ಸಾರಾಂಶ
- ಉಳುಪಿನಕಟ್ಟೆ ಕ್ರಾಸ್ ಬಳಿ ರೈತ ಹುತಾತ್ಮರ ದಿನಾಚರಣೆಯಲ್ಲಿ ಸಂಸದೆ ಡಾ.ಪ್ರಭಾ
- - - ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಯನ್ನು ಸಮಗ್ರ ನೀರಾವರಿ ಯೋಜನೆಗಳಿಗೆ ಒಳಪಡಿಸಲು ಶೀಘ್ರವೇ ನೀರಾವರಿ ಸಚಿವರು, ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ನಗರದಲ್ಲಿ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಆನಗೋಡು ಸಮೀಪದ ಉಳುಪಿನಕಟ್ಟೆ ಕ್ರಾಸ್ ಬಳಿ ಶುಕ್ರವಾರ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯಿಂದ ದಿವಂಗತ ಓಬೇನಹಳ್ಳಿ ಕಲ್ಲಿಂಗಪ್ಪ, ದಿವಂಗತ ಸಿದ್ದನೂರು ನಾಗರಾಜಾಚಾರ್‌ರ 32ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಯ 22 ಕೆರೆಗಳ ಏತ ನೀರಾವರಿ, ಜಗಳೂರು ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ, ಸಾಸ್ವೇಹಳ್ಳಿ ಏತ ಯೋಜನೆ ಸೇರಿದಂತೆ ಜಿಲ್ಲೆಯ ನೀರಾವರಿ ಯೋಜನೆಗಳ ಬಗ್ಗೆ ಶೀಘ್ರವೇ ದಾವಣಗೆರೆಯಲ್ಲಿ ಸಭೆ ನಡೆಸಿ, ಅವುಗಳಿಗೆ ವೇಗ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.
22 ಕೆರೆ ತುಂಬಿಸುವ ಯೋಜನೆ ಮಾಯಕೊಂಡ ಕ್ಷೇತ್ರಕ್ಕೆ ಅತ್ಯಗತ್ಯವಾಗಿದೆ. ಈಗಾಗಲೇ ಕೆರೆಗಳನ್ನು ತುಂಬಿಸುವ ಯೋಜನೆಗೆ ₹19 ಕೋಟಿ ಮೀಸಲಿಟ್ಟಿದೆ. ಆನಗೋಡು ಬಳಿ 1992ರಲ್ಲಿ ಸೂಕ್ಷ್ಮವಾಗಿ ಸುಧಾರಿಸಿಕೊಂಡು ಹೋಗಿದ್ದರೆ ರೈತರಿಬ್ಬರ ಸಾವನ್ನು ತಪ್ಪಿಸಬಹುದಿತ್ತು. ರೈತರ ಗೋಳು ಹೇಳತೀರದಾಗಿದೆ. ರೈತರು ಹೋರಾಟ ಮಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ಎಪಿಎಂಸಿ ಮಾರುಕಟ್ಟೆ ಬಳಿ ರೈತ ಭವನ ನಿರ್ಮಾಣ, ಮೆಕ್ಕೆಜೋಳ ಸಂಸ್ಕರಣಾ ಘಟ ರೈತರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆಯಬೇಕು, ಅಡಕೆ ಬೆಳೆಗೆ ವಿಮೆ, ರಸ್ತೆಗಳ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆ ಇವೆ. ಎಲ್ಲರೂ ಸೇರಿ ರೈತ ಭವನ, ರೈತರ ಹುತಾತ್ಮ ಭವನ ನಿರ್ಮಿಸೋಣ ಎಂದರು.ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತರ ಸಮಸ್ಯೆ ಆಲಿಸುವ, ಜನಪರ ಯೋಜನೆಗಳನ್ನು ರೂಪಿಸುವ ಕ್ರಿಯಾಶೀಲ ಸಚಿವರು, ಶಾಸಕರು, ಸಂಸದರು ಇಲ್ಲಿಗೆ ಸಿಕ್ಕಿದ್ದಾರೆ. ಸದಾ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯೋಚಿಸುವವರಾಗಿದ್ದು, ಮುಂದಿನ ವರ್ಷದ ರೈತ ಹುತಾತ್ಮರ ದಿನಾಚರಣೆಯೊಳಗಾಗಿ ಹುತಾತ್ಮ ರೈತರ ಭವನ ನಿರ್ಮಿಸುವ ಕೆಲಸ ಆಗಬೇಕು. ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಮಾಯಕೊಂಡ ಕ್ಷೇತರ ರಸ್ತೆ ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಈಗಾಗಲೇ ಕಾರ್ಯಗತಗೊಂಡಿವೆ. ಭವಿಷ್ಯದಲ್ಲಿ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.ಸಮಿತಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಓ ಸುರೇಶ ಬಿ.ಇಟ್ನಾಳ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವನಾಯ್ಕ, ಶಾಮನೂರು ಎಚ್.ಆರ್.ಲಿಂಗರಾಜ, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ, ತೇಜಸ್ವಿ ವಿ. ಪಟೇಲ್, ಗೌಡರ ಮಹೇಶ್ವರಪ್ಪ, ಅರುಣಕುಮಾರ್ ಕುರುಡಿ, ಹೆದ್ನೆ ಮುರುಗೇಂದ್ರಪ್ಪ, ತಹಶೀಲ್ದಾರ್ ಡಾ.ಅಶ್ವಥ್, ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಆನಗೋಡು ನಂಜುಂಡಪ್ಪ, ಬುಳ್ಳಾಪುರದ ಹನುಮಂತಪ್ಪ, ಮಟ್ಟಿಕಲ್ಲು ವೀರಭದ್ರಸ್ವಾಮಿ ಸೇರಿದಂತೆ ಅನೇಕ ರೈತ ಮುಖಂಡರು ಇದ್ದರು.
- - -ಬಾಕ್ಸ್
ನೀರಾವರಿ ಯೋಜನೆಗೆ ಕೇಂದ್ರಕ್ಕೆ ಒತ್ತಡ: ಡಾ.ಪ್ರಭಾ ಕನ್ನಡಪ್ರಭ ವಾರ್ತೆ, ದಾವಣಗೆರೆಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ವಿವರಣೆ ನೀಡಿದೆ. ಭದ್ರಾ ಮೇಲ್ದಂಡೆ ಸೇರಿದಂತೆ ರಾಜ್ಯದ ದೊಡ್ಡ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಮಾಡುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಉಳುಪಿನಕಟ್ಟೆ ಕ್ರಾಸ್ ಬಳಿ ಶುಕ್ರವಾರ ರೈತ ಹುತಾತ್ಮರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋ ಜನೆ ಕಾರ್ಯ ರೂಪಕ್ಕೆ ಬಂದಲ್ಲಿ ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಭದ್ರಾ ಮೇಲ್ದಂಡೆ ಸೇರಿದಂತೆ ರಾಜ್ಯದ ದೊಡ್ಡ ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ನೀರಾವರಿ ಯೋಜನೆಯಾಗಿಸಲು ರಾಜ್ಯ ಸರ್ಕಾರದ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ ಎಂದರು.ಉಳುಪಿನಕಟ್ಟೆ ಕ್ರಾಸ್ ಬಳಿ ರೈತರ ಹುತಾತ್ಮರ ಸ್ಮಾರಕದ ಬಳಿ ರೈತರ ಭವನ ನಿರ್ಮಿಸಲು ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಗತ್ಯ ನೆರವು ಒದಗಿಸಲಾಗುವುದು. ಈ ಭಾಗದಲ್ಲಿ ಭೂ ತಾಯಿ ಹಸಿರು ಸೀರೆಯುಟ್ಟು ಶೋಭಿಸುತ್ತಿದ್ದಾರೆ. ಇಧೇ ವಾತಾವರಣ ನಿರಂತರ ಇರುವಂತೆ ನಾವು, ನೀವೆಲ್ಲರೂ ಶ್ರಮಿಸೋಣ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಮಾಡಿದರು.
- - - (-ಫೋಟೋ ಇದೆ)