಗೌಡ ಹಾಗೂ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಸಂಘಗಳ ಉಪಾಧ್ಯಕ್ಷರು, ಸರ್ವ ನಿರ್ದೇಶಕ ಮಂಡಳಿ ಸದಸ್ಯರು, ಸಹಕಾರಿ ಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಧವಸ ಭಂಡಾರದ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿ, ಬಿ.ಎಸ್. ಧನಪಾಲ್ ವಂದಿಸಿದರು.