ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ತಾಮ್ರ ಶಾಸನದ ಮರುಅಧ್ಯಯನ

| Published : Dec 19 2024, 12:30 AM IST

ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ತಾಮ್ರ ಶಾಸನದ ಮರುಅಧ್ಯಯನ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು ಕಿರಿಯ ಬಸಪ್ಪ ನಾಯಕರು ಶ್ರೀಮತು ಎಡವ ಮುರಾರಿ ಕೋಟೆಕೋಲಹಲ ವಿಶುದ್ಧ ವೈದಿಕಾದ್ವೈತ ಸಿದ್ಧಾಂತ ಪ್ರತಿಷ್ಠಾಪಕ ಶಿವಗುರು ಭಕ್ತಿ ಪರಾಯಣ ಮುಂತಾದ ಬಿರುದಾಂಕಿತರಾದ ತಮ್ಮ ವಂಶದ ಹಿರಿಯರಾದ ಕೆಳದಿ ಸದಾಶಿವರಾಯ ನಾಯಕರ ಹೆಸರಿನಲ್ಲಿ ದಾನ ನೀಡಿರುವುದು ತಿಳಿದುಬರುತ್ತದೆ.

ಕನ್ನಡಪ್ರಭ ವಾರ್ತೆ ಕೋಟಇಲ್ಲಿನ ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿರುವ ತಾಮ್ರ ಶಾಸನವನ್ನು ಇಲ್ಲಿನ ಆಡಳಿತ ಮೊಕ್ತೇಸರ ತಲ್ಲೂರು ದೊಡ್ಡಮನೆ ವಸಂತ್ ಆರ್. ಹೆಗ್ಡೆ ಅವರ ಅನುಮತಿಯ ಮೇರೆಗೆ ಕುಕ್ಕೆಯ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠದ ನಿರ್ದೇಶಕ ಡಾ.ಜಿ.ವಿ ಕಲ್ಲಾಪುರ ಮತ್ತು ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮರು ಪರಿಶೀಲನೆಗೆ ಒಳಪಡಿಸಿದರು. ಶೈವ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ತಾಮ್ರಶಾಸನವು ಕೆಳದಿ ದೊರೆ ಕಿರಿಯ ಬಸಪ್ಪ ನಾಯಕ (ಸಾ.ಶ.ವ ೧೭೪೦-೫೫)ನ ಕಾಲಮಾನಕ್ಕೆ ಸೇರುತ್ತದೆ. ಕನ್ನಡ ಲಿಪಿಯ ಶಾಸನ ಇದಾಗಿದ್ದು ಮುಮ್ಮುಖದಲ್ಲಿ ೨೭ ಸಾಲುಗಳು ಹಾಗೂ ಹಿಮ್ಮುಖದಲ್ಲಿ ೧೩ ಸಾಲುಗಳನ್ನು ಒಳಗೊಂಡಿದ್ದು, ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಕೊರೆಯಲಾಗಿದೆ.

ಶಾಲಿವಾಹನ ಶಕ ವರುಷ ೧೬೬೬ನೆಯ ರುಧಿರೋದ್ಗಾರಿ ಸಂವತ್ಸರದ ಆಷಾಢ ಬಹುಳ ಪಂಚಮಿಯಲ್ಲಿ (ಸಾ.ಶ.ವ ೧೮ ಜುಲೈ ೧೭೪೪, ಬುಧವಾರ) ಕೆಳದಿ ಸದಾಶಿವರಾಯ ನಾಯಕರ ವಂಶೋಧ್ಭವರಾದ ಸೋಮಶೇಖರ ನಾಯಕ ಮತ್ತು ಚೆನ್ನಮ್ಮಾಜಿಯವರ ಮೊಮ್ಮಗರಾದ, ಹಿರಿಯ ಬಸವಪ್ಪ ನಾಯಕರ ಮಗ, ಸೋಮಶೇಖರ ನಾಯಕರ ಸಹೋದರ, ವೀರಭದ್ರ ನಾಯಕರ ಮಗ ಬಸವಪ್ಪ ನಾಯಕರು (ಕಿರಿಯ ಬಸಪ್ಪ ನಾಯಕರು) ತಮ್ಮ ತಾಯಿ ಮಲ್ಲಮ್ಮಾಜಿಯವರ ಹೆಸರಿನಲ್ಲಿ ಬಿದನೂರಿನ ಹೊಸಪೇಠೆಯಲ್ಲಿ ಡಂಬಳ ಮಠದ ಗುರುಗಳಾದ ಫಕೇರ ದೇವರಿಗೆ ಕಟ್ಟಿಸಿಕೊಟ್ಟ ಸ್ವತಂತ್ರ ಮಠಕ್ಕೆ ಬಿಟ್ಟ ಭೂದಾನ ಶಾಸನ ಇದಾಗಿದೆ. ಲಿಂಗಣ್ಣ ಕವಿಯ ‘ಕೆಳದಿನೃಪವಿಜಯಂ’ಎಂಬ ಕಾವ್ಯದಲ್ಲಿ ಇದಕ್ಕೆ ಸಂಬಂಧಪಟ್ಟ ವಿವರಗಳಿದ್ದು, ವೇಣುಪುರ ಅಂದರೆ ಬಿದಿರೂರು ಮಧ್ಯದಲ್ಲಿದ್ದ ಬಾಳೆಯಕೊಪ್ಪದ ಪಶ್ಚಿಮ ದಿಕ್ಕಿನಲ್ಲಿ ಸ್ವತಂತ್ರವಾದ ಮಠವನ್ನು ಕಿರಿಯ ಬಸಪ್ಪ ನಾಯಕರು ಕಟ್ಟಿಸಿರುತ್ತಾರೆ. ಆ ಸ್ಥಳಕ್ಕೆ ‘ಭದ್ರರಾಜಪುರ’ ಎಂದು ಹೆಸರಿಟ್ಟು ಡಂಬಳದ ಸಿದ್ಧೇಶ್ವರ ದೇವರ ಗದ್ದುಗೆಯ ತೋಂಟದ ಸ್ವಾಮಿಗಳಿಗೆ ಈ ಮಠವನ್ನು ದಾನವಾಗಿ ನೀಡಿರುತ್ತಾರೆ. ಹಾಗಾಗಿ ಪತ್ತೆಯಾದ ಈ ಶಾಸನವು ಪ್ರಮುಖವಾಗಿ ಡಂಬಳ ಸಿದ್ಧೇಶ್ವರ ದೇವರ ಗದ್ದುಗೆ ಮಠಕ್ಕೆ ಬಿದಿರೂರಿನಲ್ಲಿ ಕೊಟ್ಟಿರುವ ಭೂ ದಾನ ಶಾಸನವಾಗಿದ್ದು, ಇದಕ್ಕೆ ಪೂರಕವಾಗಿ ಈಗಲೂ ಬಿದಿರೂರಿನಲ್ಲಿ (ನಗರ) ಮಠದ ಅವಶೇಷಗಳನ್ನು ಕಾಣಬಹುದು.

ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು ಕಿರಿಯ ಬಸಪ್ಪ ನಾಯಕರು ಶ್ರೀಮತು ಎಡವ ಮುರಾರಿ ಕೋಟೆಕೋಲಹಲ ವಿಶುದ್ಧ ವೈದಿಕಾದ್ವೈತ ಸಿದ್ಧಾಂತ ಪ್ರತಿಷ್ಠಾಪಕ ಶಿವಗುರು ಭಕ್ತಿ ಪರಾಯಣ ಮುಂತಾದ ಬಿರುದಾಂಕಿತರಾದ ತಮ್ಮ ವಂಶದ ಹಿರಿಯರಾದ ಕೆಳದಿ ಸದಾಶಿವರಾಯ ನಾಯಕರ ಹೆಸರಿನಲ್ಲಿ ದಾನ ನೀಡಿರುವುದು ತಿಳಿದುಬರುತ್ತದೆ.

ಶಾಸನ ಶೋಧನೆಯಲ್ಲಿ ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಹಾಗೂ ಮಂಜುನಾಥ ನಂದಳಿಕೆ ಅವರು ಸಹಕಾರ ನೀಡಿದರು.