ಸ್ಥಳೀಯ ರೈತರು, ಜನರಲ್ಲದೇ ಹಾವೇರಿ, ಗದಗ, ಬಾಗಲಕೋಟ, ಬೆಳಗಾವಿ, ರಾಮದುರ್ಗ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು, ಕೃಷಿಕ ಕುಟುಂಬಗಳು ಹಾಗೂ ಸಾರ್ವಜನಿಕರು ಲಕ್ಷ ಸಂಖ್ಯೆಯಲ್ಲಿ ಆಗಮಿಸಿ ಮೇಳದ ಪ್ರಯೋಜನ ಪಡೆದರು.
ಧಾರವಾಡ: ‘ಸಶಕ್ತ ಮಹಿಳೆ–ಸುಸ್ಥಿರ ಕೃಷಿ’ ಎಂಬ ಘೋಷವಾಕ್ಯದಡಿ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮೂರನೇ ದಿನ ವಾರಾಂತ್ಯ ಭಾನುವಾರ ಜನಸಾಗರವೇ ಹರಿದುಬಂತು.
ಸ್ಥಳೀಯ ರೈತರು, ಜನರಲ್ಲದೇ ಹಾವೇರಿ, ಗದಗ, ಬಾಗಲಕೋಟ, ಬೆಳಗಾವಿ, ರಾಮದುರ್ಗ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು, ಕೃಷಿಕ ಕುಟುಂಬಗಳು ಹಾಗೂ ಸಾರ್ವಜನಿಕರು ಲಕ್ಷ ಸಂಖ್ಯೆಯಲ್ಲಿ ಆಗಮಿಸಿ ಮೇಳದ ಪ್ರಯೋಜನ ಪಡೆದರು. ಕಾರು, ಟ್ರ್ಯಾಕ್ಟರ್, ಬಸ್ಸು ಸೇರಿದಂತೆ ಸಾವಿರಾರು ವಾಹನಗಳು ಮೇಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಪರದಾಡಬೇಕಾಯಿತು. ಮೇಳದ ಸ್ಥಳದಿಂದ ಎರಡ್ಮೂರು ಕಿ.ಮೀ ದೂರವೇ ವಾಹನ ಪಾರ್ಕಿಂಗ್ ಮಾಡಿ ಜನರು ಬಿರು ಬಿಸಿಲಿನಲ್ಲಿ ಬರುವಂತಾಯಿತು.ಬೀಜಕ್ಕೆ ಬೇಡಿಕೆ: ಹಿಂಗಾರು ಬಿತ್ತನೆ ಹಿನ್ನೆಲೆಯಲ್ಲಿ ಬೀಜ ಮೇಳಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹಿಂಗಾರಿ ಜೋಳ, ಕಡಲೆ, ಗೋಧಿ, ಕುಸುಬೆ, ಉದ್ದು, ಅಲಸಂದಿ ಸೇರಿದಂತೆ ವಿವಿಧ ಸಿರಿಧಾನ್ಯಗಳ ಬೀಜಗಳು ಲಭ್ಯವಿದ್ದು, ರೈತರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೀಜಗಳನ್ನು ಖರೀದಿಸಿದರು. ಟೊಮೆಟೊ, ಸೌತೆಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳ ಸುಧಾರಿತ ಬೀಜಗಳ ಕಿಟ್‌ಗಳೂ ಮಾರಾಟವಾಗಿವೆ. ಹಿಂಗಾರು ಬಿತ್ತನೆಗಾಗಿ ಒಟ್ಟು 1,141.2 ಕ್ವಿಂಟಲ್ ಬೀಜ ಮಾರಾಟವಾಗಿದೆ. ಇದರೊಂದಿಗೆ 245 ಕೆ.ಜಿ. ತರಕಾರಿ ಬೀಜಗಳೂ ಮಾರಾಟವಾಗಿವೆ. ಒಟ್ಟಾರೆ ಬೀಜಗಳ ಮಾರಾಟದ ಮೌಲ್ಯ ರು.1.01 ಕೋಟಿ ಮೀರಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎನ್.ಬಿ. ಪ್ರಕಾಶ ತಿಳಿಸಿದ್ದಾರೆ.
ಜತೆಗೆ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ವಿವಿಧ ಪ್ರಕಟಣೆಗಳಿಗೂ ಉತ್ತಮ ಬೇಡಿಕೆ ಕಂಡು ಬಂದಿದೆ. ಸುಮಾರು ರು. 2 ಲಕ್ಷ ಮೌಲ್ಯದ ಕೃಷಿ ಪುಸ್ತಕಗಳು ಮತ್ತು ಪ್ರಕಟಣೆಗಳು ಮಾರಾಟವಾಗಿವೆ.ಆಧುನಿಕ ಕೃಷಿ ಯಂತ್ರೋಪಕರಣಗಳು ಹಾಗೂ ಡ್ರೋನ್ ತಂತ್ರಜ್ಞಾನದ ಪ್ರದರ್ಶನಕ್ಕೂ ರೈತರು ಹೆಚ್ಚಿನ ಆಸಕ್ತಿ ತೋರಿದರು. ಕೃಷಿಯಲ್ಲಿ ತಂತ್ರಜ್ಞಾನ ಬಳಕೆ, ಬೆಳೆಗಳಿಗೆ ಔಷಧ ಸಿಂಪಡಣೆ, ಸಮಯ ಮತ್ತು ಕಾರ್ಮಿಕ ವೆಚ್ಚ ಕಡಿತ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ಪಡೆಯಲಾಯಿತು.
ಸೆ. 25 ರಿಂದ ಆರಂಭವಾಗಿರುವ ಕೃಷಿ ಮೇಳಕ್ಕೆ ಸೆ. 28ರ ಸೋಮವಾರ ತೆರೆ ಬೀಳಲಿದ್ದು, ಕೊನೆ ದಿನವು ಲಕ್ಷಾಂತರ ಜನರು ಮೇಳಕ್ಕೆ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಒಟ್ಟಾರೆ ಈ ಬಾರಿ 20 ಲಕ್ಷ ಜನರು ಭೇಟಿ ನೀಡಬಹುದು ಎಂದು ಅಂದಾಜಿಸಿದ್ದು, ಲಿಮ್ಕಾ ದಾಖಲೆ ಮಾಡುವ ಪ್ರಯತ್ನದಲ್ಲಿ ಕೃಷಿ ವಿವಿ ಇದೆ.