ಸಾರಾಂಶ
- ವರಿಷ್ಠರೊಂದಿಗೆ ಮಾತುಕತೆಯ ನಂತರ ನಿರ್ಧಾರ: ಸಂಗಣ್ಣ ಕರಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಸಂಸದ ಸಂಗಣ್ಣ ಕರಡಿ ಅವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ರಾಜ್ಯ ನಾಯಕರೊಂದಿಗೆ ಸಮಯ ನಿಗದಿ ಮಾಡಿ, ಸಮಸ್ಯೆ ಇತ್ಯರ್ಥ ಮಾಡಲು ಮಾತುಕತೆ ಮಾಡಿಸಲಾಗುವುದು ಎಂದು ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ ಹೇಳಿದರು.
ಕರಡಿ ಅವರೊಂದಿಗೆ ಅವರ ನಿವಾಸದಲ್ಲಿ ಸಂಧಾನ ನಡೆಸಿದ ಬಳಿಕ ತಡರಾತ್ರಿ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ನೋವಾಗಿದೆ. ಆದರೂ ಸಹ ಅವರು ಪಕ್ಷಕ್ಕ ಮುಜುಗರವಾಗುವ ರೀತಿಯಲ್ಲಿ ಮಾತನಾಡಿಲ್ಲ. ಬದಲಾಗಿ ದೇಶದ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಹೀಗಾಗಿ, ಅವರಿಗೆ ಪಕ್ಷಗ ಬಗ್ಗೆ ಅಪಾರ ಗೌರವ ಇದೆ. ಜಿಲ್ಲೆಯಲ್ಲಿ ಪಕ್ಷ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಅವರಿಗೆ ಟಿಕೆಟ್ ಸಿಗದಿರುವುದರಿಂದ ಆಗಿರುವ ನೋವಿನ ಕುರಿತು ನಾಳೆ, ನಾಡಿದ್ದು ಪಕ್ಷದ ವರಿಷ್ಠರ ಜೊತೆಗೆ ಅವರೊಂದಿಗೆ ಮಾತುಕತೆಯಾಡುತ್ತೇವೆ. ಎಲ್ಲ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಮತ್ತು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನೂರಕ್ಕೆ ನೂರು ಗೆಲ್ಲಿಸುತ್ತೇವೆ ಎಂದರು.
ಟಿಕೆಟ್ ಬದಲಾವಣೆ ಕುರಿತು ನೇರವಾಗಿ ಪ್ರತಿಕ್ರಿಯಿಸದ ರವಿಕುಮಾರ, ಅವರು ಪ್ರೌಢರಾಗಿದ್ದಾರೆ. ಅವರು ಎಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿಯ ವಿರುದ್ಧವಾಗಲಿ, ಪಕ್ಷದ ವಿರುದ್ಧವಾಗಿ ಮಾತನಾಡಿಲ್ಲ, ಪಕ್ಷದ ಅಭ್ಯರ್ಥಿಯನ್ನು ಅವರೇ ಗೆಲ್ಲಿಸುತ್ತಾರೆ, ಅದರಲ್ಲಿ ಸಂಸದ ಸಂಗಣ್ಣ ಕರಡಿ ಅವರ ಪಾತ್ರ ದೊಡ್ಡದಿರುತ್ತದೆ ಎಂದು ಪರೋಕ್ಷವಾಗಿ ಕರಡಿ ಬೆಂಬಲಿಸುತ್ತಾರೆ ಎನ್ನುವುದನ್ನು ಹೇಳಿದರು.ಮಾತುಕತೆ ಮಾಡಿ ಮುಂದಿನ ತೀರ್ಮಾನ:
ಪಕ್ಷದ ಹಿರಿಯ ರವಿಕುಮಾರ ಬಂದು ಮಾತುಕತೆ ಮಾಡಿದ್ದಾರೆ. ವರಿಷ್ಟರ ಜೊತೆಗೆ ಮಾತುಕತೆಗೆ ಕರೆದಿದ್ದಾರೆ. ಅವರು ಹೇಳಿದ ತಕ್ಷಣ ತೆರಳಿ, ಮಾತುಕತೆ ಮಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.ಸಂಧಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಲೇ ಏನು ಹೇಳುವುದಿಲ್ಲ, ವರಿಷ್ಠರೊಂದಿಗೆ ಮಾತುಕತೆಯಾಡುತ್ತೇನೆ, ಅಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರೆ ಖಂಡಿತ ನಾನು ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಕರಡಿ ಮನವೊಲಿಸಲು ಕಸರತ್ತು:ಟಿಕೆಟ್ ವಂಚಿತ ಸಂಸದ ಸಂಗಣ್ಣ ಕರಡಿ ಮನವೊಲಿಸಲು ಗುರುವಾರ ವಿಧಾನಪರಿಷತ್‌ನ ವಿರೋಧ ಮುಖ್ಯಸಚೇತಕ ಎನ್. ರವಿಕುಮಾರ ಕರಡಿ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಟಿಕೆಟ್ ವಂಚಿತ ಸಂಗಣ್ಣ ನನಗೆ ಟಿಕೆಟ್ ತಪ್ಪಿದ್ದಕ್ಕಿಂತ ನಾಯಕರ ನಿರ್ಲಕ್ಷ್ಯದಿಂದ ನೋವಾಗಿದೆ. ಈಗಲೂ ನಾನು ಪ್ರಧಾನಿ ನರೇಂದ್ರ ಮೋದಿ ಅಭಿಯಾನಿಯಾಗಿದ್ದೆ ಎಂದು ಹೇಳಿದ್ದರಲ್ಲದೆ ತಮ್ಮ ಬೆಂಬಲಿಗರ ಸಭೆ ಸಹ ನಡೆಸಿ, ಶಕ್ತಿ ಪ್ರದರ್ಶನ ನಡೆಸಿದ್ದರು. ಪರಿಣಾಮ ಬೆಂಗಳೂರಿನಿಂದ ರವಿಕುಮಾರ ಕೊಪ್ಪಳಕ್ಕೆ ರಾತ್ರಿಯ ವೇಳೆಗೆ ಆಗಮಿಸಿ, ಅವರ ನಿವಾಸದಲ್ಲಿ ಮಾತುಕತೆ ನಡೆಸಿದರು.ಈ ವೇಳೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಶರಣು ತಳ್ಳಿಕೇರಿ ಸೇರಿದಂತೆ ಮೊದಲಾದವರಿದ್ದರು.