ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ಏಳು ವರ್ಷಗಳಿಂದಲೂ ಕಗ್ಗಂಟಾಗಿದ್ದ ತಾಲೂಕಿನ ಶಿವಪುರ-ಬೊಮ್ಮಲಾಪುರ ಮುಖ್ಯ ರಸ್ತೆಯ ಸಮಸ್ಯೆಗೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಪರಿಹಾರ ಹುಡುಕಿ, ಅತೀ ಶೀಘ್ರದಲ್ಲೇ ಹೊಸ ಪರ್ಯಾಯ ರಸ್ತೆಗೆ ಚಾಲನೆ ನೀಡಲಿದ್ದಾರೆ.ತಾಲೂಕಿನ ಬೆಳವಾಡಿ ಗ್ರಾಮದ ರೈತ ಮಂಜುನಾಥ್ ಅವರ ಜಮೀನಿನಲ್ಲಿ ರಸ್ತೆ ಮಾಡಲಾಗಿದೆ. ನಮ್ಮ ಜಮೀನಿನಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಡಾಂಬರೀಕರಣಕ್ಕೆ ಬಿಡುವುದಿಲ್ಲ. ನಮಗೆ ಸೇರಿದ ಜಾಗ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದರಿ ರಸ್ತೆಯಲ್ಲಿ ಡಾಂಬರೀಕರಣಕ್ಕೆ ರೈತ ಮಂಜುನಾಥ್ ಅವಕಾಶ ಕೊಟ್ಟಿಲ್ಲ. ಜೊತೆಗೆ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಆಗುವುದಿಲ್ಲ ಎಂದು ಜನರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.
ಸಾರ್ವಜನಿಕರ ಆಕ್ರೋಶ ಹಾಗೂ ರೈತರ ಜಮೀನಿನಲ್ಲಿ ರಸ್ತೆಗೆ ಅವಕಾಶ ನೀಡದ ಕಾರಣ ಜೊತೆಗೆ ನ್ಯಾಯಾಲಯದ ಮೊರೆ ಹೋದ ರೈತರು ಬದಲಿ ರಸ್ತೆಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಹಸೀಲ್ದಾರ್ ಜಾಗ ಗುರುತಿಸಲು ಸೂಚನೆ ನೀಡಿದರು. ಇದರ ಬೆನ್ನಲ್ಲೇ ತಹಸೀಲ್ದಾರ್ ಟಿ.ರಮೇಶ್ ಬಾಬು ಬೊಮ್ಮಲಾಪುರ ಮುಖ್ಯ ರಸ್ತೆ ಬದಿಯಲ್ಲಿ ಸರ್ಕಾರಿ ಜಾಗವಿರುವುದನ್ನು ಖಚಿತ ಪಡಿಸಿದ ಬಳಿಕ ಸರ್ವೇ ನಡೆಸಿ ಪರ್ಯಾಯ ರಸ್ತೆ ಜಾಗ ಗುರುತಿಸಿದರು. ಸರ್ಕಾರಿ ಜಾಗ ಸುಮಾರು 1.1/4 ಕಿಮಿ ಉದ್ದ, 40 ಅಡಿಯಷ್ಟು ಅಗಲದಲ್ಲಿ ರಸ್ತೆ ಮಾಡಬಹುದು ಎಂದು ಶಾಸಕರ ಗಮನಕ್ಕೆ ತಹಸೀಲ್ದಾರ್ ತಂದಾಗ ಶಾಸಕರು ಪರ್ಯಾಯ ರಸ್ತೆ ಮಾಡಿಸಿ ಎಂದು ಮುದ್ರೆ ಒತ್ತಿದ್ದಾರೆ. ಇದಾದ ಬಳಿಕ ಸರ್ಕಾರಿ ಜಾಗದಲ್ಲಿದ್ದ 32 ಕಾಡು ಮರಗಳನ್ನು ತೆರವುಗೊಳಿಸಬೇಕು ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಬಫರ್ ಜೋನ್ ಅರಣ್ಯ ಇಲಾಖೆಗೆ ಪತ್ರ ಬರೆದ ಕಾರಣ ಅರಣ್ಯ ಇಲಾಖೆ ಅ.18ರ ಶುಕ್ರವಾರ 32 ಮರಗಳಿಗೆ ಹರಾಜು ಹಾಕಿದ್ದಾರೆ.ಹರಾಜುದಾರರು ಮರ ಕಡಿತ ಕೂಡಲೇ 1.1/4 ಕಿಮೀ ಉದ್ದ ಹಾಗೂ 40 ಅಡಿ ಅಗಲ ರಸ್ತೆ ಮಾಡಲು ಎಲ್ಲಾ ಸಿದ್ಧತೆ ತಾಲೂಕು ಆಡಳಿತ ಮಾಡಿಕೊಂಡಿದೆ ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಕನ್ನಡಪ್ರಭಕ್ಕೆ ತಿಳಿಸಿದರು. ಸದ್ಯಕ್ಕೀಗ ಸರ್ಕಾರಿ ಜಾಗದಲ್ಲಿ 1.1/4 ಕಿಮಿ ಉದ್ದದ ಮಣ್ಣಿನ ಪರ್ಯಾಯ ರಸ್ತೆ ಮಾಡಲಿದ್ದು, ಬಳಿಕ ಡಾಂಬರೀಕರಣ ರಸ್ತೆಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೊಮ್ಮಲಾಪುರ ಮುಖ್ಯ ರಸ್ತೆಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಹಲವು ದಶಕಗಳ ಹಿಂದೆ ರಸ್ತೆ ನೇರವಾಗಿರಲಿ ಎಂದು ರೈತರ ಜಮೀನಿನಲ್ಲಿ ರಸ್ತೆ ಮಾಡಲಾಗಿತ್ತು. ರೈತರು ಈಗ ರಸ್ತೆ ಜಾಗ ನಮಗೆ ಸೇರಬೇಕು ಎಂದು ನ್ಯಾಯಾಲಯದ ಮೊರೆ ಹೋಗಿರುವ ಕಾರಣ ಪರ್ಯಾಯ ರಸ್ತೆ ಮಾಡಲು ಹೊರಟಿದ್ದೇವೆ ಎಂದು ಸ್ಪಷ್ಟಪಡಿಸಿದರು.ಸಂಪರ್ಕ ಕೊಂಡಿ ಈ ರಸ್ತೆ!ತಾಲೂಕಿನ ಬೊಮ್ಮಲಾಪುರ ಮುಖ್ಯ ರಸ್ತೆ ಈ ಭಾಗದ ಬೆಳವಾಡಿ, ಬೊಮ್ಮಲಾಪುರ, ಅಂಕಹಳ್ಳಿ, ಬಾಚಹಳ್ಳಿ, ಶೆಟ್ಟಹಳ್ಳಿ, ಯರಿಯೂರು, ಗುಡಿಮನೆ, ಕುಂದಕೆರೆ, ವಡ್ಡೆಗರೆ ಗ್ರಾಮಗಳಿಗೆ ಸಂಪರ್ಕದ ಕೊಂಡಿಯಾಗಿತ್ತು. ಮೇಲ್ಕಂಡ ಗ್ರಾಮಗಳ ಜನರು ಕೃಷಿ ಉತ್ಪನ್ನ ಸಾಗಿಸಲು ಈ ರಸ್ತೆಯ ಮಾರ್ಗದಲ್ಲಿ ಸಂಚರಿಸಬೇಕು ಜೊತೆಗೆ ಅಗತ್ಯ ವಸ್ತುಗಳ ಸಾಗಿಸಲು ಈ ರಸ್ತೆಯೇ ಪ್ರಮುಖ ರಸ್ತೆಯಾಗಿತ್ತು. ತಾಲೂಕಿನ ಬೆಳವಾಡಿ ಗ್ರಾಮದ ರೈತರೊಬ್ಬರ ಜಮೀನಿನ 20 ಮೀಟರ್‌ಗಳಷ್ಟು ಅಂತರದ ರಸ್ತೆ ನಿರ್ಮಾಣ ಕಳೆದ ಏಳು ವರ್ಷಗಳಿಂದಲೂ ರೈತರೊಬ್ಬರ ತಕರಾರಿನಿಂದ ನೆನಗುದಿಗೆ ಬಿದ್ದಿತ್ತು.
ಕೆಸರುಮಯ ರಸ್ತೆ: ರಸ್ತೆ ಅಭಿವೃದ್ಧಿಗಾಗಿ ಭೂಮಿ ಸಮತಟ್ಟು ಮಾಡಲಾಗಿತ್ತು. ಇದಕ್ಕೆ ಜಮೀನಿನ ರೈತರು ಸಮ್ಮತಿ ಇರಲಿಲ್ಲ. ಇದರಿಂದ ರಸ್ತೆಗೆ ಮಣ್ಣು ಎತ್ತರವಾಗಿ ಹಾಕಿಲ್ಲದ ಕಾರಣ ರಸ್ತೆಯಲ್ಲಿ ಮಳೆ ನೀರು ನಿಂತು ಕೆಸರಾಗುತ್ತದೆ. ಜೋರು ಮಳೆ ಬಂದರೆ ರಸ್ತೆ ಸಂಪರ್ಕ ಕಡಿತಗೊಂಡು ಈ ರಸ್ತೆಯಲ್ಲಿ ವಾಹನಗಳು ಹೋಗುತ್ತಿರಲಿಲ್ಲ. ಬದಲಾಗಿ ಚೌಡಹಳ್ಳಿ, ಹುಂಡೀಪುರ, ಕಬ್ಬೇಪುರ ಮಾರ್ಗವಾಗಿ ಬಳಸಿಕೊಂಡು ಜನರು ತೆರಳುತ್ತಿದ್ದರು.