ಸ್ವಾರ್ಥ ರಹಿತ ಬದುಕಿಗೆ ಬೆಲೆ, ಬಲವಿದೆ : ರಂಭಾಪುರಿ ಶ್ರೀ

| Published : Aug 31 2024, 01:34 AM IST

ಸ್ವಾರ್ಥ ರಹಿತ ಬದುಕಿಗೆ ಬೆಲೆ, ಬಲವಿದೆ : ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಬದುಕು ಕೊಟ್ಟ ಭಗವಂತನ ಶಕ್ತಿ ಅದ್ಭುತ. ಆಧ್ಯಾತ್ಮಿಕತೆ ಬದುಕಿಗೆ ಧರ್ಮ ಆಶಾಕಿರಣ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬದುಕು ಕೊಟ್ಟ ಭಗವಂತನ ಶಕ್ತಿ ಅದ್ಭುತ. ಆಧ್ಯಾತ್ಮಿಕತೆ ಬದುಕಿಗೆ ಧರ್ಮ ಆಶಾಕಿರಣ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸ್ಕಾರ ಬದುಕನ್ನು ಉಜ್ವಲಗೊಳಿಸುತ್ತದೆ. ಸ್ವಾರ್ಥ ಗೆದ್ದವನು ಶಾಂತಿ ಪಡೆದವನು ಮತ್ತು ಸತ್ಯ ತಿಳಿದವನು ನಿಜವಾದ ಸುಖಿ. ಹಸಿದು ಉಣ್ಣುವುದು ಪ್ರಕೃತಿ ಧರ್ಮ. ಹಂಚಿ ಉಣ್ಣುವುದು ಸಂಸ್ಕೃತಿ ಗುಣ. ಮನಸ್ಸಿಟ್ಟು ಮಾಡಿದ ಕೆಲಸ, ಕಷ್ಟಪಟ್ಟು ದುಡಿದ ಹಣ, ಹಲವರೊಂದಿಗೆ ಹಂಚಿ ತಿನ್ನುವ ಗುಣ, ಭಕ್ತಿಯಿಂದ ಮಾಡುವ ದೇವರ ಪೂಜೆ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲವೆಂಬ ನಂಬಿಕೆ ಕಳೆದುಕೊಳ್ಳಬಾರದು.

ಕತ್ತಲಲ್ಲಿ ನಡೆಯುವಾಗ ಬೆಳಕಿನ, ಬಿಸಿಲಿನಲ್ಲಿ ನಡೆಯುವಾಗ ನೆರಳಿನ ಅವಶ್ಯಕತೆಯಿದೆ ಜೀವನದ ದಾರಿಯಲ್ಲಿ ಸಾಗುವಾಗ ಒಳ್ಳೆಯ ಸ್ನೇಹಿತರ ಮತ್ತು ಮಾರ್ಗದರ್ಶಕರ ಅವಶ್ಯಕತೆಯಿದೆ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿ ಇರ ಬೇಕೆಂದು ಮಹಾತ್ಮರು ನುಡಿದಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ನೊಂದವರ ಬೆಂದವರ ಧ್ವನಿಯಾಗಿ ಸತ್ಕಾರ್ಯ ಗಳನ್ನು ಮಾಡಿದ ಶ್ರೇಯಸ್ಸು ಅವರಿಗಿದೆ. ಮೌಲ್ಯಾಧಾರಿತ ಬದುಕನ್ನು ಅಳವಡಿಸಿಕೊಂಡು ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದರು. ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ ತಿಂಗಳ ರಂಭಾಪುರಿ ಬೆಳಗು ಪತ್ರಿಕೆಯನ್ನು ರಂಭಾಪುರಿ ಜಗದ್ಗುರು ಬಿಡುಗಡೆ ಮಾಡಿದರು.ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ಮಾತನಾಡಿ, ಹೊಗಳಿಕೆ- ತೆಗಳಿಕೆ ಸಹಜವಾಗಿದ್ದು ಎಲ್ಲರ ಜೀವನದಲ್ಲಿ ನಡೆಯುವ ಘಟನೆ ಸ್ವೀಕರಿಸಿ. ಹೂವು ಅರಳಿ ಮಿನುಗಲು ಸೂರ್ಯನ ಬೆಳಕು ಮತ್ತು ಮಳೆ ಎರಡೂ ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಚಿತ್ತ ಬದುಕನ್ನು ಕಟ್ಟಿಕೊಳ್ಳಲು ಕೊಟ್ಟ ಸಂದೇಶವನ್ನು ಯಾರೂ ಮರೆಯಬಾರದು ಎಂದರು. ನೇತೃತ್ವ ವಹಿಸಿದ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿ ಮಾತನಾಡಿ, ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಲಾಭ ಸಿಗದೇ ಇರಬಹುದು. ಆದರೆ ಅಂತಹ ಗುಣಕ್ಕೆ ಸುಮಾರು ಹೃದಯಗಳನ್ನು ಗೆಲ್ಲುವ ಶಕ್ತಿಯಿದೆ ಎಂದರು.ಈ ಧರ್ಮ ಸಮಾರಂಭದಲ್ಲಿ ಮಳಖೇಡ ಕಾರ್ತಿಕೇಶ್ವರ ಮಠದ ಅಭಿನವ ಕಾರ್ತಿಕೇಶ್ವರ ಶ್ರೀಗಳು, ದೇವರಭೂಪುರ ಬೃಹನ್ಮಠದ ಅಭಿನವ ಗಜದಂಡ ಶ್ರೀಗಳು, ರಾಮಗೇರಿ ಮಠದ ಉಮೇಶ್ವರ ಶ್ರೀಗಳು, ಮಾವನೂರು ಬೃಹನ್ಮಠದ ವಿರೂಪಾಕ್ಷ ಶ್ರೀಗಳು, ರಟ್ಟೀಹಳ್ಳಿ ವಿಶ್ವೇಶ್ವರ ಪಾಲ್ಗೊಂಡಿದ್ದರು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರಿಗೆ ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಶುಭ ಹಾರೈಸಿದರು. ಜಡೆಯ ಸಾಲಿಗೆ ರಾಜಣ್ಣ, ಕೊಟ್ಟೂರಿನ ವಿಶ್ವನಾಥ, ಹಳ್ಯಾಳದ ಗುರುನಾಥಗೌಡ ಮಾದಾಪುರ, ಶಿವನಗೌಡ ಹೊಸಮನಿ, ಗಂಗಾಧರಸ್ವಾಮಿ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. ೨೯ಬಿಹೆಚ್‌ಆರ್ ೨:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಶ್ರಾವಣ ಧರ್ಮ ಸಮಾರಂಭದಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಸೆಪ್ಟಂಬರ್ ತಿಂಗಳ ರಂಭಾಪುರಿ ಬೆಳಗು ಪತ್ರಿಕೆ ಬಿಡುಗಡೆ ಮಾಡಿದರು.