ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸ್ವಾರ್ಥ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜ ಮುಖಿಯಾಗಿ ಚಿಂತಿಸಿ, ಸೇವಾ ಮನೋಭಾವನೆ ಮೈಗೂಡಿಸಿಕೊಂಡಿರುವ ಶತಾಯುಷಿಗಳಾದ ತಮ್ಮಪ್ಪಶೆಟ್ಟರಂತಹ ಅಪರೂಪದ ವ್ಯಕ್ತಿಗಳು ಬೇಕಾಗಿದ್ದಾರೆ ಎಂದು ಹಿರಿಯ ರಾಜಕೀಯ ಮುತ್ಸದ್ಧಿ ನಾಯನಕನಹಳ್ಳಿ ಬಿ.ನಂಜಪ್ಪ ಹೇಳಿದರು.ಪಟ್ಟಣದ ಜಯನಗರ ಬಡಾವಣೆಯ ಶತಾಯುಷಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರ ತಮ್ಮಪ್ಪಶೆಟ್ಟರನ್ನು ಸ್ನೇಹಿತರ ಕೂಟದಿಂದ ಗೌರವಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿ ಸರಳ ಜೀವನ ನಡೆಸಿ ಪ್ರಗತಿಪರ ಕೃಷಿಕ, ಸಮಾಜಮುಖಿ ಚಿಂತನೆಯೊಂದಿಗೆ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ನೇಕಾರ ಕುರುಹಿನಶೆಟ್ಟಿ ಸಮಾಜದ ನೇತಾರ ತಮ್ಮಪ್ಪಶೆಟ್ಟಿ ಅವರು ಸಾರ್ಥಕ ನೂರು ವರ್ಷಗಳನ್ನು ಸಂಪೂರ್ಣಗೊಳಿಸುತ್ತಿದ್ದಾರೆ ಎಂದರು.
2025ರ ಜುಲೈ 25ಕ್ಕೆ 101ನೇ ವರ್ಷಕ್ಕೆ ತಮ್ಮಪ್ಪ ಶೆಟ್ಟಿ ಕಾಲಿಡುತ್ತಿದ್ದಾರೆ. ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಎಚ್.ಡಿ.ಚೌಡಯ್ಯ, ಹೊಳೆನರಸೀಪುರದ ಜಿ.ಪುಟ್ಟಸ್ವಾಮಿಗೌಡ, ಬಳ್ಳೇಕೆರೆ ಎಂ.ಪುಟ್ಟಸ್ವಾಮಿಗೌಡ ಹಾಗೂ ರಾಜ್ಯದ ಹಿರಿಯ ಸಹಕಾರಿ ಧುರೀಣರಾಗಿದ್ದ ಮಾಜಿ ಶಾಸಕ ಎಸ್.ಎಂ.ಲಿಂಗಪ್ಪ ಅವರ ಒಡನಾಡಿಯಾಗಿದ್ದ ತಮ್ಮಪ್ಪನವರು ತಮ್ಮ ಜೀವನದುದ್ದಕ್ಕೂ ಸೇವಾ ಮನೋಭಾವನೆ ಮೈಗೂಡಿಸಿಕೊಂಡು ಸೇವೆ ಎಂಬ ಪದಕ್ಕೆ ಸಾರ್ಥಕತೆ ತಂದು ಕೊಟ್ಟಿದ್ದು ಇತರರಿಗೆ ಮಾದರಿಯಾದ ಜೀವನ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಅಭಿವೃದ್ಧಿಗೆ ಪುರಸಭೆ ಅಧ್ಯಕ್ಷರಾಗಿದ್ದ ಕೆ.ಜೆ.ಬೋರಲಿಂಗೇಗೌಡ, ಎಚ್.ಟಿ.ನಾರಾಯಣಶೆಟ್ಟಿ ಅವರ ಮಾರ್ಗದರ್ಶಕರಾಗಿ ಮಾದರಿ ಪಟ್ಟಣದ ನಿರ್ಮಾಣಕ್ಕೆ ತಮ್ಮ ಹೆಗಲು ನೀಡಿ ದುಡಿದಿದ್ದಾರೆ ಎಂದು ಸ್ಮರಿಸಿದರು.
ವಕೀಲ ಹಾಗೂ ನೋಟರಿಗಳಾದ ಎಸ್.ಸಿ.ವಿಜಯಕುಮಾರ್ ಮಾತನಾಡಿ, ಸ್ವಚ್ಛ ಹಾಗೂ ಪಾರದರ್ಶಕ ವ್ಯಕ್ತಿತ್ವ ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಿ ಜೀವನ ನಡೆಸಿರುವ ತಮ್ಮಪ್ಪಶೆಟ್ಟಿ ರಂತಹ ಅಪರೂಪದ ಮಾಣಿಕ್ಯಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕಶಕ್ತಿಯಾಗಿದ್ದಾರೆ ಎಂದರು.ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಮಾದರಿ ಕೃಷಿಕರಾಗಿ ಕೆಲಸ ಮಾಡಿರುವ ತಮ್ಮಪ್ಪ ಅವರ ಜೀವನದ ಆದರ್ಶಗಳನ್ನು ಇಂದಿನ ಯುವಜನರು ಕಡ್ಡಾಯವಾಗಿ ಪಾಲಿಸುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗಬೇಕು ಎಂದು ಕರೆ ನೀಡಿದರು.
ಅಭಿನಂದನೆ ಸ್ವೀಕರಿಸಿ ತಮ್ಮಪ್ಪಶೆಟ್ಟಿ ಮಾತನಾಡಿ, ನಮ್ಮ ಕಾಲವೇ ಬೇರೆ ಇಂದಿನ ಕಾಲವೇ ಬೇರೆಯಾಗಿದೆ. ನಾವೆಲ್ಲರೂ ತಂದೆ ತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸಿ ಸಂಸ್ಕಾರದ ಹಿಂದೆ ಹೋಗುತ್ತಿದ್ದೆವು. ಆದರೆ, ಇಂದಿನ ಪರಿಸ್ಥಿತಿ ಹಾಗೂ ವಾತಾವರಣವೇ ಅದಲು ಬದಲಾಗಿದೆ ವಿಷಾದಿಸಿದರು.ಇಂದಿನ ಯುವಜನರು ಮಾನವತೆ ಹಾಗೂ ಸೇವೆಗೆ ಬೆಲೆ ನೀಡುತ್ತಿಲ್ಲ. ಶ್ರಮಪಡದೇ ಶ್ರೀಮಂತರಾಗಬೇಕು ಎಂಬ ಹಗಲುಗನಸನ್ನು ಬೆನ್ನುಹತ್ತಿದ್ದಾರೆ. ಇದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಎಂಜಿನಿಯರ್ ಈರಣ್ಣಗೌಡ, ಡಿಸಿಸಿ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಬಸವರಾಜು, ಹೊಸಹೊಳಲು ವಿಶ್ವನಾಥ, ಪಾಂಡುರಂಗ, ಶ್ರೀನಿವಾಸಮೂರ್ತಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು.