ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ ತಾಲೂಕಿನಾದ್ಯಂತ ಸೋಮವಾರ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧಾ- ಭಕ್ತಿಯಿಂದ ಆಚರಿಸಿದರು. ಅಹ್ಲೆ ಸುನ್ನತ್ ಪಂಗಡದವರು ನಗರದ ಅಂಜುಮನ್ ಹೈಸ್ಕೂಲ್ ಬಳಿ ಹಾಗೂ ಅಹ್ಲೆ ಹದೀಸ್ ಪಂಗಡದವರು ಜೈಭೀಮನಗರ ಸಮೀಪದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಖಾಜಿ ಸೈಯದ್ ಶಂಷುದ್ದೀನ್ ಮೌಲಾನಾ ಪ್ರವಚನ ನೀಡಿ, ಪವಿತ್ರ ರಂಜಾನ್ ಮಾಸದಲ್ಲಿ ಕೇವಲ ಉಪವಾಸ ಮಾಡಿದರೆ ಸಾಲದು, ಉಳ್ಳವರು ತಮ್ಮ ಆಸ್ತಿ- ಅಂತಸ್ತಿಗೆ ಅನುಸಾರವಾಗಿ ನಿರ್ಗತಿಕರು, ದುರ್ಬಲರಿಗೆ ದಾನ, ಧರ್ಮ ಮಾಡಿ, ಅವರೂ ಹಬ್ಬ ಆಚರಿಸಲು ನೆರವಾಗಬೇಕು. ದಾನ ಮಾಡಿದಾಗ ಗಳಿಸಿದ ಆಸ್ತಿ, ಸಂಪತ್ತು ಶುದ್ಧವಾಗುತ್ತದೆ ಎಂದರು.ಹರಿಹರ ಸೇರಿದಂತೆ ಮಲೇಬೆನ್ನೂರು, ಭಾನುವಳ್ಳಿ, ಕರ್ಲಹಳ್ಳಿ, ರಾಜನಹಳ್ಳಿ, ಬೆಳ್ಳೂಡಿ ಹಾಗೂ ಇತರೆ ಗ್ರಾಮಗಳಲ್ಲೂ ರಂಜಾನ್ ಆಚರಿಸಲಾಗಿದೆ. ಮುಸ್ಲಿಂ ಬಾಂಧವರು ಶ್ಯಾವಿಗೆ ಪಾಯಸ ಹಾಗೂ ವಿಶೇಷ ಅಡುಗೆ ತಯಾರಿಸಿ, ಸವಿದರು. ಮಕ್ಕಳು ಹೊಸ ಬಟ್ಟೆಗಳ ತೊಟ್ಟು ಸಂಭ್ರಮಿಸಿದರು.
ಮಾಜಿ ಶಾಸಕ ಎಸ್ ರಾಮಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹಾಗೂ ವಿವಿಧ ರಾಜಕಾರಣಿಗಳು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.ಹಿದಾಯತ್ ಉಲ್ಲಾ ಮೌಲಾನಾ, ಅಂಜುಮನ್ ಎ ಇಸ್ಲಾಮಿಯ ಸಂಸ್ಥೆಯ ಅಧ್ಯಕ್ಷ ಏಜಾಜ್ ಅಹಮದ್, ಪ್ರಧಾನ ಕಾರ್ಯದರ್ಶಿ ಆಸಿಫ್ ಜುನೇದಿ, ಉಪಾಧ್ಯಕ್ಷ ಎಂ.ಎಂ.ಬಿ. ಫಾರೂಕ್, ಫಯಾಜ್ ಅರಿಹಂತ, ಸಮಾಜ ಸೇವಕ ಸೈಯದ್ ಸನಾವುಲ್ಲ, ನಗರಸಭೆ ಸದಸ್ಯರಾದ ಆರ್.ಸಿ.ಜಾವಿದ್, ಎಂ.ಆರ್. ಮುಜಮ್ಮಿಲ್, ಸೈಯದ್ ಅಬ್ದುಲ್ ಅಲೀಮ್ ಮತ್ತಿತರ ಮುಖಂಡರು ಇದ್ದರು.
- - --31ಎಚ್‍ಆರ್‍ಆರ್01, 01ಎ:
ಹರಿಹರದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.