ಕರಡಿ ಬೆಂಬಲಿಗರಿಂದ ಶಕ್ತಿ ಪ್ರದರ್ಶನ

| Published : Mar 22 2024, 01:00 AM IST

ಸಾರಾಂಶ

ಪಕ್ಷದ ಅನೇಕ ರಾಜ್ಯ ಮುಖಂಡರು ಮಾತನಾಡಿದ್ದಾರೆ. ಹೀಗಾಗಿ ನಾಲ್ಕು ದಿನ ಕಾದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.

- ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಗ್ರಹ

- ನಾನು ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ

- ಪಕ್ಷದ ನಾಯಕರ ಮಾತನಾಡಿದ್ದಾರೆ, ಅವರಿಗೂ ಕಾಲವಕಾಶ ನೀಡೋಣ

-ನಾಲ್ಕು ದಿನ ಕಾದು ನೋಡಿ ನಿರ್ಧಾರ ತೆಗೆದುಕೊಳ್ಳೋಣ: ಕರಡಿಕನ್ನಡಪ್ರಭ ವಾರ್ತೆ ಕೊಪ್ಪಳ

ನನ್ನ ಬೆಂಬಲಿಗರು, ಹಿತೈಷಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷೇತರರಾಗಿಯಾದರೂ ಕಣಕ್ಕೆ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದೇನೆ. ಪಕ್ಷದ ಅನೇಕ ರಾಜ್ಯ ಮುಖಂಡರು ಮಾತನಾಡಿದ್ದಾರೆ. ಹೀಗಾಗಿ ನಾಲ್ಕು ದಿನ ಕಾದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಶಿವಶಾಂತ ಮಂಗಲಭವನದಲ್ಲಿ ಹಮ್ಮಿಕೊಂಡಿದ್ದ ಕರಡಿ ಸ್ವಾಭಿಮಾನಿಗಳ ಸಭೆಯಲ್ಲಿ ಮಾತನಾಡಿ, ಯಾವುದೇ ದಿಟ್ಟ ನಿರ್ಧಾರ ಪ್ರಕಟಿಸಲಿಲ್ಲ. ಬದಲಾಗಿ ಒತ್ತಡ ಹೇರುವ ತಂತ್ರ ಪ್ರಯೋಗ ಮಾಡಿದರು.

ನನಗೆ ಟಿಕೆಟ್ ತಪ್ಪಿದ್ದರಿಂದ ನನ್ನ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ಅವರು ಕರೆ ಮಾಡಿ ನನಗೆ ಒತ್ತಡ ಹಾಕಿದರು. ಸಭೆ ಕರೆದು, ಮುಂದಿನ ನಡೆ ತೀರ್ಮಾನಿಸಿ ಎಂದಿದ್ದರು. ಹೀಗಾಗಿ, ಸಭೆ ಕರೆದಿದ್ದೇನೆ, ಇಲ್ಲಿ ಅನೇಕರು ಬಿಜೆಪಿ ಟಿಕೆಟ್ ಪಡೆಯಲೇಬೇಕು ಎಂದಿದ್ದಾರೆ. ಪಡೆಯಲು ಆಗದಿದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡುವಂತೆಯೂ ಸಲಹೆ ನೀಡಿದ್ದಾರೆ. ಹಾಗಂತ ನಾನು ಈಗಲೇ ನಿರ್ಧಾರ ಮಾಡುವುದಿಲ್ಲ ಎಂದರು.

ನನ್ನ ಜೊತೆಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಶ ಮಾತನಾಡಿದ್ದಾರೆ. ಯಡಿಯೂರಪ್ಪ ಮಾತನಾಡಿ, ಸಭೆ ಮಾಡಬೇಡಿ, ಸರಿ ಮಾಡೋಣ ಎಂದಿದ್ದಾರೆ. ಮಾಜಿ ಸಚಿವ ರಾಮದಾಸ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದ್ದಾರೆ. ಅವರು ಸಹ ಸರಿಪಡಿಸುವ ಪ್ರಯತ್ನ ಮಾಡೋಣ. ನೀವು ಆತುರಪಡಬೇಡಿ ಎಂದಿದ್ದಾರೆ. ಹೀಗಾಗಿ, ಅವರ ಮಾತಿಗೆ ಬೆಲೆ ಕೊಟ್ಟು ನಾನು ಇನ್ನು ನಾಲ್ಕು ದಿನ ಕಾಯುತ್ತೇನೆ. ಅದಾದ ಮೇಲೆಯೂ ನನಗೆ ಉತ್ತರ ದೊರೆಯದಿದ್ದರೆ ಮತ್ತು ಪಕ್ಷ ಸರಿಯಾಗಿ ನಡೆಸಿಕೊಳ್ಳದಿದ್ದರೆ ನಾಲ್ಕು ದಿನಗಳ ತರುವಾಯ ಸಭೆ ಕರೆದು ತೀರ್ಮಾನ ಮಾಡೋಣ ಎನ್ನುವ ಮೂಲಕ ಪಕ್ಷದ ಹೈಕಮಾಂಡ್‌ಗೆ ನಾಲ್ಕು ದಿನಗಳ ಗಡುವು ನೀಡಿದರು.

ಸಭೆ ಮಾಡಿದ್ಯಾಕೆ:

ಕೊಪ್ಪಳ ಲೋಕಸಭಾ ಕ್ಷೇತ್ರದ ಕೋರ್ ಕಮಿಟಿಯ ಸಭೆಯನ್ನು ಜಿಲ್ಲಾ ಕೇಂದ್ರದಲ್ಲಿರುವ ಬಿಜೆಪಿಯ ಕಚೇರಿಯಲ್ಲಿ ಮಾಡಬೇಕಾಗಿತ್ತು. ಅದರ ಬದಲು ಕುಷ್ಟಗಿಯಲ್ಲಿ ಯಾಕೆ ಮಾಡಿದರೂ ಎಂದು ಅರ್ಥವಾಗುತ್ತಿಲ್ಲ. ಇನ್ನು ಎಲ್ಲರೂ ಒಗ್ಗೂಡಿ ನನ್ನ ಮನಗೆ ಬರುವ ಕುರಿತು ಕರೆ ಮಾಡಿದ್ದರು. ಆದರೆ, ಆಗ ನಾನು ಗದಗನಲ್ಲಿ ಇದ್ದಿದ್ದರಿಂದ ಈಗ ಆಗುವುದಿಲ್ಲ ಎಂದಿದ್ದೇನೆ. ಆದರೂ ಸಂಜೆ ವೇಳೆಗೆ ನಮ್ಮ ಅಳಿಯನ ಮನೆಗೆ ಶಾಸಕ ರಾಜಶೇಖರ ಪಾಟೀಲ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ಬಂದು ಮಾತನಾಡಿಕೊಂಡು ಹೋಗಿದ್ದಾರೆ. ಎಲ್ಲವನ್ನು ಇಲ್ಲಿ ಹೇಳಲು ಆಗುವುದಿಲ್ಲ ಎಂದರು.

ಆಗ್ರಹ:

ಬಿಜೆಪಿಯವರು ನೀಡಿರುವ ಟಿಕೆಟ್ ಬದಲಾಯಿಸಿ ಸಂಗಣ್ಣರಿಗೆ ನೀಡಬೇಕು. ಇಲ್ಲದಿದ್ದರೇ ಪಕ್ಷೇತರರಾಗಿ ಅಖಾಡಕ್ಕೆ ಇಳಿಯುವಂತೆ ಕರಡಿ ಹಿತೈಷಿಗಳು, ಬೆಂಬಲಿಗರು ಆಗ್ರಹಿಸಿದರು.

ಕೊಟ್ರಪ್ಪ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮ ಮಂಡಳ ಅಧ್ಯಕ್ಷ ಮಂಜನಾಥ ಹಂದ್ರಾಳ ಸ್ವಾಗತಿಸಿದರು.

ವಿರುಪಾಕ್ಷಯ್ಯನ ಗದುಗಿನಮಠ, ನಾಗರಾಜ ಬಿಲ್ಗಾರ, ವಿರುಪಾಕ್ಷಪ್ಪ, ಸಿದ್ದರಾಮಸ್ವಾಮಿ, ಎ.ವಿ. ಕಣವಿ, ಬಸವಂತರಾವ ಕುರಿ, ಬಸಲಿಂಗಪ್ಪ ಭೂತೆ, ರಾಜಶೇಖರಗೌಡ ನಾಡಗೌಡ, ಈರಣ್ಣ ಹುಬ್ಬಳ್ಳಿ, ಮಲ್ಲಪ್ಪ ಕವಲೂರು, ಮಂಜುಳಾ ಕರಡಿ, ಕೀರ್ತಿ ಪಾಟೀಲ, ತಿಪ್ಪೇರುದ್ರಸ್ವಾಮಿ ಇತರರಿದ್ದರು.