ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಮಹಾಭಾರತ ದಟ್ಟ ಲೌಕಿಕತೆಯೊಂದಿಗೆ ಅಷ್ಟೇ ಆಧ್ಯಾತ್ಮಿಕವಾಗಿರುವ ಕೃತಿಯಾಗಿದೆ. ಸೃಷ್ಟಿಶೀಲವಾದುದು ಮಹಾಭಾರತ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಭಾನುವಾರ ಅಭಿರುಚಿ ಜೋಡುಮಾರ್ಗ ವತಿಯಿಂದ ನಡೆದ ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಒಂದು ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯವಸ್ಥಾತ್ಮಕವಾದ ಚಿಂತನೆಗೆ ರೂಪಾಂತರವನ್ನು ಅನುಭವಿಸುವ ಸಾಮರ್ಥ್ಯ ಕಡಿಮೆ ಎಂದ ತೋಳ್ಪಾಡಿ, ಹಲವು ಸಂದೇಹಗಳಿಗೆ ಉತ್ತರಿಸಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ಮಹಾಭಾರತ ಯಾತ್ರೆ ಕುರಿತು ಅವಲೋಕನ, ಸಂವಾದ, ಗೌರವಾರ್ಪಣೆ ನಡೆಯಿತು. ಬಳಿಕ ಗುರುರಾಜ ಮಾರ್ಪಳ್ಳಿ ಮತ್ತು ಬಳಗದಿಂದ ಬಡಗುತಿಟ್ಟು ಪ್ರಯೋಗ ‘ಋತುಪರ್ಣ’ ಪ್ರದರ್ಶನಗೊಂಡಿತು.ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿ, ತೋಳ್ಪಾಡಿ ಅವರ ಒಡನಾಟದ ಕುರಿತು ತನ್ನ ಅನುಭವವನ್ನು ಹಂಚಿಕೊಂಡರು. ಲೇಖಕ ಪೃಥ್ವೀರಾಜ್ ಕವತ್ತಾರ್ ಭಾಗವಹಿಸಿ ಮಾತನಾಡಿ, ಶಿವರಾಮ ಕಾರಂತರಷ್ಟೇ ತೋಳ್ಪಾಡಿಯವರು ಹೆಸರು ಮಾಡಿದ್ದು, ಮಹಾಭಾರತದಂಥ ಕೃತಿಗಳ ಬೆಳವಣಿಗೆಯಲ್ಲಿ ತೋಳ್ಪಾಡಿ ಅವರ ಪಾತ್ರ ಪ್ರಮುಖವಾದುದು ಎಂದರು.ಸಂವಾದ ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್ಟ, ರಂಗಕರ್ಮಿ ಮೂರ್ತಿ ದೇರಾಜೆ, ಕೃಷಿಕ ಲೇಖಕ ವಸಂತ ಕಜೆ, ಅಭಿರುಚಿ ಅಧ್ಯಕ್ಷ ಎಚ್. ಸುಂದರ ರಾವ್, ಮೋಹನ ಪೈ ಪಾಣೆಮಂಗಳೂರು ಹಾಗೂ ಉಪನ್ಯಾಸಕ ಚೇತನ್ ಮುಂಡಾಜೆ ಪಾಲ್ಗೊಂಡರು.
ಅಭಿರುಚಿ ಜೋಡುಮಾರ್ಗ ಕಾರ್ಯದರ್ಶಿ ಮಹಾಬಲೇಶ್ವರ ಹೆಬ್ಬಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಾಧೇಶ ತೋಳ್ಪಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಚೇತನ್ ಮುಂಡಾಜೆ ಸಂವಾದ ಕಾರ್ಯಕ್ರಮ ನಿರ್ವಹಿಸಿದರು.