ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ಜನಸ್ಪಂದನಾ ಸಾರ್ವಜನಿಕರ ಕೆಲಸ ಕಾರ್ಯಗಳ ಜತೆಗೆ ದೂರದೃಷ್ಟಿ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದರು.ಬುಧವಾರ ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.ಸ್ಥಳದಲ್ಲಿಯೇ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ನಗರ-ಪಟ್ಟಣಗಳಲ್ಲಿ ಮಾತ್ರವಲ್ಲದೇ ಹಳ್ಳಿಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗ್ರಾಮೀಣ ಪ್ರದೇಶದ ಜನರ ಅಹವಾಲುಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನೂರಾರು ಅರ್ಜಿಗಳು ಬರುತ್ತಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ತಡವಾದರೂ ಅರ್ಜಿದಾರರ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಬಡವ, ರೈತ, ಕಾರ್ಮಿಕರೆಲ್ಲರಿಗೂ ನ್ಯಾಯ ಒದಗಿಸುವ ಕೆಲಸ ನಡೆಯುತ್ತಿದೆ ಎಂದರು.
ಇನ್ನೂ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ. ಎಲ್ಲ ರೈತರು ಕಡ್ಡಾಯವಾಗಿ ಆಧಾರ್ ಸಿಡಿಂಗ್ ಮಾಡಿಸುವಂತೆ ತಿಳಿಸಿದರು.೨೪೯ ಅರ್ಜಿ ಸ್ವೀಕೃತಿಯಾಗಿದ್ದು, ಕಂದಾಯ ವಿಭಾಗಕ್ಕೆ ೯೦, ಪಂಚಾಯತ್ ರಾಜ್ ಇಲಾಖೆಗೆ ೪೦, ನಗರಾಭಿವೃದ್ಧಿ ಇಲಾಖೆಗೆ ೩೬, ಸಾಕ್ಷರತಾ ಇಲಾಖೆಗೆ ೧೫, ಸಮಾಜ ಕಲ್ಯಾಣ ಇಲಾಖೆಗೆ ೧೫, ಆರೋಗ್ಯ ಇಲಾಖೆಗೆ ೯ ಸೇರಿದಂತೆ ವಿವಿಧ ಇಲಾಖೆಗಳಿಗೆ ಒಟ್ಟು ೩೬ ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ತಿಳಿಸಿದರು.
ಅಪೂರ್ಣಗೊಂಡ ಬಾಬು ಜಗಜೀವನ್ ರಾಮ್ ಸಮುದಾಯ ಭವನ, ಕನಕಾಚಲಪತಿ ದೇವಸ್ಥಾನದ ದಾಸೋಹ ಭವನ ಕಟ್ಟಡಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವುದು, ಕನಕಾಚಲಪತಿ ದೇವಸ್ಥಾನ ಜಾಗೆ ಹದ್ದುಬಸ್ತು, ವಿವಿಧ ಸರ್ಕಾರಿ ಕಚೇರಿ ಆರಂಭ, ವೈದ್ಯರ ನೇಮಕ, ಹುಲಿಹೈದರದಲ್ಲಿ ರೈತ ಸಂಪರ್ಕ ಕೇಂದ್ರ ಹೊಸ ಕಟ್ಟಡ ನಿರ್ಮಾಣ, ಮುಸಲಾಪೂರ ಅಥವಾ ಚಿಕ್ಕಮಾದಿನಾಳ ಗ್ರಾಮವನ್ನು ಹೋಬಳಿ ಕೇಂದ್ರವೆಂದು ಘೋಷಿಸುವುದು, ಶಾಲಾ ಸಮಯಕ್ಕೆ ಬಸ್ ಬಿಡುವುದು, ರೈತರ ಸಾಲಕ್ಕೆ ನೋಟಿಸ್ ನೀಡದೆ ಇರುವುದು, ಪತ್ರಕರ್ತರಿಗೆ ನಿವೇಶನ, ಪತ್ರಕರ್ತರ ಸಂಘಕ್ಕೆ ನಿವೇಶನ ಹಾಗೂ ಸರ್ಕಾರಿ ಕಟ್ಟಡ ನೀಡುವುದು ಸೇರಿದಂತೆ ನಾನಾ ಅಹವಾಲುಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಿದರು.ನಿಲಯದ ಕಟ್ಟಡ ಕಾಮಗಾರಿ ಆರಂಭಿಸಿ: ಇಲ್ಲಿನ ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ೨೦೧೭-೧೮ರಲ್ಲಿ ೪ ಕೊಠಡಿಗಳ ನಿರ್ಮಾಣಕ್ಕೆ ₹೩೩ ಲಕ್ಷ ಬಿಡುಗಡೆಯಾಗಿತ್ತು. ಈಗಾಗಲೇ ಕೆಆರ್‌ಐಡಿಎಲ್ ವಿಭಾಗ ₹೨೯ ಲಕ್ಷ ಅನುದಾನ ಮಂಜೂರು ಮಾಡಿದೆ. ಆರು ವರ್ಷ ಕಳೆದರೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾ ಹೊರಟಿದ್ದಾರೆ. ನಿಲಯದ ವಿದ್ಯಾರ್ಥಿಗಳಿಗೆ ಕೊಠಡಿ ಇಲ್ಲವಾಗಿದ್ದರಿಂದ ಊಟಕ್ಕೆ ಬಯಲಲ್ಲೆ ಕೂರುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದೇನೆ ಎಂದು ಅರ್ಜಿದಾರ ಪಾಮಣ್ಣ ಅರಳಿಗನೂರು ತಿಳಿಸಿದರು.
ಕನ್ನಡಪ್ರಭ ವರದಿಗೆ ಸ್ಪಂದನೆಪಟ್ಟಣದ ೧೭ನೇ ವಾರ್ಡಿನ ಸ್ವಾಮೇರ ಗದ್ದಿಯ ಆಶ್ರಯ ಮನೆಗಳ ಫಲಾನುಭವಿಗಳು 21 ವರ್ಷಗಳಿಂದ ಹಕ್ಕುಪತ್ರ, ಮೂಲಸೌಲಭ್ಯದಿಂದ ವಂಚಿತವಾಗಿರುವ ಕುರಿತು ಕನ್ನಡಪ್ರಭ ಜೂ.೨೬ರಂದು ವಿಸ್ತೃತ ವರದಿ ಪ್ರಕಟ ಮಾಡಿದೆ. ಅದು ಕೂಡ ಜನಸ್ಪಂದನಾ ಕಾರ್ಯಕ್ರಮದಲ್ಲಿ ಚರ್ಚೆಯಾಗಿದ್ದು, ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಹಕ್ಕು ಪತ್ರ ವಿತರಿಸುವುದಾಗಿ ಡಿಸಿ ತಿಳಿಸಿದರು. ಇನ್ನೂ ತಾಲೂಕಿನ ಚಿರ್ಚನಗುಡ್ಡ ತಾಂಡಾದ ನಿವಾಸಿಗಳಿಗೂ ಹಕ್ಕುಪತ್ರ ನೀಡುವಂತೆ ಇಒಗೆ ಸೂಚಿಸಲಾಯಿತು. ಸ್ವಾಮೇರ ಗದ್ದಿಯ ಹಕ್ಕುಪತ್ರ ವಿತರಣೆ ವಿಚಾರವಾಗಿ ಆರು ಅರ್ಜಿಗಳು ಸಲ್ಲಿಕೆಯಾಗಿವೆ.