ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬ್ಯಾಂಕುಗಳ ಮೂಲಕ ಸಾಲ ಪಡೆದು ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸ್ವಸಹಾಯ ಗುಂಪುಗಳು ರಚನೆಯಾದ ನಂತರದ ವರ್ಷಗಳಲ್ಲಿ ಸಮಾಜದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳು ಆಗಿವೆ. ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆ ದೃಷ್ಟಿಯಿಂದ ಇದು ಮಹತ್ತರ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಕೆನರಾಬ್ಯಾಂಕ್, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಸಾಕ್ಷರತೆ ಅರಿವು ಮತ್ತು ಸಾಲ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಕಾರಾತ್ಮಕ ಪರಿಣಾಮ
ಸ್ವಸಹಾಯ ಗುಂಪುಗಳ ರಚನೆ ಮತ್ತು ಅವುಗಳ ಆರ್ಥಿಕ ಚಟುವಟಿಕೆಗಳು ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ. ಜಿಲ್ಲೆಯಲ್ಲಿ ನವೋದ್ಯಮದ ಭಾಗವಾಗಿ ಸ್ವಸಹಾಯ ಸಂಘಗಳ ಒಕ್ಕೂಟಗಳ ಕಚೇರಿಗಳ ನಿರ್ವಹಣೆಗಾಗಿ ಒಂದು ಬಾರಿ ತಲಾ ಒಂದು ಲಕ್ಷ ರೂಪಾಯಿಗಳವರೆಗೆ, ಜಿಲ್ಲೆಯ 137 ಒಕ್ಕೂಟಗಳಿಗೆ ಒಟ್ಟು 86,25,000 ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಸಂಜೀವಿನಿಯಡಿ 2023-24 ನೇ ಸಾಲಿನಲ್ಲಿ ಸ್ವಸಹಾಯ ಗುಂಪುಗಳ ಆಂತರಿಕ ವ್ಯವಹಾರಗಳು ಹಾಗೂ ಬ್ಯಾಂಕಿನ ಸಾಲ ಸೌಲಭ್ಯಕ್ಕಾಗಿ ಪ್ರತಿಗುಂಪಿಗೆ 20 ಸಾವಿರ ರೂಪಾಯಿಗಳ ಸುತ್ತು ನಿಧಿಯಂತೆ ಒಟ್ಟು 681 ಗುಂಪುಗಳಿಗೆ 136.2 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
ಆಹಾರೋತ್ಪನ್ನಕ್ಕೆ ಮಾರುಕಟ್ಟೆಜಿಲ್ಲೆಯಲ್ಲಿನ ಕೆಲವು ಸ್ವಸಹಾಯ ಗುಂಪುಗಳು ಸರ್ಕಾರಿ ಬ್ಯಾಂಕುಗಳಿಂದ ಸಾಲ ಪಡೆದು ಗುಣಮಟ್ಟದ ವಿವಿಧ ಆಹಾರೋತ್ಪನ್ನಗಳನ್ನು ತಯಾರಿಸುತ್ತಿದ್ದು, ಅವುಗಳು ರಾಜ್ಯ, ರಾಷ್ಟ್ರ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೆಲವು ಉತ್ಪನ್ನಗಳು ಗಮನಸೆಳೆದಿವೆ. ಇದು ಜಿಲ್ಲೆಯ ಸ್ವಸಹಾಯ ಗುಂಪುಗಳ ಪರಿಶ್ರಮ, ಕ್ರಿಯಾಶೀಲತೆ ಮತ್ತು ಸಾಧನೆಗೆ ಸಾಕ್ಷಿಯಾಗಿದ್ದು, ಈ ಸಾಧನೆಯನ್ನು ಜಿಲ್ಲಾಡಳಿತ ಪ್ರಶಂಸಿಸುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ರವರು ಮಾತನಾಡಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ಸಹಯೋಗದಲ್ಲಿ ಜಾರಿಗೊಳಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸಬಲೀಕರಣಗೊಳ್ಳಲು ಸ್ವಯ ಸಹಾಯಕ ಗುಂಪುಗಳ ಸದಸ್ಯರಿಗೆ ಮನವಿ ಮಾಡಿದರು.ವಿದ್ಯಾ ಜ್ಯೋತಿ ಯೋಜನೆ
ಕೆನರಾ ಬ್ಯಾಂಕ್ ಬೆಂಗಳೂರು ವೃತ್ತದ ಮಹಾಪ್ರಬಂಧಕ ಮಹೇಶ್ ಎಂ.ಪೈ ಮಾತನಾಡಿ, ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್‌ನ 31 ಶಾಖೆಗಳಿದ್ದು, ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿ ಶಾಖೆಯ ವ್ಯಾಪ್ತಿಯಲ್ಲಿ 5 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಬಡವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತ್ತು ನಿಗದಿತ ಕಾಲಮಿತಿಯೊಳಗೆ ಸಾಲವನ್ನು ಮರುಪಾವತಿಸಿದ ಸ್ವಸಹಾಯ ಗುಂಪುಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ವಹಾಯ ಗುಂಪುಗಳಿಗೆ ಸಾಲದ ಚೆಕ್ಕುಗಳನ್ನು ವಿತರಿಸಲಾಯಿತು. ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಇದೇ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸಾಕ್ಷರತೆಗೆ ಉತ್ತಮವಾಗಿ ಶ್ರಮಿಸಿ, ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ಚಿಕ್ಕಬಳ್ಳಾಪುರ ಆರ್ಥಿಕ ಸಾಕ್ಷರತಾ ಕೇಂದ್ರಕ್ಕೆ ನೆನಪಿನ ಕಾಣಿಕೆ ವಿತರಿಸಿ ಅಭಿನಂದಿಸಲಾಯಿತು.
ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಈಶ್ವರಯ್ಯ, ಕೆನರಾ ಬ್ಯಾಂಕ್ ಕೋಲಾರ ವೃತ್ತದ ಸಹಾಯಕ ಪ್ರಧಾನ ಪ್ರಬಂಧಕ ಅಶೋಕ್ ಕುಮಾರ್ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ಯವಸ್ಥಾಪಕ ನಾಗರಾಜ್ ಉಪಸ್ಥಿತರಿದ್ದರು.