ಕಾವೇರಿ ಹೋರಾಟಕ್ಕೆ ಪ್ರತ್ಯೇಕ ಕಾನೂನು ವಿಭಾಗ ಅಗತ್ಯ

| Published : May 29 2024, 12:54 AM IST

ಕಾವೇರಿ ಹೋರಾಟಕ್ಕೆ ಪ್ರತ್ಯೇಕ ಕಾನೂನು ವಿಭಾಗ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ 2017ರಲ್ಲಿ ನೀಡಿರುವ ಐತೀರ್ಪು 2033ಕ್ಕೆ ಮುಕ್ತಾಯವಾಗಲಿದೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಕ್ಕಾಗಿ ಒಂದು ಕಾನೂನು ವಿಭಾಗದ ಅವಶ್ಯಕತೆ ಇದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಕಾವೇರಿ ಒಂದು ಐತಿಹಾಸಿಕ ಹಿನ್ನೋಟ ಕೃತಿಯ ಲೇಖಕ ಸಿ.ಚಂದ್ರಶೇಖರ್ ಸಲಹೆ ನೀಡಿದರು.

ರಾಮನಗರ: ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ 2017ರಲ್ಲಿ ನೀಡಿರುವ ಐತೀರ್ಪು 2033ಕ್ಕೆ ಮುಕ್ತಾಯವಾಗಲಿದೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಕ್ಕಾಗಿ ಒಂದು ಕಾನೂನು ವಿಭಾಗದ ಅವಶ್ಯಕತೆ ಇದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಕಾವೇರಿ ಒಂದು ಐತಿಹಾಸಿಕ ಹಿನ್ನೋಟ ಕೃತಿಯ ಲೇಖಕ ಸಿ.ಚಂದ್ರಶೇಖರ್ ಸಲಹೆ ನೀಡಿದರು.

ನಗರದ ಹೊರ ವಲಯದ ಅರ್ಚಕರಹಳ್ಳಿಯಲ್ಲಿರುವ ಶ್ರೀ ಬಾಲಗಂಗಾಧರನಾಥ ಅಂಧರ ಶಾಲೆಯಲ್ಲಿ ರೈತಸಂಘ ಆಯೋಜಿಸಿದ್ದ "ಕಾವೇರಿ ವಿವಾದ ಹಿಂದೆ-ಇಂದು-ಮುಂದೆ " ಸಂವಾದದಲ್ಲಿ ವಿಚಾರ ಮಂಡಿಸಿದ ಅವರು, ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆಗೆ ನಾವು ಪರರಾಜ್ಯದ ವಕೀಲರನ್ನು ಅವಲಂಬಿಸುವುದನ್ನು ತಪ್ಪಿಸಬೇಕಿದೆ. ಇದಕ್ಕಾಗಿ ಪ್ರತ್ಯೇಕ ಕಾನೂನು ವಿಭಾಗದ ಅವಶ್ಯಕತೆ ಇದೆ. ಇದು ಕಾವೇರಿ ಕೊಳ್ಳದ ರೈತರಿಂದಲೇ ಆಗಬೇಕು ಎಂದರು. ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಶತಮಾನಗಳಿಂದಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಈ ಅನ್ಯಾಯವನ್ನು ಕಾನೂನು ಹೋರಾಟದಲ್ಲಿ ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಚಿಂತನೆ ನಡೆಸಿ ಇಂದಿನಿಂದಲೇ ತಯಾರಿ ನಡೆಸಬೇಕು ಎಂದು ಹೇಳಿದರು.

ಕಾವೇರಿ ವಿವಾದಲ್ಲಿ ತಮಿಳುನಾಡು 1892 ಹಾಗೂ 1924ರ ಒಪ್ಪಂದವನ್ನು ಪದೆಪದೇ ಪ್ರಸ್ತಾಪ ಮಾಡುತ್ತಲೇ ಬಂದಿದೆ. 1892ರಲ್ಲಿ ನಡೆದ ಒಪ್ಪಂದರಲ್ಲಿ ಮದ್ರಾಸ್ ಸರ್ಕಾರದ ಪೂರ್ವಾನುಮತಿ ಇಲ್ಲದೆ ಕಾವೇರಿ ಕೊಳ್ಳದಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳ ಬಾರದು ಎಂಬ ಷರತ್ತು ಇದೆ. ಈ ಒಪ್ಪಂದವನ್ನು ವಿರೋಧಿಸಲು ಕರ್ನಾಟಕ ಸರ್ಕಾರಕ್ಕೆ ಸಾಕಷ್ಟು ಅವಕಾಶ ಇತ್ತಾದರೂ ಅದನ್ನು ಮಾಡದ ಕಾರಣ ಇಂದಿಗೂ ಆ ಒಪ್ಪಂದವನ್ನು ತಮಿಳುನಾಡು ಮಂಡಿಸುತ್ತಿದೆ. ಸುಪ್ರೀಂ ಕೋರ್ಟ್ ಸಹ ಕಾವೇರಿ ಐತೀರ್ಪಿನಲ್ಲಿ ಈ ಒಪ್ಪಂದ ಮುಂದುವರೆಯುತ್ತದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ನಮ್ಮ ಸರ್ಕಾರಗಳಲ್ಲಿ ಸಾಂಸ್ಥಿಕ ಸ್ಮರಣೆ ಇಲ್ಲದ ಕಾರಣ ಪದೇ ಪದೆ ಅನ್ಯಾಯವಾಗುತ್ತಿದೆ ಎಂದು ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.

ಮೇಕೆದಾಟಿಗೆ ನೂರೆಂಟು ವಿಘ್ನ:

ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಗೌಡ ಮಾತನಾಡಿ, ಪ್ರವಾಹದ ಸಂದರ್ಭದಲ್ಲಿ ಸಿಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕೆಆರ್‌ಎಸ್ ಜಲಾಶಯದ ಮೇಲ್ಭಾಗದಲ್ಲಿ ಹೈಲೆವಲ್ ಫ್ಲಡ್ ಕೆನಾಲ್ ನಿರ್ಮಾಣ ಮಾಡಬೇಕು. ಇದರಿಂದಾಗಿ ಹೆಚ್ಚುವರಿ ನೀರನ್ನು ಈ ಕೆನಾಲ್ ಮೂಲಕ ಹರಿಸಿ ಬರ ಪೀಡಿತ ಪ್ರದೇಶಗಳಿಲ್ಲಿ ಅಂತರ್ಜಲ ವೃದ್ಧಿ ಮಾಡಬಹುದು. ಇದರೊಂದಿಗೆ ಕೊಡಗಿನ ಲಕ್ಷ್ಮಣ ತೀರ್ಥ ನದಿಯನ್ನು ಸೇರುತ್ತಿದ್ದ ಕೊಂಗನಹೊಳೆ ಮತ್ತು ಕಕ್ಕಟ ಹೊಳೆಗಳಿಂದ ಪ್ರತಿವರ್ಷ 10 ಟಿಎಂಸಿಯಷ್ಟು ನೀರು ಕೇರಳದ ಮೂಲಕ ಅರಬ್ಬಿಸಮುದ್ರ ಸೇರುತ್ತಿದೆ. ಈ ನದಿಯನ್ನು ಕಾವೇರಿಗೆ ಸೇರುವಂತೆ ಮಾಡಿದರೆ ಬೆಂಗಳೂರು ಸೇರಿದಂತೆ ಕಾವೇರಿ ಭಾಗದ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ 9 ಸಾವಿರ ಕೋಟಿ ರು. ಅಂದಾಜು ವೆಚ್ಚದ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಸಿಡಬ್ಲ್ಯೂಸಿ ಸಭೆಗೆ ಈ ವಿಷಯವೇ ಬರದಂತೆ ತಮಿಳುನಾಡಿನ ಅಧಿಕಾರಿಗಳು ಹಲವಾರು ಬಾರಿ ಅಡ್ಡಪಡಿಸಿದರು. ಹಲವು ವರ್ಷಗಳ ಬಳಿಕ ಅನುಮತಿಗೆ ಬಂದಿತು. ಮೇಕೆದಾಟು ಯೋಜನೆ ಅನುಷ್ಟಾನಗೊಳಿಸಲು ಇಂದಿಗೂ ನೂರಾರು ಸವಾಲುಗಳಿವೆ. ತಮಿಳುನಾಡಿನ ಮಂದಿ ಎನ್‌ಜಿಟಿ ಸೇರಿದಂತೆ ಆಯಕಟ್ಟಿನ ಹುದ್ದೆಗಳಲ್ಲಿ ಇದ್ದು ಅವರು ಲಾಭಿ ಮಾಡುತ್ತಾ ಬಂದಿದ್ದಾರೆ. ಮೇಕೆದಾಟಿಗೆ ಅಡ್ಡಿಯಾಗದ್ದಲ್ಲಿ ಕಾವೇರಿ ನದಿಗೆ ಅಲ್ಲಲ್ಲಿ ಸಣ್ಣ ಪುಟ್ಟ ಡ್ಯಾಂಗಳನ್ನು ಕಟ್ಟಿ ನಾವು ಅಗತ್ಯವಿರುವ ನೀರನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.

ಸಭೆಯಲ್ಲಿ ಆದಿಚುಂನಗಿರಿ ಅಂಧರ ಶಾಲೆಯ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಹಿರಿಯ ರೈತ ಹೋರಾಟಗಾರ ಸಿ.ಪುಟ್ಟಸ್ವಾಮಿ, ಮಂಡ್ಯ ಜಿಲ್ಲಾ ರೈತಸಂಘದ ಅಧ್ಯಕ್ಷ ಬೋರಯ್ಯ, ಉಪಾಧ್ಯಕ್ಷ ರಾಮೇಗೌಡ, ಮೈಸೂರು ಜಿಲ್ಲಾ ರೈತಸಂಘದ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸು.ತ.ರಾಮೇಗೌಡ, ಕಾರ್ಯದರ್ಶಿ ಧರಣೇಶ್‌ ರಾಂಪುರ, ಪ್ರಗತಿಪರ ರೈತ ವಾಸು, ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಟೇಲ್‌ ರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್ ..........

ಕಾವೇರಿ ವಿಚಾರದಲ್ಲಿ ಸರ್ಕಾರವೇ ನಾಯಕತ್ವ ವಹಿಸಿಕೊಳ್ಳಲಿ: ಸುನಂದಾ ಜಯರಾಂ

ರಾಮನಗರ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಅದರ ತೀರ್ಪನ್ನು ಪಾಲಿಸುವುದು ಸರ್ಕಾರದ ಜವಾಬ್ದಾರಿ. ಆದರ ಜೊತೆಗೆ ರೈತರ ಹಿತ ಕಾಯುವುದು ಸರ್ಕಾರದ್ದೇ ಜವಾಬ್ದಾರಿ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ಒಂದು ಸಲಹಾ ಸಮಿತಿಯನ್ನು ಸರ್ಕಾರವೇ ರಚನೆ ಮಾಡಿಕೊಳ್ಳಲಿ. ಕಾವೇರಿ ವಿಚಾರದಲ್ಲಿ ನಾವ್ಯಾರೂ ನಾಯಕರಲ್ಲ ಸರ್ಕಾರವೇ ನಮ್ಮ ಪರವಾಗಿ ನಾಯಕತ್ವ ವಹಿಸಿ ಹೋರಾಟ ಮಾಡಲಿ ಎಂದು ಮಂಡ್ಯ ಜಿಲ್ಲಾ ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಆಗ್ರಹಿಸಿದರು.

ನಗರದ ಹೊರ ವಲಯದ ಅರ್ಚಕರಹಳ್ಳಿಯಲ್ಲಿರುವ ಶ್ರೀ ಬಾಲಗಂಗಾಧರನಾಥ ಅಂಧರ ಶಾಲೆಯಲ್ಲಿ ರೈತಸಂಘದ ವತಿಯಿಂದ ಆಯೋಜಿಸಿದ್ದ ಕಾವೇರಿ ವಿವಾದ ಹಿಂದೆ-ಇಂದು-ಮುಂದೆ ಸಂವಾದಲ್ಲಿ ವಿಚಾರ ಮಂಡಿಸಿದ ಅವರು, ಕಾವೇರಿ ಕೊಳ್ಳದ ರೈತರು ಹಾಗೂ ಜನರ ರಕ್ಷಣೆ ಮಾಡಬೇಕಾದ ಹೊಣೆ ಸರ್ಕಾರದ್ದಾಗಿದ್ದು, ಈಬಗ್ಗೆ ನಾಡಿನ ರೈತರ ಪರವಾಗಿ ಸರ್ಕಾರವೇ ಮುಂದೆ ನಿಂತು ಹೋರಾಟ ಮಾಡಬೇಕು ಎಂದರು.

ಬಾಕ್ಸ್‌..................

ಕಾವೇರಿ ಹೋರಾಟಕ್ಕೆ ನ್ಯಾಯ ಬೇಕು: ಅನ್ನದಾನೇಶ್ವರ ಶ್ರೀ

ರಾಮನಗರ: ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಇತಿಹಾಸ ಕಾಲದಿಂದಲೂ ಸಾಕಷ್ಟು ಅನ್ಯಾಯವಾಗುತ್ತಾ ಬಂದಿದೆ. ನಮ್ಮನ್ನಾಳುವವರ ಮೂರ್ಖತನದಿಂದಾಗಿ ನಾವು ಸಮಸ್ಯೆ ಎದುರಿಸುವಂತಾಗಿದೆ. ಮುಂದೆ ೨೦೩೩ರಲ್ಲಿ ಈ ರೀತಿ ಆಗಬಾರದು ಎಂದರೆ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಕಾವೇರಿ ವಿಚಾರದಲ್ಲಿ ರೈತ ಮುಖಂಡರು, ಪರಿಣಿತರ ಸಮಿತಿಯನ್ನು ರಚಿಸಿ ಕಾವೇರಿ ವಿಚಾರದಲ್ಲಿ ದೃಢ ಹೋರಾಟ ಕೈಗೊಳ್ಳಬೇಕು. ಈ ಕಾರ್ಯಕ್ಕೆ ನಮ್ಮ ಮಠ ಬೆಂಬಲಕ್ಕೆ ನಿಲ್ಲುತ್ತದೆ. ಎಲ್ಲರೂ ಒಗ್ಗೂಡಿ ಹೋರಾಟ ನಡೆಸಿ ಕಾವೇರಿ ವಿಚಾರದಲ್ಲಿ ನ್ಯಾಯ ದೊರಕಿಸಬೇಕು. ಯಾವ ಸರ್ಕಾರ ಬಂದರೂ ನಾವು ರೈತರ ಪರವಾಗೇ ನಿಲ್ಲುತ್ತೇವೆ ಎಂದು ಆದಿಚುಂನಗಿರಿ ಅಂಧರ ಶಾಲೆಯ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

ಕೋಟ್ ...............

ಕೆಆರ್‌ಎಸ್ ಡ್ಯಾಂಬಗ್ಗೆ ಚಿಂತನೆ ನಡೆಯಲಿ

ಕೆಆರ್ ಎಸ್ ಜಲಾಶಯವನ್ನು 1930ರಲ್ಲಿ ಪೂರ್ಣಗೊಳಿಸಿದಾಗ ಅಂದಿನ ಎಂಜಿನಿಯರ್‌ಗಳು ಇದರ ಆಯುಷ್ಯ 100 ವರ್ಷ ಎಂದು ಹೇಳಿದ್ದರು. ಮುಂದೆ 7 ವರ್ಷಗಳಲ್ಲಿ ಡ್ಯಾಂ ಆಯುಷ್ಯ ಮುಗಿಯುತ್ತದೆ. ಡ್ಯಾಂ ಸಂರಕ್ಷಣೆಗೆ ಸರ್ಕಾರ ಏನುಮಾಡಿದೆ ಎಂಬುದು ನಮಗೆ ತಿಳಿದಿಲ್ಲ. ಈ ಬಗ್ಗೆಯೂ ಯೋಜನೆಯಾಗಬೇಕು. ನಮ್ಮಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದು ಕುಡಿಯುವ ನೀರಿಗೆ ನದಿ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಅವಲಂಬಿಸಿದ್ದೇವೆ. ಭಾರತದಲ್ಲಿ ಜಗತ್ತಿನ ಶೇ.19 ರಷ್ಟು ಜನಸಂಖ್ಯೆ ಇದೆ. ಆದರೆ, ನಮ್ಮಲ್ಲಿ ಕೃಷಿ ಬಳಕೆಗೆ ಲಭ್ಯವಿರುವ ನೀರು ಮಾತ್ರ ಶೇ.4 ರಷ್ಟು ಮಾತ್ರ. ಇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಕಾವೇರಿ ವಿಚಾರದಲ್ಲಿ ಸಂಘಟನಾತ್ಮಕ ಕೆಲಸ ನಡೆಯಬೇಕು.

-ಸಿ.ಚಂದ್ರಶೇಖರ್, ನಿವೃತ್ತ ಐಪಿಎಸ್ ಅಧಿಕಾರಿ.

28ಕೆಆರ್ ಎಂಎನ್ 5,6.ಜೆಪಿಜಿ

5.ರಾಮನಗರದ ಅಂಧರ ಶಾಲೆಯಲ್ಲಿ ನಡೆದ ಕಾವೇರಿ ವಿವಾದ ಹಿಂದೆ-ಇಂದು-ಮುಂದೆ ಸಂವಾದದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಮಾತನಾಡಿದರು.

6.ರಾಮನಗರದ ಅಂಧರ ಶಾಲೆಯಲ್ಲಿ ನಡೆದ ಕಾವೇರಿ ವಿವಾದ ಹಿಂದೆ-ಇಂದು-ಮುಂದೆ ಸಂವಾದದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರನ್ನು ಅಭಿನಂದಿಸಲಾಯಿತು.