ಕನ್ನಡಪ್ರಭ ವಾರ್ತೆ ಹೊಸದುರ್ಗ
ರಾಜಕೀಯ ಸಾಮಾಜಿಕ ಸ್ಥಾನಮಾನಕ್ಕಾಗಿ ಶಕ್ತಿ ಪ್ರದರ್ಶನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಈ ಬಾರಿಯ ನಮ್ಮ 36ನೇ ವರ್ಷದ ಪಟ್ಟಾಭಿಷೇಕ ವಾರ್ಷಿಕೋತ್ಸವ ಹಾಗೂ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶವನ್ನು ಮೇ.8 ಮತ್ತು 9ರಂದು ಬದಾಮಿಯ ಬನಶಂಕರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದ ಪುರಿ ಸ್ವಾಮೀಜಿ ಹೇಳಿದರು.ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 1908ರಲ್ಲಿಯೇ ಆಗಿನ ಮದ್ರಾಸ್ ಕೌನ್ಸಿಲರ್ ಬಾದಾಮಿಯಲ್ಲಿ ದೇವಾಂಗ ಸಮಾಜದ ಅಭಿವೃದ್ಧಿಗಾಗಿ 40 ಎಕರೆ ಜಮೀನನ್ನು ನೀಡಿದ್ದರು. ಸಂಘಟನೆಯ ಕೊರತೆಯಿಂದಾಗಿ ಆ ಜಮೀನು ಒತ್ತುವರಿಯಾಗಿದ್ದು 36 ಎಕರೆ ಮಾತ್ರ ಉಳಿದಿದೆ. ಹಾಗಾಗಿ ಒತ್ತುವರಿ ತಡೆಯಬೇಕು. ಉಳಿದಿರುವ ಜಮೀನನ್ನು ಸಮಾಜದ ಅಭಿವೃದ್ಧಿಗಾಗಿ ಬಳಕೆಯಾಗಬೇಕು. ಸಮಾಜದ ಶಕ್ತಿಯನ್ನು ಪ್ರದರ್ಶಿಸಬೇಕೆಂಬ ಸದುದ್ದೇಶದಿಂದ ಈ ಬಾರಿ ಸಮಾವೇಶವನ್ನು ಬಾದಾಮಿಯಲ್ಲಿಯೇ ಹಮ್ಮಿಕೊಂಡಿದ್ದೇವೆ ಎಂದರು.
ಎರಡು ದಿನದ ಸಮಾವೇಶಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಆಗಮಿಸಲಿದ್ದಾರೆ. ಸಮಾವೇಶದಲ್ಲಿ 1 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸುವ ನಿರೀಕ್ಷೆ ಇದೆ. ಸಮಾಜದ ಸಂಘಟನೆ ಆಗಬೇಕು. ರಾಜಕೀಯ ಇಚ್ಛಾಶಕ್ತಿ ತೋರಿಸಲು ಸಮುದಾಯದ ಶಕ್ತಿ ಪ್ರದರ್ಶಿಸಬೇಕಿದೆ ಎಂದರು. ದೇವಾಂಗ ಸಮಾಜಕ್ಕೆ ನಾವು ಸ್ವಾಮೀಜಿ ಆದಾಗಿನಿಂದಲೂ ಸಮಾಜದ ಸಂಘಟನೆಗೆ ದೇಶದಲ್ಲೆಡೆ ಸಂಚರಿಸುತ್ತಿದ್ದೇನೆ. ಕೆಲವೊಂದು ಕಡೆ ಬರಲಿಕ್ಕೆ ಸಾಧ್ಯವಾಗದಿರಬಹುದು. ಮರಿ ಸ್ವಾಮಿ ಮಾಡಬೇಕು ಎಂಬ ಉದ್ದೇಶದಿಂದ ಮೂವರಿಗೆ ವಿದ್ಯಾಭ್ಯಾಸ ಕೊಡಿಸಲಾಗುತ್ತಿದೆ. ಸಮಾಜದ ಸಮಾವೇಶಗಳಿಂದ ಉಳಿದ ಹಣವನ್ನು ಮಠದ ಅಭಿವೃದ್ಧಿಗೆ ಬಳಸಿಲ್ಲ. ಅದನ್ನು ಸಮಾಜದವರಿಗೆ ಬಿಟ್ಟಿದ್ದೇವೆ. ನಮ್ಮ 36ನೇ ಪಟ್ಟಾಭಿಷೇಕ ಮಹೋತ್ಸವದ ಸ್ಮರಣಾರ್ಥ ಮೂವತ್ತಾರು ತುಲಾಭಾರಗಳನ್ನು ನಾಣ್ಯಗಳಲ್ಲಿ ಮಾಡಲಿದ್ದಾರೆ. ಒಂದು ತುಲಾಭಾರಕ್ಕೆ 80 ಸಾವಿರದಿಂದ 1 ಲಕ್ಷ ರು. ವರೆಗೆ ಆಗಬಹುದು. ಭಕ್ತರು ನೆರವು ನೀಡಬೇಕು. ಎಂದು ತಿಳಿಸಿದರು.ಸಭೆಯಲ್ಲಿ ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ, ಚಿತ್ರದುರ್ಗ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಗೋ.ತಿಪ್ಪೇಶ್, ಹೊಸದುರ್ಗ ದೇವಾಂಗ ಸಮಾಜದ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು.
ಈ ವೇಳೆ ದೇವಾಂಗ ಸಂಘದ ಜಿಲ್ಲಾ ಗೌರವಾಧ್ಯಕ್ಷ ನಾಗೇಶಪ್ಪ, ಕಾರ್ಯದರ್ಶಿ ಎಸ್.ಸುರೇಶ್, ತಾಲೂಕು ಕಾರ್ಯದರ್ಶಿ ಎಂ.ಆರ್.ಶಾಂತಪ್ಪ, ಬನಶಂಕರಿ ಬ್ಯಾಂಕ್ ಅಧ್ಯಕ್ಷ ಕಮಲ್ ರಾಮಚಂದ್ರಪ್ಪ, ನಾರಾಯಣಸ್ವಾಮಿ, ಶ್ರೀರಾಂಪುರ ರಮೇಶ್, ರಂಗನಾಥ್, ಕಾಚಾಪುರ ರಂಗಪ್ಪ, ಪತ್ರಕರ್ತ ಎಸ್.ಸುರೇಶ್ ನೀರಗುಂದ, ಮೇಘಾ ರಾಮಚಂದ್ರ, ಅಸಂದಿ ಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.