ಭೂ ವರಹನಾಥ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ

| Published : Jan 02 2025, 12:32 AM IST

ಭೂ ವರಹನಾಥ ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ತಾಲೂಕಿನ ಭೂ ವರಹನಾಥ ದೇವಾಲಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಭೂ ವೈಕುಂಠವೆಂದೇ ಪ್ರಸಿದ್ಧವಾದ ಕಲ್ಲಹಳ್ಳಿಯ ಶ್ರೀಲಕ್ಷ್ಮೀ ಸಮೇತನಾದ ಭೂವರಹನಾಥ ಕ್ಷೇತ್ರ, ಕಾಪನಹಳ್ಳಿ ಗವೀಮಠ ಹಾಗೂ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಗಳಿಗೆ ಭಕ್ತರು, ಪ್ರವಾಸಿಗರು ಆಗಮಿಸಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ನೂತನ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ತಾಲೂಕಿನ ಭೂ ವರಹನಾಥ ದೇವಾಲಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತ ಸಾಗರವೇ ಹರಿದು ಬಂದಿತ್ತು.

ಭೂ ವೈಕುಂಠವೆಂದೇ ಪ್ರಸಿದ್ಧವಾದ ಕಲ್ಲಹಳ್ಳಿಯ ಶ್ರೀಲಕ್ಷ್ಮೀ ಸಮೇತನಾದ ಭೂವರಹನಾಥ ಕ್ಷೇತ್ರ, ಕಾಪನಹಳ್ಳಿ ಗವೀಮಠ ಹಾಗೂ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಗಳಿಗೆ ಭಕ್ತರು, ಪ್ರವಾಸಿಗರು ಆಗಮಿಸಿದ್ದರು.

ಸರತಿ ಸಾಲಿನಲ್ಲಿ ನಿಂತು 17 ಅಡಿ ಎತ್ತರದ ಭೂವರಹನಾಥಸ್ವಾಮಿ ಸಾಲಿಗ್ರಾಮ ಶ್ರೀ ಕೃಷ್ಣಶಿಲೆಯ ಮೂರ್ತಿಯನ್ನು ಕಣ್ಣು ತುಂಬಿಕೊಂಡರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಸಿಹಿ ಪೊಂಗಲ್, ಪುಳಿಯೋಗರೆ, ಬಿಸಿಬೇಳೆ ಭಾತ್, ಮೊಸರನ್ನ, ವಾಂಗಿ ಭಾತ್ ಪ್ರಸಾದವನ್ನು ವಿತರಿಸಲಾಯಿತು.

ಗಂಜಿಗೆರೆ ಗ್ರಾಮದಿಂದ ಭೂವರಹನಾಥ ಕ್ಷೇತ್ರದವರೆಗೆ ವಾಹನಗಳು ಸಾಲಾಗಿ ನಿಂತಿದ್ದು, ಕಿಲೋ ಮೀಟರ್ ಗಟ್ಟಲೆ ಉದ್ದದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಆನಂದೇಗೌಡ ವಾಹನಗಳ ಸಂಚಾರ ನಿಯಂತ್ರಿಸಲು ಹರಸಾಹಸ ಮಾಡಿದರು.

ದೇವಾಲಯ ಅಭಿವೃದ್ಧಿ ಟ್ರಸ್ಟ್ ಸಂಚಾಲಕ ಡಾ.ಶ್ರೀನಿವಾಸ್ ರಾಘವನ್ ಅವರು ವಿಶೇಷ ಪೂಜೆ ಪುರಸ್ಕಾರಗಳು, ಹೋಮ ಹವನಗಳು ಹಾಗೂ ಅಭಿಷೇಕ ನಡೆಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಾಸನ ನಗರಸಭೆ ಅಧ್ಯಕ್ಷ ರವಿ, ತಹಸೀಲ್ದಾರ್ ಡಾ.ಯು. ಎಸ್.ಅಶೋಕ್, ಪುರಸಭೆ ಅಧ್ಯಕ್ಷೆ ಪಂಕಜ ಸೇರಿದಂತೆ ನಾಡಿನ ಹಲವು ಭಾಗಗಳಿಂದ ಸಾವಿರಾರು ಜನರು ಇಂದು ನೂತನ ವರ್ಷಾಚರಣೆ ಸಂಭ್ರಮದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಹಿರಿಯ ವಚನಕಾರ ಶ್ರೀಸ್ವತಂತ್ರ ಸಿದ್ದಲಿಂಗೇಶ್ವರರು ಜೀವಂತವಾಗಿ ಸಮಾಧಿಯಾಗಿರುವ ಗದ್ದುಗೆ ಇರುವ ಕಾಪನಹಳ್ಳಿ ಗವಿಮಠಕ್ಕೂ ನೂರಾರು ಭಕ್ತರು ಆಗಮಿಸಿ ಗದ್ದುಗೆಯ ದರ್ಶನ ಪಡೆದು ಹೊಸ ವರ್ಷದ ವಿಸೇಷ ಪೂಜೆ ನಮನಗಳನ್ನು ಸಲ್ಲಿಸಿದರು.

ಮಲೆ ಮಹದೇಶ್ವರರು ಬಾಲಕರಾಗಿದ್ದಾಗ ಮೊಟ್ಟ ಮೊದಲ ಪವಾಡ ನಡೆಸಿರುವ ತಾಣ ಎಂದು ಜನಪದೀಯವಾಗಿ ಉಲ್ಲೇಖಿತವಾಗಿರುವ ತಾಲೂಕಿನ ಅಂಬಿಗರಹಳ್ಳಿ ಬಳಿಯ ಕಾವೇರಿ-ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಸಂಗಮೇಶ್ವರ ಮತ್ತು ಬಾಲ ಮಹದೇಶ್ವರರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ಸಂಭ್ರಮಾಚರಣೆ ಮಾಡಿದರು.