ಸಾರಾಂಶ
ಶಿರಹಟ್ಟಿ: ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸಲ್ಮಾನ ಬಾಂಧವರು ಶನಿವಾರ ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಏಕತೆ ಮತ್ತು ಭಕ್ತಿಯ ಮನೋಭಾವ ಮೂಡಿಸುವ ಹಬ್ಬದ ಅರ್ಥವನ್ನು ಧರ್ಮಗುರು ಸಾರಿದರು. ಬೆಳಗ್ಗೆ ಸಾವಿರಾರು ಮುಸ್ಲಿಂ ಬಾಂಧವರು ಅಲ್ಲಾಹನ ನಾಮ ಪಠಣದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರಲ್ಲದೇ, ಈದ್ಗಾ ಮೈದಾನಕ್ಕೆ ತೆರಳಿ ಧಾರ್ಮಿಕ ವಿಧಾನಗಳಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಹಿರಿಯರು, ಕಿರಿಯರೆಂಬ ವಯಸ್ಸಿನ ಭೇದವಿಲ್ಲದೆ ಪರಸ್ಪರರು ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆಯಲ್ಲಿ ಆಗಮಿಸಿದ್ದ ಮುಸ್ಲಿಂ ಧರ್ಮಗುರು ಮೌಲಾನ ಮಜರಖಾನ ಪಠಾಣ ಮಾತನಾಡಿ, ಮುಸ್ಲಿಂ ಸಮಾಜದ ಪ್ರತಿಯೊಬ್ಬರು ಬದುಕಿನಲ್ಲಿ ನಮಾಜ್, ಹಜ್, ರೋಜಾ, ಜಕಾತ, ಸಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಸಾಧ್ಯ ಎಂದು ಸಂದೇಶ ನೀಡಿದರು. ಹಬ್ಬದ ಸಂದೇಶ ಸಾರಿ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ತ್ಯಾಗ, ಸಮರ್ಪಣೆ, ಸಹೋದರತ್ವವನ್ನು ಎತ್ತಿ ತೋರಿಸುವ ಸಂದೇಶವನ್ನು ಬಕ್ರೀದ್ ಹಬ್ಬ ನೀಡುತ್ತದೆ ಎಂದರು. ವಿಶ್ವದ ಕೋಟ್ಯಂತರ ಮುಸಲ್ಮಾನರ ನೆಚ್ಚಿನ ಹಬ್ಬವಾಗಿದೆ. ಸಾಮೂಹಿಕ ಪ್ರಾರ್ಥನೆ ನಡೆಸಿ ಬಡವರಿಗೆ ಅಕ್ಕಿ, ಬಟ್ಟೆ, ಹಣ ದಾನ ಮಾಡಿ ಸಾರ್ಥಕತೆ ಹೊಂದುವುದು ಸಂಪ್ರದಾಯವಾಗಿದೆ. ನಾಡಿನ ರೈತರು ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಕಾಲ ಕಾಲಕ್ಕೆ ಮಳೆಯಾಗುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು.ಚಾರಿತ್ರಿಕ ಹಿನ್ನೆಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸುವ ಈ ಹಬ್ಬ ಸಮಕಾಲೀನ ಜಗತ್ತಿನ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶ ಸಾರುತ್ತದೆ. ಬಕ್ರೀದ್ ಹಬ್ಬ ಬಲಿಕೊಡುವ ಹಬ್ಬ ಎನ್ನುವುದಕ್ಕಿಂತಲೂ ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸುವ ಹಬ್ಬವಾಗಿದೆ ಎಂದು ವಿವರಿಸಿದರು.ತ್ಯಾಗದ ಶಕ್ತಿ ಉದಾರತೆಯ ಆಶೀರ್ವಾದವನ್ನು ಈ ಹಬ್ಬ ನೆನಪಿಸುತ್ತದೆ. ನಿಸ್ವಾರ್ಥ ಮತ್ತು ಸೇವಾ ಮನೋಭಾವವು ದೇಶದ ಪ್ರಜಾಪ್ರಭುತ್ವ ಮತ್ತು ವಿಭಿನ್ನತೆಯಲ್ಲಿ ಏಕತೆಯಲ್ಲಿ ವಿಶ್ವಾಸ ಹೊಂದಿರುವ ಭಾರತದ ಒಗ್ಗಟ್ಟನ್ನು ಇನ್ನಷ್ಟು ಭದ್ರಗೊಳಿಸುತ್ತದೆ ಎಂದರು. ಕುರೇಶಿ ಮನಿಯಾರ, ಅಬ್ದುಲಗನಿ ಕುಬುಸದ, ಚಾಂದಸಾಬ ಮುಳಗುಂದ, ಹುಮಾಯೂನ ಮಾಗಡಿ, ಇಸಾಕ ಆದ್ರಳ್ಳಿ, ಹಸರತ ಢಾಲಾಯತ, ಹಮೀದ ಸನದಿ, ಶವಕತ ಮನಿಯಾರ, ನಜೀರ ಡಂಬಳ, ಬುಡನಶ್ಯಾ ಮಕಾನದಾರ, ಗೌಸುಸಾಬ ಮುಳಗುಂದ, ಬಾಬು ತಹಸೀಲ್ದಾರ, ಮಹಬೂಬ ಮಾಚೇನಹಳ್ಳಿ, ರಾಜೇಸಾಬ ಆದ್ರಳ್ಳಿ, ರಫೀಕ್ ಆದ್ರಳ್ಳಿ ಸೇರಿ ಅನೇಕರು ಇದ್ದರು.