ಸಾರಾಂಶ
ಭಟ್ಕಳ: ತಾಲೂಕಿನಾದ್ಯಂತ ಭಾನುವಾರ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತ ಆಗಿದ್ದು ಒಂದು ಕಡೆ ಆದರೆ, ಮತ್ತೊಂದು ಕಡೆ ವ್ಯಾಪಕ ಮಳೆಗೆ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ, ಸಂಶುದ್ದೀನ ವೃತ್ತ ಸೇರಿದಂತೆ ವಿವಿಧ ರಸ್ತೆಗಳು ಮತ್ತೆ ಹೊಳೆಯಾದ ಪರಿಣಾಮ ಜನ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.
ಸಮರ್ಪಕ ಗಟಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುವಂತಾಗಿ ತೊಂದರೆ ಆಗುತ್ತಿರುವುದಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಭಟ್ಕಳದಲ್ಲಿ ಮಳೆಗಾಲದ ಸಮಸ್ಯೆ ಬಗೆಹರಿಸಲು ಇನ್ನೆಷ್ಟು ವರ್ಷ ಬೇಕು ಎಂದು ಜನರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸುತ್ತಿದ್ದಾರೆ. ಭಾನುವಾರ ಮಳೆಯ ಆರ್ಭಟ ನೋಡಿದ ಜನತೆ 2022ರ ಆಗಸ್ಟ್ 2ರಂದು ಸುರಿದ ಮಹಾಮಳೆಯ ನೆನಪನ್ನು ಮಾಡಿಕೊಂಡು ಭಯಪಟ್ಟು ಅಂತಹ ಪರಿಸ್ಥಿತಿ ಮತ್ತೆ ಬರದೇ ಇರಲಿ ಎಂದು ಹೇಳುತ್ತಿರುವುದು ಕೇಳಿಬಂತು. ಭಾನುವಾರ ಬೆಳಗ್ಗೆಯಿಂದ ಸಂಜೆಯ ವರೆಗೂ ಒಂದೇ ಸಮನೇ ಮಳೆ ಸುರಿದಿದ್ದರಿಂದ ಎಲ್ಲ ಕಡೆ ನೀರು ಹರಿಯುವಂತಾಗಿತ್ತು.ಪಟ್ಟಣದ ಹಳೇ ಬಸ್ ನಿಲ್ದಾಣ, ಮುಖ್ಯ ರಸ್ತೆ, ಮಾರಿಕಟ್ಟೆ ಮುಂತಾದ ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಭಾನುವಾರ ಬೆಳಗ್ಗೆ ವರೆಗೆ 39.4 ಮಿಮೀ ಮಳೆಯಾಗಿದ್ದು, ಇಲ್ಲಿಯ ವರೆಗೆ ಒಟ್ಟೂ ೧೮೦೮.೦೨ ಮಿಮೀ. ಮಳೆಯಾದಂತಾಗಿದೆ. ಭಾರೀ ಮಳೆಗಾಳಿಗೆ ವಿವಿಧ ಭಾಗದ 4 ಮನೆಗಳಿಗೆ ಭಾಗಶಃ ಹಾನಿಯಾದ ಬಗ್ಗೆ ವರದಿಯಾಗಿದೆ. ಮಳೆಯ ಜತೆ ಭಾರೀ ಗಾಳಿಯೂ ಬೀಸುತ್ತಿರುವುದರಿಂದ ಗ್ರಾಮಾಂತರ ಭಾಗದಲ್ಲಿ ನೂರಾರು ಅಡಕೆ ಮರಗಳು ತುಂಡಾಗಿ ಬಿದ್ದಿದೆ. ನಾಟಿ ಮಾಡಿದ ತಗ್ಗು ಪ್ರದೇಶದ ಗದ್ದೆಗಳಿಗೂ ನೀರು ನುಗ್ಗಿದ್ದರಿಂದ ತೊಂದರೆ ಆಗಿದೆ. ಕೆಲವು ತೋಟಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನದಿ, ಹೊಳೆ, ಹಳ್ಳ, ಕೆರೆಗಳು ತುಂಬಿ ತುಳುಕುತ್ತಿದೆ.
ಹೊಳೆ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಿಂದೂ ಕಾಲನಿಯ ಮುಝಾಮಿಲ್ ಮಸೀದಿ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಂಗಿನಕಟ್ಟೆಯಲ್ಲಿ ಅದೇ ರಾಗ ಅದೇ ಹಾಡು ಎನ್ನುವಂತಾಗಿದ್ದು, ಭಾನುವಾರದ ಭಾರೀ ಮಳೆಗೆ ಮತ್ತೆ ಹೆದ್ದಾರಿ ಹೊಳೆಯಾಗಿ ವಾಹನಿಗರ ಪಟ್ಟ ಪಾಡು ಅಷ್ಟಿಷ್ಟಲ್ಲ.ಆ್ಯಂಬುಲೆನ್ಸ್, ಪೊಲೀಸ್ ಜೀಪು, ಸಾರಿಗೆ ಸಂಸ್ಥೆಯ ಬಸ್ಸು, ಆಟೋ, ಕಾರು, ದ್ವಿಚಕ್ರ ವಾಹನಗಳು, ಪಾದಚಾರಿಗಳು, ಬೈಸಿಕಲ್ ಸವಾರರು ಹೀಗೆ ಎಲ್ಲರೂ ರಂಗೀಕಟ್ಟೆ ಹೊಳೆಯನ್ನು ಕಷ್ಟಪಟ್ಟು ದಾಟುವಂತಾಯಿತು. ರಂಗೀಕಟ್ಟೆ ಹೆದ್ದಾರಿಯಲ್ಲಿ 3- 4 ಅಡಿ ನೀರು ನಿಂತಿದ್ದೇ ಇದಕ್ಕೆಲ್ಲಾ ಕಾರಣವಾಯಿತು. ಕಳೆದ ಐದಾರು ವರ್ಷಗಳಿಂದ ಇಲ್ಲಿ ಮಳೆಗಾಲದಲ್ಲಿ ಹೆದ್ದಾರಿ ಹೊಳೆಯಾಗುತ್ತಿದ್ದರೂ ಸಮಸ್ಯೆ ಮಾತ್ರ ಇನ್ನೂ ಹಾಗೆ ಇರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.