ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ಕರ್ನಾಟಕದಲ್ಲಿ ಸಾರಿಗೆ ಇಲಾಖೆಯಿಂದ ಮೂಲಭೂತ ಸೌಕರ್ಯವುಳ್ಳ ವಿಶ್ರಾಂತಿ ದಾಮ ಆರಂಭಿಸಬೇಕು ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮುಂತಾದ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಬೆಂಗಳೂರಿಗೆ ಸಂಚರಿಸುತ್ತಾರೆ. ಅದರಲ್ಲೂ ರಾತ್ರಿ ವೇಳೆ ಸಂಚರಿಸುವಾಗ ಸಾರಿಗೆ ಇಲಾಖೆ ಬಸ್‌ಗಳು ಊಟ, ಉಪಹಾರಕ್ಕಾಗಿ ನಿಲ್ಲುವ ಖಾಸಗಿ ಹೋಟೆಲ್ ಮತ್ತಿತರ ಸ್ಥಳಗಳಲ್ಲಿ ಸೂಕ್ತವಾದ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಅಲ್ಲದೇ, ಅಲ್ಲಿ ದೊರೆಯುವ ಖಾದ್ಯ ಪದಾರ್ಥಗಳ ಬೆಲೆಯೂ ಹೆಚ್ಚಿರುತ್ತದೆ. ಮತ್ತೊಂದೆಡೆ ಕೆಲವು ಖಾಸಗಿ ಬಸ್‌ಗಳು ಅಲ್ಲಲ್ಲಿ ಅವರದೇ ಆದ ಬಸ್ ನಿಲ್ದಾಣ, ಶೌಚಾಲಯಗಳನ್ನು ಹೊಂದಿವೆ. ಹೀಗಾಗಿ, ರಾತ್ರಿ ವೇಳೆ ತಡವಾಗಿ ಹೊರಡುವ ಸರ್ಕಾರಿ ಬಸ್‌ಗಳು ಮಾರ್ಗ ಮಧ್ಯ ಅಲ್ಪ ವಿಶ್ರಾಂತಿಗಾಗಿ ನಿಲ್ಲಲು ಸ್ವಂತ ವಿಶ್ರಾಂತಿ ಧಾಮಗಳಿಲ್ಲ. ಮೇಲಾಗಿ, ಉತ್ತರ ಕರ್ನಾಟಕದ ಈ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಬಹುತೇಕ ಬಸ್‌ಗಳು ದೊಡ್ಡ ಊರುಗಳ ಬಸ್ ನಿಲ್ದಾಣಕ್ಕೂ ಹೋಗುವುದಿಲ್ಲ. ಹೀಗಾಗಿ ಸ್ಲಿಪರ್ ಕೋಚ್, ಕಲ್ಯಾಣ ರಥ ಮುಂಥಾದ ಬಸ್‌ಗಳಲ್ಲಿ ಪ್ರಯಾಣಿಸುವ ಹಿರಿಯರು, ಮಹಿಳೆಯರು ಮತ್ತು ಮಕ್ಕಳ ಹಲವಾರು ಬಾರಿ ಶೌಚಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ತೆರಳುವ ಬಸ್‌ಗಳು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹಾಗೂ ಒಟ್ಟು ಪ್ರಯಾಣದ ಮಧ್ಯೆ ಅಂದರೆ, ಮಧ್ಯ ಕರ್ನಾಟಕದ ಚಿತ್ರದುರ್ಗ ಅಥವಾ ಬೇರೆ ಸ್ಥಳವೊಂದರಲ್ಲಿ ಸಾರಿಗೆ ಇಲಾಖೆಯಿಂದಲೇ ಮೂಲಭೂತ ಸೌಕರ್ಯವನ್ನೊಳಗೊಂಡ ವಿಶ್ರಾಂತಿ ಧಾಮ ಆರಂಭಿಸಬೇಕು. ಅಲ್ಲಿ, ಪ್ರಯಾಣಿಕರಿಗೆ ಕೈಗೆಟಕುವ ಬೆಲೆಯಲ್ಲಿ ಊಟ, ಉಪಹಾರ, ಚಹಾ, ಕಾಫಿ ಹಾಗೂ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಇದರಿಂದ ದೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸುನೀಲಗೌಡ ಪಾಟೀಲ್ ಮನವರಿಕೆ ಮಾಡಿದರು.ಸುನೀಲಗೌಡ ಪಾಟೀಲ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಕೆ.ಎಸ್.ಆರ್.ಟಿ.ಸಿ ಮತ್ತು ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ, ಈ ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.