ಸಾರಾಂಶ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಪಕ್ಷಿಗಳ ವಲಸೆಗಳು ಅನಾದಿ ಕಾಲದಿಂದಲೂ ನಡೆಯುತ್ತಿದೆ. ಇಂತಹ ವಲಸೆಯಲ್ಲಿ ಅಪರೂಪಕ್ಕೊಮ್ಮೆ ವಿಚಿತ್ರ ವಿದ್ಯಮಾನಗಳು ಘಟಿಸುತ್ತವೆ. ಇಂಥಹ ಅಪರೂಪವಾದ ವಿದ್ಯಮಾನವೊಂದು ಮಂಗಳೂರಿನಲ್ಲಿ ಘಟಿಸಿದೆ.
ಸದಾ ಕಾಲ ತಂಪಾದ ಪ್ರದೇಶಗಳಲ್ಲಿ, ಘಟ್ಟ ಪ್ರದೇಶಗಳ ಭಾಗಗಳಲ್ಲಿ ಕಾಣ ಸಿಗುವ ಬೂದು ಬಣ್ಣದ ಹಾರ್ನ್ ಬಿಲ್ ಇಂಡಿಯನ್ ಬೂದು ಮಂಗಟ್ಟೆ ಹಕ್ಕಿ, ಕರಾವಳಿ ಭಾಗಗಳಲ್ಲಿ ಕಂಡು ಬಂದಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಹಿಂದೆ 2019ರಲ್ಲಿ ಮಂಗಳೂರಿನ ಕರಂಗಲ್ಪಾಡಿಯಲ್ಲಿ ಈ ಹಕ್ಕಿ ಕಾಣಸಿಕ್ಕಿತ್ತು. ಈಗ ಫೆ.17ರಂದು ಮಂಗಳೂರು ಹೊರವಲಯದ ಬೀರಿಯಲ್ಲಿರುವ ಸಂತ ಅಲೋಶಿಯಸ್ ಕ್ಯಾಂಪಸ್‌ನಲ್ಲಿ (ಪರಿಗಣಿತ ವಿಶ್ವ ವಿದ್ಯಾನಿಲಯ) ಹಾರ್ನ್ ಬಿಲ್ ಇಂಡಿಯನ್ ಬೂದು ಮಂಗಟ್ಟೆ ಹಕ್ಕಿ ಕಂಡು ಬಂದಿದೆ.ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ತಂಡ ಈ ಹಕ್ಕಿಯ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ.ಕೀಟಗಳ ಅಧ್ಯಯನದಲ್ಲಿ ಪರಿಣತಿ ಪಡೆದಿರುವ ಪ್ರಾಧ್ಯಾಪಕ ಕಿರಣ್ ವಟಿ ಕೆ. ಅವರ ತಂಡ, ಛಾಯಗ್ರಾಹಣ ಹಾಗೂ ಕೀಟ, ಪಕ್ಷಿಗಳ ಅಧ್ಯಯನ ಮಾಡುತಿದ್ದಾರೆ. ಜೊತೆಗೆ ಆರು ವರ್ಷಗಳಿಂದ ಹಕ್ಕಿ ಗಣತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
* ಆವಾಸಸ್ಥಾನ ವಿಸ್ತರಣೆಯ ಸಂಕೇತವೆ?:ಭಾರತೀಯ ಗ್ರೇ ಹಾರ್ನ್‌ಬಿಲ್‌ಗಳು ದಕ್ಷಿಣ ಕನ್ನಡದ ಕರಾವಳಿ ಪ್ರದೇಶಗಳಲ್ಲಿ ಕಂಡು ಬಂದಿರುವುದು ಇದೇ ಮೊದಲು. ಇದು ತಮ್ಮ ಆವಾಸ ಸ್ಥಾನದ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಸಂಕೇತವಾಗಿರಬಹುದು. ಕರಾವಳಿ ಕಾಡುಗಳು ಮತ್ತು ಪರಿಸರ ಈ ಪಕ್ಷಿಗಳಿಗೆ ಹೊಂದಿಕೊಳ್ಳಲು ಬದಲಾವಣೆ ಆಗುತ್ತಿದೆಯೇ ಎಂಬುದರ ಅಧ್ಯಯನ ನಡೆಸಲಾಗುತ್ತಿದೆ. ಅರಳಿಮರ, ಅಶ್ವತ್ಥ ಮರಗಳನ್ನು ಒಳಗೊಂಡ ಪೈಕಾಸ ಪ್ರಬೇಧದ ಮರಗಳ ಮಾರಣ ಹೋಮ ಹಾಗೂ ಕಾಡಿನ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪಗಳೇ ಈ ಪಕ್ಷಿಗಳ ಆವಾಸ ಸ್ಥಾನ ಬದಲಾವಣೆಗೆ ಕಾರಣವಾಗಿರಬಹುದೇ ಎನ್ನುವುದರ ಅಧ್ಯಯನ ನಡೆಯಬೇಕಿದೆ ಎಂದು ಪ್ರಾಣಿಶಾಸ್ತ್ರಜ್ಞ ಕಿರಣ್ ವಟಿ ಕೆ. ತಿಳಿಸಿದ್ದಾರೆ.* ಅಧ್ಯಯನ ತಂಡ:ಸಂತ ಅಲೋಶಿಯಸ್‌ನ (ಪರಿಗಣಿತ ವಿಶ್ವವಿದ್ಯಾಲಯ) ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೇಮಚಂದ್ರ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾದ ಗ್ಲಾವಿನ್ ಥಾಮಸ್ ರೋಡ್ರಿಗಸ್, ಸವಿಯಾ ಡಿಸೋಜ, ಕಿರಣ್ ವಟಿ ಕೆ., ಹರಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಅಧ್ಯಯನಗಳು ನಡೆಯುತ್ತಿವೆ.
* ಗ್ರೆ ಹಾರ್ನ್ ಬಿಲ್ ವಿಶೇಷತೆಗಳು:ಭಾರತೀಯ ಗ್ರೇ ಹಾರ್ನ್‌ಬಿಲ್ ಬೀಜ ಪ್ರಸರಣದಲ್ಲಿ ವಿಶೇಷವಾಗಿ ಅಂಜೂರದ ಮರಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಒಂದು ಪ್ರದೇಶದಲ್ಲಿ ಅವುಗಳ ಉಪಸ್ಥಿತಿಯು ಪರಿಸರ ವ್ಯವಸ್ಥೆಯ ಸೂಚಕವಾಗಿದೆ.ಭಾರತೀಯ ಗ್ರೇ ಹಾರ್ನ್‌ಬಿಲ್ ಭಾರತೀಯ ಉಪಖಂಡದಲ್ಲಿ ಕಂಡುಬರುವ ಸಾಮಾನ್ಯ ಹಾರ್ನ್‌ಬಿಲ್. ಈ ಹಕ್ಕಿ ವೃಕ್ಷವಾಸಿಯಾಗಿದ್ದು, ಸಾಮಾನ್ಯವಾಗಿ ಜೋಡಿಯಾಗಿ ಕಂಡುಬರುತ್ತದೆ. ಇದು ತಿಳಿ ಬೂದು ಅಥವಾ ಮಂದ ಬಿಳಿ ಹೊಟ್ಟೆಯೊಂದಿಗೆ ದೇಹದಾದ್ಯಂತ ಬೂದು ಗರಿಗಳನ್ನು ಹೊಂದಿರುತ್ತದೆ. ಕೊಂಬು ಕಪ್ಪು ಅಥವಾ ಕಡು ಬೂದು ಬಣ್ಣದಲ್ಲಿರುತ್ತದೆ.
ಹಾರ್ನ್ ಬಿಲ್‌ಗಳಲ್ಲಿ ಪ್ರಪಂಚದಾದ್ಯಂತ 57 ಜಾತಿಗಳಿವೆ ಮತ್ತು ಭಾರತದಲ್ಲಿ 10 ಪ್ರಭೇದಗಳಿವೆ ಮತ್ತು ಕರ್ನಾಟಕದಲ್ಲಿ 4 ಪ್ರಭೇದಗಳು ಕಾಣಸಿಗುತ್ತವೆ.ಈ ಹಾರ್ನ್‌ಬಿಲ್‌ಗಳ ವಲಸೆಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಈ ಹಕ್ಕಿಗಳ ವಾಸವು ಪರಿಸರ ವ್ಯವಸ್ಥೆಗಳ ಆರೋಗ್ಯ ಮತ್ತು ಹೊಂದಾಣಿಕೆಯ ಮೌಲ್ಯಯುತದ ಸೂಚಕವಾಗಿದೆ. ಕರಾವಳಿ ಪ್ರದೇಶಗಳಲ್ಲಿ ಈ ಹಾರ್ನ್‌ಬಿಲ್‌ಗಳನ್ನು ಅಧ್ಯಯನ ಮಾಡುವುದರಿಂದ ಅವು ಎಷ್ಟು ಹೊಂದಿಕೊಳ್ಳುತ್ತವೆ ಮತ್ತು ಪರಿಸರ ಬದಲಾವಣೆಗಳಿಗೆ ಅವು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಪರಿಸರವನ್ನು ಉಳಿಸಬೇಕು. ಮಾನವನ ಹಸ್ತಕ್ಷೇಪ ಅರಣ್ಯಗಳ ಮೇಲೆ ಕಡಿಮೆಯಾಗಬೇಕು. ಆಗ ಹಕ್ಕಿಗಳು ವಾಸಿಸಲು ಸಾಧ್ಯ. ಅಧ್ಯಯನ ನಡೆಸಿದ ಬಳಿಕ ಮೂಲಕ ಸಂಪೂರ್ಣ ಮಾಹಿತಿ ಲಭಿಸಲಿದೆ.। ಕಿರಣ್ ವಟಿ ಕೆ., ಪ್ರಾಣಿಶಾಸ್ತ್ರದ ಪ್ರಾಧ್ಯಾಪಕ, ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು------------------ಕ್ಯಾಂಪಸ್‌ನ ತೆಂಗಿನ ತೋಟಗಳ ನಡುವೆ ಈ ಹಾರ್ನ್‌ಬಿಲ್‌ಗಳ ಜೋಡಿ ಇರುವುದು ಪತ್ತೆಯಾಗಿತ್ತು. ಇದು ಕರಾವಳಿ ಪ್ರದೇಶದಲ್ಲಿ ಅವುಗಳ ಆವಾಸಸ್ಥಾನ ವಿಸ್ತರಣೆಯನ್ನು ಸೂಚಿಸುತ್ತದೆ. ಈ ಅವಲೋಕನವು ಈ ಪ್ರದೇಶದ ಪರಿಸರ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ ಮಾತ್ರವಲ್ಲದೆ ಅಂತಹ ಗಮನಾರ್ಹವಾದ ಜೀವವೈವಿಧ್ಯತೆಯನ್ನು ರಕ್ಷಿಸಲು ಸಂರಕ್ಷಣಾ ಪ್ರಯತ್ನಗಳ ಪ್ರಾಮುಖ್ಯತೆ ಇದೆ.
। ಗ್ಲಾವಿನ್ ಥಾಮಸ್ ರೋಡ್ರಿಗಸ್, ಸಹ ಪ್ರಾಧ್ಯಾಪಕ ಸೈಂಟ್ ಅಲೋಶಿಯಸ್ ಮಂಗಳೂರು