ಸಂಶೋಧಕ ಒಂದೇ ಸಿದ್ಧಾಂತಕ್ಕೆ ಜೋತು ಬೀಳಬಾರದು: ಶ್ರೀನಿವಾಸಾಚಾರಿ

| Published : Mar 26 2025, 01:35 AM IST

ಸಂಶೋಧಕ ಒಂದೇ ಸಿದ್ಧಾಂತಕ್ಕೆ ಜೋತು ಬೀಳಬಾರದು: ಶ್ರೀನಿವಾಸಾಚಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಲಿಖಿತ ಆಧಾರಗಳಿಂದ ಬರೆದ ಇತಿಹಾಸ ವಾಸ್ತವಿಕತೆಗೆ ಹತ್ತಿರವಿರುತ್ತದೆ. ವಸ್ತುನಿಷ್ಠವಿಲ್ಲದೆ ಬರೆದ ದಾಖಲೆಗಳು ಅವಾಸ್ತವೆನಿಸುತ್ತವೆ.

ಕನ್ನಡ ವಿವಿಯಲ್ಲಿ ಅಖಿಲ ಕರ್ನಾಟಕ 21ನೇ ಹಸ್ತಪ್ರತಿ ಸಮ್ಮೇಳನ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಲಿಖಿತ ಆಧಾರಗಳಿಂದ ಬರೆದ ಇತಿಹಾಸ ವಾಸ್ತವಿಕತೆಗೆ ಹತ್ತಿರವಿರುತ್ತದೆ. ವಸ್ತುನಿಷ್ಠವಿಲ್ಲದೆ ಬರೆದ ದಾಖಲೆಗಳು ಅವಾಸ್ತವೆನಿಸುತ್ತವೆ. ಎಲ್ಲ ನಾಗರಿಕತೆಗಳ ಇತಿಹಾಸ ಹಸ್ತಪ್ರತಿಗಳಿಂದಲೇ ಆಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ವಿಶ್ರಾಂತ ಆಯುಕ್ತ ಶ್ರೀನಿವಾಸಾಚಾರಿ ಪಿ.ಎನ್. ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದ ವತಿಯಿಂದ ಮಂಟಪ ಸಭಾಂಗಣದಲ್ಲಿ ಆಯೋಜಿಸಿರುವ ಅಖಿಲ ಕರ್ನಾಟಕ ಇಪ್ಪತ್ತೊಂದನೆಯ ಹಸ್ತಪ್ರತಿ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಒಬ್ಬ ಸಂಶೋಧಕ ಒಂದೇ ಸಿದ್ಧಾಂತಕ್ಕೆ ಜೋತುಬಿದ್ದರೆ, ಬೇರೆ ಸಿದ್ಧಾಂತಗಳನ್ನು ಮುಕ್ತವಾಗಿ ನೋಡದಿದ್ದರೆ ಸಂಶೋಧಕ ನಿಸ್ಪಕ್ಷಪಾತವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಬಾದಾಮಿಯಲ್ಲಿ ನಡೆದ ಉತ್ಖನನದಲ್ಲಿ ವೈಷ್ಣವ ದೇವಾಲಯ, ಜೈನ ದೇವಾಲಯ, ಶೈವ ದೇವಾಲಯಗಳು ನಮ್ಮಲ್ಲಿರುವ ಧರ್ಮ ಸಹಿಷ್ಣುತೆಯನ್ನು ಸಾರಿ ಹೇಳುತ್ತವೆ ಎಂದರು.

ಹಸ್ತಪ್ರತಿ ವ್ಯಾಸಂಗ ಪುಸ್ತಕವನ್ನು ಬಿಡುಗಡೆ ಮಾಡಿದ ಪ್ರೊ. ಪಿ.ಬಿ. ಬಡಿಗೇರ ಮಾತನಾಡಿ, ಪೂರ್ವಗ್ರಹದ ಹಿನ್ನೆಲೆ ರಚನೆಯಾಗಿರುವ ಸಾಹಿತ್ಯಕ್ಕೆ ಕನ್ನಡಿ ಹಿಡಿಯಲು ಹಸ್ತಪ್ರತಿಗಳು ನೆರವಾಗುತ್ತವೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ವಿದ್ವಾಂಸ ಡಾ. ಜಿ. ಜ್ಞಾನಾನಂದ ಮಾತನಾಡಿ, ಹಸ್ತಪ್ರತಿಗಳನ್ನು ಲಘುವಾಗಿ ಪರಿಗಣಿಸಬೇಡಿ. ಹಸ್ತಪ್ರತಿಗಳಿಂದ ನಾವು ಮಾತ್ರವಲ್ಲ ನಮ್ಮ ಮಕ್ಕಳು ಕಲಿಯಲು, ಕೆಲಸ ಮಾಡಲು ಬೇಕಾದಷ್ಟಿದೆ. ಇದರಿಂದ ಜನತೆಗೆ ಹೊಸ ಆಯಾಮ, ಹೊಸ ದೃಷ್ಟಿಕೋನಗಳು ಸಿಗುತ್ತವೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮ ಮತ್ತು ಶಾಸ್ತ್ರ ಇವತ್ತಿನ ಸಮ್ಮೇಳನದಲ್ಲಿ ಒಟ್ಟಿಗೆ ಸೇರಿದೆ. ಭಾರತದ ಸಾಹಿತ್ಯ ಚರಿತ್ರೆ ಹಾಗೆಯೇ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದರೆ ಧರ್ಮ ಮತ್ತು ಜ್ಞಾನ ಜೊತೆಯಾಗಿ ಹೆಜ್ಜೆ ಹಾಕಿರುವುದು ತಿಳಿಯುತ್ತದೆ. ಜ್ಞಾನದ ಮೂಲ ಆಕರಗಳೆಂದರೆ ಹಸ್ತಪ್ರತಿಗಳಾಗಿವೆ. ಜ್ಞಾನವನ್ನು ನೋಡುವುದು, ಕೇಳುವುದು, ಓದುವುದು, ಬರೆಯುವುದರ ಮೂಲಕ ಜೊತೆಗೆ ಸ್ಪರ್ಷದ ಮೂಲಕ ಪಡೆಯುತ್ತಿದ್ದೇವೆ. ಹಸ್ತಪ್ರತಿಗಳನ್ನು ನೋಡದಿದ್ದರೆ ಜ್ಞಾನಪರಂಪರೆಯ ವೈಭವ ತಿಳಿಯಲು ಆಗುತ್ತಿರಲಿಲ್ಲ. ನಮ್ಮ ನಿರ್ಲಕ್ಷ್ಯದಿಂದ ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಕೃತಿಗಳು ಕವಿಗಳ ಕೊಂಡಿಗಳನ್ನು ಬೆಸೆಯಲು ಸಿಗುತ್ತಿಲ್ಲ. ಆಧುನಿಕತೆಯ ವೇಗದ ಧಾವಂತದಲ್ಲಿ ಅನೇಕ ಜ್ಞಾನ ಶಿಸ್ತುಗಳು ಕಾಣೆಯಾಗುತ್ತಿವೆ ಎಂದರು.

ವಿಶ್ವಬ್ರಾಹ್ಮಣ ಮೂರುಜಾವದ ಮಠದ ರಾಮಚಂದ್ರ ಸ್ವಾಮೀಜಿ, ಮಳೆಯರಾಜೇಂದ್ರ ಮಠದ ಜಗನ್ನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಡಾ. ಚಂದ್ರಶೇಖರ ಕಾಳನ್ನವರ, ಡಾ. ಲಕ್ಷ್ಮೀಕಾಂತ್‌ ಪಾಂಚಾಳ್‌ ನಿರ್ವಹಿಸಿದರು. ನಾಗರಾಜ ಪತ್ತಾರ ಮೌನೇಶ್ವರನ ವಚನ ಹಾಡಿದರು.