ಸಮಾಜದಲ್ಲಿ ಸಮಾನತೆ ಸಾರಿದ ಕ್ರಾಂತಿಕಾರಿ

| Published : Aug 22 2025, 02:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಕಾನೂನಿನ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಿದ ಮಹಾನ್ ನಾಯಕ ದಿ.ಡಿ.ದೇವರಾಜ ಅರಸು ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಕಾನೂನಿನ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಿದ ಮಹಾನ್ ನಾಯಕ ದಿ.ಡಿ.ದೇವರಾಜ ಅರಸು ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಹೇಳಿದರು.

ವಿಶ್ವವಿದ್ಯಾಲಯದ ಸಮಾನ ಅವಕಾಶ ಘಟಕದಿಂದ ಸಿಂಡಿಕೇಟ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ದಿ. ಡಿ.ದೇವರಾಜ ಅರಸುರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರಸರು ಕೈಕೊಂಡ ಕ್ರಾಂತಿಕಾರಿ ಕ್ರಮಗಳಿಂದಾಗಿ ಜೀತಪದ್ದತಿ ನಿರ್ಮೂಲನೆ ಹಾಗೂ ಹಿಂದುಳಿದ ವರ್ಗಗಳಿಗೆ ಸಮಾಜದಲ್ಲಿ ಸಮಾನ ಬಾಳು, ಸಮಪಾಲು ಎಂಬ ತತ್ವವನ್ನು ಬೆಳೆಸಿತು ಎಂದು ನೆನೆದರು.

ಕನ್ನಡ ವಿಭಾಗದ ಪ್ರೊ.ನಾರಾಯಣ ಪವಾರ ಮಾತನಾಡಿ, ಪ್ರಗತಿಪರ ಸಾಧನೆಗಳ ಸರದಾರ ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ ಅರಸುರ ಕೊಡುಗೆಗಳು ಅಪಾರವಾಗಿವೆ. 70ರ ದಶಕದಲ್ಲಿ ಅವರು ತಂದ ಬದಲಾವಣೆಗಳು ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿವೆ ಎಂದರು.

ಪ್ರೊ.ಎಂ.ನಾಗರಾಜ ಮಾತನಾಡಿ, ಸಮಾಜವಾದ ಬೆನ್ನೆಲುಬಾಗಿ, ಅವರ ಮೌಲ್ಯಾಧಾರಿತ ರಾಜಕಾರಣ ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಹೊಸ ದಿಕ್ಕು ತೋರಿಸಿತು ಎಂದು ಹೇಳಿದರು.

ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಜಿ.ತಡಸದ ಮಾತನಾಡಿ, ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಪುನರ್ ನಾಮಕರಣ ಮಾಡುವ ಮೂಲಕ ಕರ್ನಾಟಕದ ಏಕೀಕರಣಕ್ಕೆ ಹೊಸ ಭಾಷ್ಯ ಬರೆದರು ಎಂದು ತಿಳಿಸಿದರು.

ಪ್ರೊ.ಓಂಕಾರ ಕಾಕಡೆ ಮಾತನಾಡಿ, ರಾಜ್ಯದ ರಾಜಕೀಯದಲ್ಲಿ 70ರ ದಶಕದಲ್ಲಿ ತಳ ವರ್ಗದ ನಾಯಕತ್ವವನ್ನು ಬೆಳೆಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕನ್ನು ಕೊಟ್ಟವರು ಡಿ.ದೇವರಾಜ ಅರಸರು ಎಂದು ಬಣ್ಣಿಸಿದರು. ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಧೀಮಂತ ನಾಯಕ ದೇವರಾಜ ಅರಸು, ಇಂದಿರಾಗಾಂಧಿ ಜಾರಿಗೊಳಿಸಿದ್ದ ಗರೀಬಿ ಹಠಾವೋ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರು ಎಂದು ಸ್ಮರಿಸಿದರು.

ಹಿಂದುಳಿದ ವರ್ಗಗಳ ಘಟಕದ ಸಂಯೋಜಕ ಪ್ರೊ.ಶ್ರೀನಿವಾಸ ಸ್ವಾಗತಿಸಿ, ನಿರೂಪಿಸಿದರು. ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ವಿದ್ಯಾರ್ಥಿನಿಯರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.