ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಉದ್ಯಮಿಗಳ ವಿರೋಧಕ್ಕೆ ಖಂಡನೆ

| Published : Jul 19 2024, 12:50 AM IST

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಉದ್ಯಮಿಗಳ ವಿರೋಧಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ವಲಯಗಳ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಮಂಡಿಸಲು ಮುಂದಾಗುವ ವೇಳೆಗೆ ಕೆಲ ಉದ್ಯಮಿಗಳು ವಿರೋಧ ಮಾಡಿರುವುದಕ್ಕೆ ತಡೆ ನೀಡಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸರ್ಕಾರದ ನಿರ್ಧಾರಕ್ಕೆ ಕೆಲ ಉದ್ಯಮಿಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ವಿವಿಧ ಕನ್ನಡ ಪರ ಸಂಘಟನೆಗಳು ಖಂಡಿಸಿವೆ.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ಗುರುವಾರ ಸಭೆ ನಡೆಸಿದ ಕನ್ನಡ ಸಾಹಿತ್ಯ ಪರಿಷತ್, ಡಾ.ರಾಜ್ ಕುಮಾರ್ ಕಲಾ ಸಂಘ, ಸರ್.ಎಂ.ವಿ.ವಿಶ್ವೇಶ್ವರಯ್ಯ ಯುವಕರ ಬಳಗ, ರಾ.ಶಿ.ರಾ.ಪು ಸೇವಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ವಿಧೇಯಕ ಮುಂದೂಡಿರುವ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗಲಿದೆ ಎಂಬ ನಾಡನುಡಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಳ್ಳಲು ಮುಂದಾಗಿರುವ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದಸರಿಯಬಾರದು ಎಂದು ಆಗ್ರಹಿಸಿದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ರಾಜ್ಯದಲ್ಲಿನ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಖಾಸಗಿ ವಲಯಗಳ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಮಂಡಿಸಲು ಮುಂದಾಗುವ ವೇಳೆಗೆ ಕೆಲ ಉದ್ಯಮಿಗಳು ವಿರೋಧ ಮಾಡಿರುವುದಕ್ಕೆ ತಡೆ ನೀಡಿರುವುದು ಸರಿಯಲ್ಲ. ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿಯೇ ಮಸೂದೆ ಮಂಡಿಸಬೇಕು ಎಂದು ಮನವಿ ಮಾಡಿದರು.

ಡಾ.ಸರೋಜಿನಿ ಮಹಷಿ ಆಯೋಗವು ಸಹ ಮೀಸಲಾತಿ ಒದಗಿಸಬೇಕು ಎಂದು ಹೇಳಿತ್ತು. ಈ ಬಗ್ಗೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಹೋರಾಟಗಳು ಸರ್ಕಾರಗಳ ಗಮನ ಸೆಳೆಯುತ್ತಿದ್ದರು. ಆದರೆ, ಇಲ್ಲಿಯವರೆಗಿನ ಕುಂಟು ನೆಪವನ್ನು ಬದಿಗೆ ಸರಿಸಿ ಮಸೂದೆ ಮಂಡನೆಗೆ ಮುಂದಾಗಿ ಅಂಥ ಹೋರಾಟಕ್ಕೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಕೂಡಲೇ ಮಸೂದೆ ಮಂಡನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ವಿವಿಧ ಸಂಘಟನೆಗಳ ಮಾದೇಗೌಡ, ಚಿಕ್ಕಮರಿಗೌಡ, ಕೃಷ್ಣ, ಮಹದೇವು, ಪುಟ್ಟಸ್ವಾಮಿ, ಮುದ್ದಯ್ಯ, ಮಹದೇವಪ್ಪ, ಶಿವರಾಜು, ಉಮೇಶ್ ಇದ್ದರು.

ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವಿಧೇಯಕ ತಡೆಗೆ ಆಕ್ರೋಶ

ಮಂಡ್ಯ: ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕವನ್ನು ಅಪಮಾನಿಸಿದ್ದಾರೆ ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಗ್ರಾಮೀಣ ಭಾಗದ ಲಕ್ಷಾಂತರ ನಿರುದ್ಯೋಗಿಗಳಿಗೆ ಭರವಸೆ ಮೂಡಿಸಿದ್ದ ಕನ್ನಡಿಗರ ಉದ್ಯೋಗ ಮೀಸಲಾತಿಯ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸಬೇಕು. ಇಲ್ಲವೇ, ಕನ್ನಡಿಗರ ಆಕ್ರೋಶ ಎದುರಿಸಲು ಸಿದ್ಧವಾಗಬೇಕು ಎಂದು ಎಚ್ಚರಿಸಿದ್ದಾರೆ.ವಿಧೇಯಕದ ಕುರಿತು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಬೀಗಿದ್ದ ಸಚಿವರು ಕೆಲವೇ ಸಮಯದ ಅಂತರದಲ್ಲಿ ಐತಿಹಾಸಿಕ ವಿಧೇಯಕ ಹಿಂತೆಗೆದುಕೊಂಡ ಬಗ್ಗೆ ಕನ್ನಡಿಗರ ಮುಂದೆ ತಲೆಎತ್ತಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿಗಳು ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮೂರು ಬಾರಿ ಯೂ ಟರ್ನ್ ಹೊಡೆದು ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ನಿರ್ಧಾರದ ಹಿಂದೆ ನಾಡಿನ ಆತ್ಮಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ ಎಂದು ಟೀಕಿಸಿದ್ದಾರೆ.ಸರ್ಕಾರದ ಈ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಜೈ ಕರ್ನಾಟಕ ಪರಿಷತ್ತು ಖಂಡಿಸುತ್ತದೆ. ಈ ನೆಲದಲ್ಲಿ ಬದುಕು ಮಾಡುತ್ತಾ ಕನ್ನಡ ಕಲಿತವರೆಲ್ಲ ಕನ್ನಡಿಗರೇ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಬೇಡಿಕೆ ಈಡೇರಿಕೆಗಾಗಿ ಪ್ರಸಕ್ತ ಅಧಿವೇಶನದಲ್ಲೆ ವಿಧೇಯಕ ಮಂಡಿಸಲಿ ಎಂದು ಎಸ್.ನಾರಾಯಣ್ ಆಗ್ರಹಿಸಿದ್ದಾರೆ.