ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಒಂದೇ ರಾತ್ರಿ 6 ಅಂಗಡಿಗಳ ಬಾಗಿಲು ಮೀಟಿ ಸರಣಿ ಕಳ್ಳತನ ನಡೆದಿದೆ. ನಗರದ ಬಿ.ಎಚ್. ರಸ್ತೆಯಲ್ಲಿರುವ 6 ಅಂಗಡಿಗಳಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳ ತೋರಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ನಗದು ಹಾಗೂ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ನಗರದ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಆದೀಶ್ವರ ಮಾರ್ಕೆಟಿಂಗ್, ಬಿ.ಎಚ್. ರಸ್ತೆಯಲ್ಲಿರುವ ಅಪೊಲೋ ಮೆಡಿಕಲ್ ಸ್ಟೋರ್, ವುಡ್‌ಲ್ಯಾಂಡ್, ಕಾಂತಿ ಸ್ವೀಟ್ಸ್, ಅಥರ್ವ ಮೆಡಿಸ್ಕಿನ್ ಕ್ಲಿನಿಕ್ ಸೇರಿದಂತೆ 6 ಅಂಗಡಿಗಳ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಗಲ್ಲಾಪೆಟ್ಟಿಗೆ ಒಡೆದು ನಗದು ಹಾಗೂ ಅಂಗಡಿಯಲ್ಲಿದ್ದ ಇತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.ಕಳ್ಳರ ಎಲ್ಲಾ ಚಲನವಲನಗಳು ಅಂಗಡಿಗಳ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಹೊಸ ಬಡಾವಣೆ ಠಾಣೆ ಹಾಗೂ ನಗರಠಾಣೆ ಪೊಲೀಸರು ತಮ್ಮ ಸರಹದ್ದಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಳ್ಳತನವಾಗಿರುವ ಅಂಡಿಗಳಿಗೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ಸಂಬಂಧ ಹೊಸ ಬಡಾವಣೆ ಠಾಣೆ ಹಾಗೂ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.