ಪಾಳುಬಿದ್ದ ತರಕಾರಿ ಮಾರ್ಕೇಟ್‌

| Published : Jun 03 2024, 12:31 AM IST

ಸಾರಾಂಶ

ದಾಂಡೇಲಿಯ ತರಕಾರಿ ಮಾರುಕಟ್ಟೆ ಬಳಕೆಯಾಗದೇ ನಿರುಪಯುಕ್ತವಾಗಿದೆ. ಹೀಗಾಗಿ ಈ ಭಾಗದ ನಿವಾಸಿಗಳು ದೂರದ ಪ್ರದೇಶಕ್ಕೆ ತೆರಳಿ ತರಕಾರಿ ತರುವಂತಾಗಿದೆ.

ಗುರುಶಾಂತ ಜಡೆಹಿರೇಮಠ

ದಾಂಡೇಲಿ: ಅಂಬೇವಾಡಿ ಬಸವೇಶ್ವರ ನಗರದಲ್ಲಿನ ಜಗದಂಬಾ ದೇವಸ್ಥಾನದ ಪಕ್ಕದಲ್ಲಿ ತರಕಾರಿ ಮಾರುಕಟ್ಟೆನಿರ್ಮಿಸಿ ೧೪ ವರ್ಷ ಕಳೆದರೂ ವ್ಯಾಪಾರ- ವಹಿವಾಟು ನಡೆಯದೇ ಸುಸಜ್ಜಿತ ಮಾರುಕಟ್ಟೆ ಹಾಳು ಬಿದ್ದಿದೆ.

ಈ ತರಕಾರಿ ಮಾರುಕಟ್ಟೆಯಿಂದ ಅಂಬೇವಾಡಿ, ಬಸವೇಶ್ವರ ನಗರ, ಗಣೇಶ ನಗರ, ಸುಭಾಸ ನಗರ, ವನಶ್ರೀ ನಗರ, ಬರ್ಚಿ ರಸ್ತೆ ಸೇರಿದಂತೆ ಇನ್ನು ಹಲವು ಭಾಗದ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ ಮಾರುಕಟ್ಟೆ ಬಳಕೆಯಾಗದೇ ನಿರುಪಯುಕ್ತವಾಗಿದೆ. ಹೀಗಾಗಿ ಈ ಭಾಗದ ನಿವಾಸಿಗಳು ದೂರದ ಪ್ರದೇಶಕ್ಕೆ ತೆರಳಿ ತರಕಾರಿ ತರುವಂತಾಗಿದೆ.

ಅಂಬೇವಾಡಿಯ ಬಸವೇಶ್ವರ ನಗರ ತರಕಾರಿ ಮಾರುಕಟ್ಟೆ ನಿರ್ಮಾಣಗೊಂಡ ನಂತರ ಅಲ್ಲಿ ಕೆಲವು ದಿನ ತರಕಾರಿ ವ್ಯಾಪಾರ ನಡೆಯಿತು. ಆದರೆ ಕೆಲವು ದಿನಗಳ ಬಳಿಕ ಅಂಬೇವಾಡಿಯ ತರಕಾರಿ ಮಾರುಕಟ್ಟೆ ಸ್ಥಗಿತಗೊಂಡಿತು. ಇದೀಗ ತರಕಾರಿ ಮಾರುತ್ತಿದ್ದ ಸ್ಥಳ ಅಲೆಮಾರಿಗಳು, ಭಿಕ್ಷುಕರ ತಾಣವಾಗಿದೆ. ನಗರದಲ್ಲಿರುವ ಅನೇಕ ಅಲೆಮಾರಿಗಳು ರಾತ್ರಿಯಾಯಿತು ಎಂದರೆ, ಈ ತರಕಾರಿ ಮರುಕಟ್ಟೆಯಲ್ಲಿ ವಾಸ್ತವ್ಯ ಹೂಡುತ್ತಾರೆ.

ಬೀದಿಯಲ್ಲಿ ವ್ಯಾಪಾರ: ನಗರದ ಸೋಮಾನಿ ವೃತ್ತದಿಂದ ಸರ್ಕಾರಿ ಆಸ್ಪತ್ರೆಯ ಕ್ರಾಸ್‌ವರೆಗೆ ರಸ್ತೆ ಪಕ್ಕ ಎಗ್ಗಿಲ್ಲದೆ ತರಕಾರಿ, ಹಣ್ಣುಗಳ ವ್ಯಾಪಾರ ನಡೆಯುತ್ತಿದೆ. ಈ ರಸ್ತೆಯು ನಾಡಕಚೇರಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಬಂಗೂರನಗರ ಕ.ಹಿ.ಪ. ಶಾಲೆ ಮತ್ತು ಮುಖ್ಯವಾಗಿ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಶಿಫ್ಟ್ ಡ್ಯೂಟಿಗೆ ಕಾರ್ಮಿಕರು ಹೋಗುವ ರಸ್ತೆಯಾಗಿದೆ. ಈ ರಸ್ತೆ ಯಾವಾಗಲೂ ಜನ, ವಾಹನ ಸಂಚಾರದಿಂದ ತುಂಬಿ ತುಳುಕುತ್ತಿರುತ್ತಿದೆ.

ಕಾರ್ಖಾನೆಯ ಕಾರ್ಮಿಕರು, ಶಾಲಾ ಮಕ್ಕಳು, ಸರ್ಕಾರಿ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದರೂ ಈ ರಸ್ತೆಯಲ್ಲಿ ತರಕಾರಿ ಮಾರಾಟ ಮಾತ್ರ ನಡೆಯುತ್ತಲೇ ಇದೆ. ನಗರಸಭೆಯವರು ತರಕಾರಿ- ಹಣ್ಣುಗಳ ಮಾರಾಟವನ್ನು ಅಂಬೇವಾಡಿಯ ಹಾಳು ಬಿದ್ದಿರುವ ಮಾರುಕಟ್ಟೆಗೆ ಯಾಕೆ ವರ್ಗಾಯಿಸುತ್ತಿಲ್ಲ ಎಂಬುದು ಜನರ ಪ್ರಶ್ನೆ.ಮಾರುಕಟ್ಟೆ ಆರಂಭಿಸ್ತೇವೆ: ಸದ್ಯ ಲೋಕಸಭೆ ಚುನಾವಣೆ ಸಂದರ್ಭವಾಗಿದ್ದರಿಂದ ಚುನಾವಣೆ ಫಲಿತಾಂಶ ಬಂದ ನಂತರ ನಮ್ಮ ತಂಡದೊಂದಿಗೆ ರಸ್ತೆಬದಿಯ ತರಕಾರಿ, ಹಣ್ಣು ವ್ಯಾಪಾರ ಮಾಡುವುದನ್ನು ಬಂದ್‌ ಮಾಡಿಸುತ್ತೇವೆ. ಹಾಗೆಯೇ ಅಂಬೇವಾಡಿ ಬಸವೇಶ್ವರ ನಗರದ ತರಕಾರಿ ಮಾರುಕಟ್ಟೆಯಲ್ಲಿ ಆರಂಭಿಸುವ ಕೆಲಸ ಮಾಡುತ್ತೇವೆ ಎಂದು ದಾಂಡೇಲಿ ನಗರಸಭೆ ಪೌರಾಯುಕ್ತ ಸಿದ್ದಪ್ಪ ಮಹಾಜನ ತಿಳಿಸಿದರು.