ಸಾರಾಂಶ
ಹಿರಿಯೂರು: ನಗರದ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ಥಿ ಕಾಮಗಾರಿಯ ಜೀವಿತಾವಧಿಯು, ಕೇವಲ 3 ದಿನಗಳು ಮಾತ್ರ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆಸಿ. ಹೊರಕೇರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಅವ್ಯವಸ್ಥೆಗಳ ಬಗ್ಗೆ ಪೌರಾಯುಕ್ತರಿಗೆ ಮನವಿ ಮಾಡಿರುವ ಅವರು, ನಗರಸಭೆ ವ್ಯಾಪ್ತಿಯ ವಾಣಿವಿಲಾಸ ಸಾಗರ ಬಲದಂಡೆ ಕಾಲುವೆಯ ಬಳಿ , ಬೀದರ್ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯಲ್ಲಿ ಕಾಟಾಚಾರದ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಹೋಗುತ್ತಿದ್ದು ಮತ್ತೆ ಗುಂಡಿ ಮಯವಾಗಿದೆ . ವಾಹನ ಸವಾರರು, ಪಾದಚಾರಿಗಳು, ಶಾಲಾ ವಿದ್ಯಾರ್ಥಿಗಳು, ಪೋಷಕರು ಕಿತ್ತು ಹೋಗಿರುವ, ಗುಂಡಿಮಯವಾಗಿರುವ ರಸ್ತೆಯಲ್ಲಿಯೇ ಸಂಚರಿಸುವಂತಾಗಿದೆ ಎಂದರು. ರಸ್ತೆಯಲ್ಲಿ ಭಾರಿ ವಾಹನಗಳು ಸಹ ಸಂಚರಿಸುತ್ತಿವೆ. ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಬಿದ್ದು ಗಾಯಗೊಳ್ಳುತ್ತಿದ್ದು, ಕಳೆದ ತಿಂಗಳು ಜಡಿಮಳೆಗೆ ಕಿತ್ತು ಗುಂಡಿಮಯವಾಗಿದ್ದ ರಸ್ತೆಗೆ ಕಾಟಾಚಾರಕ್ಕೆ ಜಲ್ಲಿ ಮಣ್ಣು ತುಂಬಿದ್ದಾರೆ. ಅದು ಕೇವಲ ಒಂದು ವಾರದಲ್ಲಿಯೇ ಸಂಪೂರ್ಣ ಹಾಳಾಗಿದೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುವ ಅಪಾಯದಲ್ಲಿ ಸಾವಿರಾರು ಜನ ಪ್ರಯಾಣಿಕರು ಹರಸಾಹಸ ಪಟ್ಟು ಈ ರಸ್ತೆ ಕ್ರಮಿಸಬೇಕಿದೆ. ನಗರಸಭೆ ಅಧಿಕಾರಿಗಳು ನಿರ್ಲಕ್ಷ ತೋರದೇ ಕೂಡಲೇ ಗುಣಮಟ್ಟದ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಅವರು ಕೋರಿದ್ದಾರೆ.