ಸ್ತ್ರೀ ಗೌರವಿಸುವ ನೆಲವೇ ಪುಣ್ಯಕ್ಷೇತ್ರ

| Published : Oct 01 2024, 01:32 AM IST

ಸಾರಾಂಶ

ಯಾವ ನೆಲದಲ್ಲಿ ಸ್ತ್ರೀಯನ್ನು ಗೌರವಿಸಲಾಗುತ್ತಿದೆಯೋ ಅದು ಅತ್ಯಂತ ಪುಣ್ಯಕ್ಷೇತ್ರವಾಗಿರುತ್ತದೆ ಎಂದು ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಯಾವ ನೆಲದಲ್ಲಿ ಸ್ತ್ರೀಯನ್ನು ಗೌರವಿಸಲಾಗುತ್ತಿದೆಯೋ ಅದು ಅತ್ಯಂತ ಪುಣ್ಯಕ್ಷೇತ್ರವಾಗಿರುತ್ತದೆ ಎಂದು ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಸ್ವಾಮಿಗಳು ನುಡಿದರು.

ಪಟ್ಟಣದಲ್ಲಿ ಅಲ್ಲಮಪ್ರಭು ದೇವಾಲಯದ ಉದ್ಘಾಟನೆ ನಿಮಿತ್ತ ಕರೆಯಲಾಗಿದ್ದ ಮಹಿಳಾ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಲ್ಲಿ ಸಂಸ್ಕಾರ ಇರುತ್ತದೆ. ಪ್ರತಿಯೊಬ್ಬರ ಜೀವನ ತಾಯಿಯಿಂದಲೇ ಪ್ರಾರಂಭವಾಗುತ್ತದೆ. ತಾಯಿಯೇ ಎಲ್ಲರಿಗೂ ಮೊದಲ ಗುರುವಾಗಿದ್ದಾಳೆ. ನಮ್ಮ ಸಂಸ್ಕಾರದ ಮೂಲ ಚೇತನ ಅವಳಾಗಿದ್ದಾಳೆ. ಅವಳಿಂದಲೇ ನಮ್ಮೆಲ್ಲರ ಬದುಕು ಆರಂಭವಾಗುತ್ತದೆ. ಇಂತಹ ಅಮೂಲ್ಯವಾದ ವ್ಯಕ್ತಿತ್ವ ಹೊಂದಿದ ತಾಯಿಗೆ ಯಾವ ನೆಲದಲ್ಲಿ ಗೌರವವಿದೆಯೋ ಆ ನೆಲ ಪವಿತ್ರಕ್ಷೇತ್ರವಾಗಿರುತ್ತದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೇ ಅಲ್ಲಿ ತಾಯಂದಿರ ಪಾತ್ರ ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು.ಚಿಮ್ಮಡದ ಪ್ರಭುಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ತೆರದಾಳ ಈ ಕಾರ್ಯಕ್ರಮವನ್ನು ಇಡಿ ನಾಡೇ ಗಮನಿಸುತ್ತಲಿದೆ. ಕಾರಣ ಒಂದಿಷ್ಟು ಭಿನ್ನಾಭಿಪ್ರಾಯ ಬರದ ಹಾಗೆ ನೋಡಿಕೊಂಡು ಒಮ್ಮತದಿಂದ ಕೆಲಸ ಮಾಡಿದರೇ ಖಂಡಿತವಾಗಿ ಇದು ಐತಿಹಾಸಿಕ ಕಾರ್ಯಕ್ರಮವಾಗುವುದು ಎಂದರು.ಗಂಗಾಧರ ಪೂಜ್ಯರು ಮಾತನಾಡಿ, ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಎಲ್ಲ ಸಮಿತಿಯವರು ಈಗಿಂದೀಗಲೇ ನಿಮ್ಮ ಕೆಲಸಕಾರ್ಯವನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು.ಶಾಸಕ ಗುಡಗುಂಟಿಮಠ ಅವರು, ಮಹಿಳೆಯರು ಕೈಕೊಳ್ಳಬೇಕಾದ ಎಲ್ಲ ಕೆಲಸ ಕಾರ್ಯಗಳ ಕುರಿತು ವಿವರಿಸಿದರು. ಬಸವರಾಜ ಬಾಳಿಕಾಯಿ ಪ್ರಾಸ್ತಾವಿಕ ನುಡಿದರು. ನೂತನ ದೇಗುಲದ ನಿರ್ಮಾತೃ ಶಿಲ್ಪಿ ರಾಜಶೇಖರ ಹೆಬ್ಬಾಳೆಯವರು ದೇವಾಲಯ ನಿರ್ಮಾಣದ ಎಲ್ಲಾ ಹಂತಗಳ ಕುರಿತು ಮಾಹಿತಿ ನೀಡಿದರು.ವೇದಿಕೆಯಲ್ಲಿ ಗುಹೇಶ್ವರ ಪುರಾಣಿಕಮಠ, ಪರಯ್ಯ ಮೇಲಿನಮನಿ ಇದ್ದರು. ಎಂ.ಬಿ.ಮಾಳೇದ ನಿರೂಪಿಸಿದರು. ಸಚಿನ.ಪಿ ವಂದಿಸಿದರು. ಸಭೆಯಲ್ಲಿ ಆಶಾಕಾರ್ಯಕರ್ತೆಯರು, ತಾಯಂದಿರು, ಪಟ್ಟಣದ ಪ್ರಮುಖರು ಸಹ ಹಾಜರಿದ್ದರು.