ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಇಲ್ಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಗುರು ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ಭಾನುವಾರ ಜಿಎಂಪಿ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಮತ್ತು ಅದ್ಧೂರಿ ಮೆರವಣಿಗೆಯೊಂದಿಗೆ ಚಾಲನೆಗೊಂಡಿತು.ಮಳೆಯ ಸಿಂಚನದ ನಡುವೆ ಶಿಕ್ಷಣ ಇಲಾಖೆಯ ವೈ. ಶಿವರಾಮಯ್ಯ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಮೆರವಣಿಗೆ ಆರಂಭಗೊಂಡಿತು. ಶಾಲೆಯ ಅತ್ಯಂತ ಹಿರಿಯ ಶಿಕ್ಷಕರಾದ ಶಿವಪ್ಪ ಅವರು ಸೇರಿದಂತೆ 80 ರಿಂದ 100 ಮಂದಿ ಶಿಕ್ಷಕರು ತೆರದವಾಹನಗಳಲ್ಲಿ ಸುಂಟಿಕೊಪ್ಪದ ಮುಖ್ಯ ರಸ್ತೆಯಲ್ಲಿ ಚಂಡೆ ಮೇಳ ಕಲ್ಲಡ್ಕದ ಗೊಂಬೆ ಕುಣಿತ ಸಹಿತ ಮರೆವಣಿಗೆಯಲ್ಲಿ ಆಗಮಿಸಿದರು. ನೂರಾರು ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು.
ಸಭಾ ಕಾರ್ಯಕ್ರಮ: ಮನುಷ್ಯನ ಬದುಕಿನಲ್ಲಿ ಒಳ್ಳೆಯತವನ್ನು ಬೆಳೆಸಿ ಕೆಟ್ಟತವನ್ನು ಅಳಿಸುವವರೇ ಗುರುಗಳು. ಅದರಲ್ಲಿಯೂ ತಾಯಿ ಅತ್ಯಂತ ಶ್ರೇಷ್ಠ ಶಿಕ್ಷಕಿ ಎಂದು ಶಾಲೆಯ ಹಳೆವಿದ್ಯಾರ್ಥಿ, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ. ಶುಕರೆ ಕಮಾಲ್ ಹೇಳಿದರು.ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆ ಬೆಳೆದು ಬಂದ ಕಾಲವನ್ನು ಪ್ರಾಚೀನ ಮದ್ಯಮ ಮತ್ತು ಆಧುನಿಕ ಕಾಲಗಳೆಂದು ವಿಶ್ಲೇಷಿದ ಅವರು ಮಠಗಳು, ಮಸೀದಿಗಳು ಮತ್ತು ಚರ್ಚ್‌ಗಳು ಪ್ರಾಚೀನಾ ಕಾಲದಲ್ಲಿ ವಿದ್ಯಾದಾನದ ಕೇಂದ್ರಗಳಾಗಿದ್ದವು. ಆಧುನಿಕ ಕಾಲಘಟ್ಟದಲ್ಲಿ ನಾವು ಕ್ರಾಂತಿಕಾರಿ ಆಲೋಚನೆಗಳನ್ನು ಹೊಂದಿದ್ದೇವೆ ಆದರೆ ಆಧುನಿಕ ಕಾಲಘಟ್ಟದಲ್ಲಿದ್ದರೂ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಕೂಡ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ಮತ್ತು ಸಭಾಂಗಣಗಳು ಇಲ್ಲ ಎಂಬ ಮನವಿಗಳು ಕೂಗುಗಳು ಕೇಳಿ ಬರುತ್ತಲೇ ಇವೆ ಎಂದು ಅವರು ವಿಷಾದಿಸಿದರು.ಮಾಜಿ ಶಾಸಕ ಹಾಗೂ ಶಾಲಾ ಕೊಠಡಿ ದಾನಿ ಕೆ.ಎಂ. ಇಬ್ರಾಹಿಂ ಮಾಸ್ಟರ್ ಮಾತನಾಡಿ, ತಾವು ಸುಂಟಿಕೊಪ್ಪ ಪುರಸಭಾ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಗಳಾಗಿದ್ದ ಆರ್.ಗುಂಡೂರಾವ್ ಮತ್ತು ಶಿಕ್ಷಣ ಸಚಿವರು ಬಂದಿದ್ದ ಸಂದರ್ಭದಲ್ಲಿ ಪ್ರೌಢಶಾಲೆಯೊಂದನ್ನು ಮಂಜೂರು ಮಾಡುವಂತೆ ಕೋರಿದ್ದೆ. ಆದರೆ ಕಟ್ಟಡ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಮಂಜೂರಾತಿಗೆ ಹಿಂದೇಟು ಹಾಕಿದ್ದರು. ಆಗ ಕಟ್ಟಡವನ್ನು ನಾವು ನಿರ್ಮಿಸಿಕೊಡುತ್ತೇವೆಂದು ಹೇಳಿ ಪ್ರೌಢಶಾಲೆ ಮಂಜೂರುಗೊಳಿಸಿದ್ದನ್ನು ಸ್ಮರಿಸಿದರು. ದಾನಿಗಳಾದ ಡಿ. ವಿನೋದ್ ಶಿವಪ್ಪ ಮತ್ತು ಡಿ. ಆನಂದ್ ಬಸಪ್ಪ ಅವರ ಸಹಕಾರದಿಂದ 3 ಕೊಠಡಿಗಳನ್ನು 2 ತಿಂಗಳ ಅವಧಿಯಲ್ಲಿ ಕಟ್ಟಿ ಪ್ರೌಢಶಾಲೆಯನ್ನು ಪ್ರಾರಂಭಿಸಿದ್ದಾಗಿ ಹೇಳಿದರು.
ಹಿರಿಯ ಹಾಗೂ ನಿವೃತ್ತ ಶಿಕ್ಷಕ ಶಿವಪ್ಪ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಎಸ್. ಸುನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿ ಸಿ. ಮಹೇಂದ್ರ ದಾನಿಗಳನ್ನು ಪರಿಚಯಿಸಿದರು. ಕೆ.ಎಂ. ಇಬ್ರಾಹಿಂ ಮಾಸ್ಟರ್, ಡಿ. ಆನಂದ ಬಸಪ್ಪ, ಡಿ. ವಿನೋದ್ ಶಿವಪ್ಪ ಮತ್ತು ಪಟ್ಟೆಮನೆ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.ಪ್ರಾಥಮಿಕ ಶಾಲೆಯ ಮಕ್ಕಳಿಂದ ಸ್ವಾಗತ ನೃತ್ಯ, ಹಳೆಯ ವಿದ್ಯಾರ್ಥಿಗಳಾದ ವೀಣಾ ಮತ್ತು ಶೋಭಾ ಪ್ರಾರ್ಥಿಸಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿ ವೆಂಕಪ್ಪ ಕೋಟ್ಯಾನ್ ಸ್ವಾಗತಿಸಿದರು. ಶಿಕ್ಷಕಿ ಲಿಯೋನಾ ಸಬಾಸ್ಟೀನ್ ನಿರೂಪಿಸಿದರು.
ಶಾಳೆಯ ಹಳೆಯ ವಿದ್ಯಾರ್ಥಿ ಪ್ರಸ್ತುತ ಬೃಹತ್ ಬೆಂಗಳೂರು ನಗರಪಾಲಿಕೆಯಲ್ಲಿ ಸಹಾಯಕ ಆಯುಕ್ತಕರಾಗಿರುವ ಪಿ.ಎಸ್. ಮಹೇಶ್ ಕುಮಾರ್, ರಾಮನಗರ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ನಾಗಮ್ಮ, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯ, ನಿವೃತ್ತ ಪ್ರಾಂಶುಪಾಲರಾದ ರಜಿನಾ ಪಿ, ಹಾಲಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗೀತಾ ಪಾರ್ಥ, ಉಪ ಪ್ರಾಂಶುಪಾಲ ಬಾಲಕೃಷ್ಣ, ಸರಕಾರಿ ಪದವಿ ಪೂರ್ವ ಕಾಲೇಜಿ ಪ್ರಾಂಶುಪಾವೆ ಶ್ರೀಲತಾ ಇದ್ದರು.