ಸ್ವಾರ್ಥರಹಿತ ಸಮಾಜದಿಂದ ಒಳಿತು ಕಾಣಲು ಸಾಧ್ಯ: ಸಂಸದ ಪಿ.ಸಿ.ಮೋಹನ್

| Published : Jul 21 2024, 01:24 AM IST

ಸ್ವಾರ್ಥರಹಿತ ಸಮಾಜದಿಂದ ಒಳಿತು ಕಾಣಲು ಸಾಧ್ಯ: ಸಂಸದ ಪಿ.ಸಿ.ಮೋಹನ್
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ನಗರದ ಸಾಯಿಬಾಬಾ ಮಂದಿರದಲ್ಲಿ ಶ್ರೀವೆಂಕಟಸಾಯಿ ಸೇವಾಟ್ರಸ್ಟ್, ಸಾಯಿಬಾಬಾ ಸದ್ಭಕ್ತವೃಂದ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಹಾಗೂ ಸಾಯಿಸತ್ಯ ನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮವನ್ನು ಸಂಸದ ಪಿ.ಸಿ.ಮೋಹನ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಂಸ್ಕೃತಿ ಮತ್ತು ಸಂಸ್ಕಾರದ ಮೂಲಕ ಅಕ್ಷರ ಜ್ಞಾನ ನೀಡಿದ ಗುರುವನ್ನು ಗೌರವಿಸುವ ಪರಂಪರೆ ಭಾರತೀಯರಲ್ಲಿ ಶಾಶ್ವತವಾಗಿದೆ. ಗುರುವಿನ ಸಾಕ್ಷಾತ್ಕಾರದೊಂದಿಗೆ ದೈವ ಆರಾಧಿಸುವ ನಾವೆಲ್ಲರೂ ಧನ್ಯತೆ ಭಾವ ಹೊಂದಿದ್ದೇವೆಂದು ಸೆಂಟ್ರಲ್ ಬೆಂಗಳೂರಿನ ಬಿಜೆಪಿ ಸಂಸದ ಪಿ.ಸಿ.ಮೋಹನ್ ತಿಳಿಸಿದರು.

ಶನಿವಾರ ಸಾಯಿಬಾಬಾ ಮಂದಿರದಲ್ಲಿ ಶ್ರೀವೆಂಕಟಸಾಯಿ ಸೇವಾಟ್ರಸ್ಟ್, ಸಾಯಿಬಾಬಾ ಸದ್ಭಕ್ತವೃಂದ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಹಾಗೂ ಸಾಯಿಸತ್ಯ ನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಭಗವಾನ್ ಸಾಯಿಬಾಬಾ ಬರದ ಈ ನಾಡಿನಲ್ಲಿ ನೆಲೆಸುವ ಮೂಲಕ ಇಲ್ಲಿನ ಜನತೆಗೆ ನೆಮ್ಮದಿ ಬದುಕು ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ತಾಲೂಕಿನಲ್ಲೂ ಸಹ ಉತ್ತಮ ಮಳೆ, ಬೆಳೆಯಾಗಿದ್ದು, ಇದು ಭಗವಾನ್ ಸಾಯಿಬಾಬಾ ಕೃಪೆಯಿಂದ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲೂ ಸಹ ಹಲವಾರು ಅನಿರೀಕ್ಷಿತ ಬದಲಾವಣೆ ನಾವು ಕಾಣುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಣದಂತಹ ಸ್ಥಿತಿ ಉಂಟಾಗಿದೆ. ರಾಜ್ಯದ ಬಡವರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ಮೋದಿಯವರು ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಸ್ವಾರ್ಥರಹಿತ ಸಮಾಜದಿಂದ ಮಾತ್ರ ಒಳಿತು ಕಾಣಲು ಸಾಧ್ಯವೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ, ಪ್ರಸ್ತುತ ೧೧ನೇ ವರ್ಷದ ಗುರುಪೂರ್ಣಿಮೆ ಉತ್ಸವ ಆಚರಿಸಿತ್ತಿದ್ದೇವೆ. ಚಳ್ಳಕೆರೆ ನಗರದಲ್ಲಿ ಭಗವಾನ್ ಶ್ರೀ ಸಾಯಿಬಾಬಾ ಮಂದಿರ ನಿರ್ಮಿಸುವ ಬಗ್ಗೆ ಚರ್ಚೆ ನಡೆದಾಗ ಎಲ್ಲರಿಂದಲೂ ಉತ್ತಮ ಸಹಕಾರ ದೊರೆಯಿತು. ೨೦೧೨ರಲ್ಲಿ ಆರಂಭವಾದ ಕಟ್ಟಡ ನಿರ್ಮಾಣ ಕಾರ್ಯ ಕೇವಲ ೬ ತಿಂಗಳ ಅವಧಿಯಲ್ಲಿ ಸುಮಾರು ₹೧೨ ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿತು. ವೆಂಕಟಸಾಯಿ ಸೇವಾಟ್ರಸ್ಟ್ ಕಾರ್ಯಕ್ಕೆ ಜನತೆ ಆರ್ಥಿಕ ನೆರವಿನೊಂದಿಗೆ ತುಂಬು ಸಹಕಾರ ನೀಡಿ ಮಂದಿರ ನಿರ್ಮಾಣಕ್ಕೆ ನೆರವಾಗಿದ್ದಾರೆ. ಮುಂದಿನ ದಿನಗಳಲ್ಲೂ ಸಹ ಸಾಯಿಭಕ್ತರಿಗೆ ಮಂದಿರದಲ್ಲಿ ಪೂಜಾ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿವೆ. ಭಕ್ತರ ಸಹಕಾರದಿಂದ ಮಾತ್ರ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಸಾಧ್ಯ ಎಂದರು.

ಶ್ರೀಕ್ಷೇತ್ರ ಬೆಲಗೂರು ವೀರಪ್ರತಾಪ ಆಂಜನೇಯಸ್ವಾಮಿ ಸನ್ನಿಧಿ ವಿಜಯ ಮಾರುತಿಶರ್ಮ ಸ್ವಾಮೀಜಿ ಮಾತನಾಡಿ, ಶ್ರೀಮಠದ ಪೂರ್ವಾಶ್ರಮದ ಗುರುಗಳಾದ ಬಿಂದುಮಾಧವಶರ್ಮ ರವರು ಇಲ್ಲಿನ ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ ಮತ್ತು ತಂಡ ಭಕ್ತರ ಶ್ರದ್ಧಾ ಭಕ್ತಿಗೆ ಗೌರವ ನೀಡಿ ಭವ್ಯವಾದ ಮಂದಿರ ನಿರ್ಮಿಸಿದ್ದು ಇದು ಭಕ್ತರ ಬೇಡಿಕೆ ಈಡೇರಿಸುವ ಶಕ್ತಿಕೇಂದ್ರವಾಗಲಿ ಎಂದು ಶುಭಹಾರೈಸಿದರು.

ದಿವ್ಯಸಾನ್ನಿಧ್ಯ ವಹಿಸಿದ್ದ ಸಿದ್ದಯ್ಯನಕೋಟೆ ವಿಜಯ ಮಹಂತೇಶ್ವರ ಸಂಸ್ಥಾನ ಶಾಖಾಮಠದ ಬಸವಲಿಂಗಮಹಾಸ್ವಾಮೀಜಿ ಮಾತನಾಡಿ, ದೇವಸ್ಥಾನ ಮಂದಿರಗಳಿಗೆ ಹೆಚ್ಚು ಜನ ಆಗಮಿಸುವ ಉದ್ದೇಶ ದೇವರಲ್ಲಿ ತಮ್ಮ ಸಮಸ್ಯೆ ನಿವೇದಿಸಿ, ಪರಿಹಾರ ಪಡೆಯುವುದಾಗಿದೆ. ದೇವರ ಮೇಲಿರುವ ಅಪಾರವಾದ ಭಕ್ತಿ ಶ್ರದ್ಧೆಗೆ ಎಂದೂ ಕೊರತೆ ಉಂಟಾಗಿಲ್ಲ. ನಮಗೆ ಸುಲಭವಾಗಿ ಗುರುಗಳ ಅನುಗ್ರಹವಾಗಲು ಭಕ್ತಿ, ಶ್ರದ್ಧೆ ಮೂಲಕ ಪ್ರಾರ್ಥಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ಬಲಿಜ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೆಂಕಟ ಸೇವಾ ಟ್ರಸ್ಟ್ ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್‌ ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಆರ್.ರವಿಕುಮಾರ್, ಕಾರ್ಯದರ್ಶಿ ಬಿ.ಸಿ.ಸತೀಶ್, ಹೂವಿನಜಗದೀಶ್, ಕೆ.ನಾಗೇಶ್, ಬಿ.ವಿ.ಚಿದಾನಂದಮೂರ್ತಿ, ಕೆ.ಎಂ.ಜಗದೀಶ್, ಬಿ.ಕೆ.ನಾಗರಾಜು, ಜಿ.ವೆಂಕಟೇಶ್, ಅರುಣಾಜಗದೀಶ್, ಬಲಿಜಸಮಾಜದ ಮುಖಂಡರಾದ ಮಂಜುನಾಥ, ಶ್ರೀನಿವಾಸ್, ತಿಮ್ಮಶೆಟ್ಟಿ, ಸೂರ್ಯನಾರಾಯಣ, ಪುಪ್ಪಸಂಜೀವಮೂರ್ತಿ ಮುಂತಾದವರು ಇದ್ದರು.