ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಳಕಳಿಯಿಂದ ತಾಲೂಕಿನಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತಂದು, ತಾಲೂಕಿನಲ್ಲಿ ಶೈಕ್ಷಣಿಕ ಹಬ್ಬವನ್ನಾಗಿ ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ/ ಚಡಚಣ
ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಬಂಥನಾಳದ ಶ್ರೀ ಸಂಗನಬಸವ ಮಹಾಸ್ವಾಮೀಜಿಗಳು ಜೋಳಿಗೆ ಹಿಡಿದು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಳಕಳಿಯಿಂದ ತಾಲೂಕಿನಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತಂದು, ತಾಲೂಕಿನಲ್ಲಿ ಶೈಕ್ಷಣಿಕ ಹಬ್ಬವನ್ನಾಗಿ ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಹೊರ್ತಿ ಗ್ರಾಮದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಾಗೂ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನ ಪ್ರೌಢಶಾಲೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಡಿಪ್ಲೊಮಾ ಕಾಲೇಜು ಕಟ್ಟಡ, ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜುಗಳು, ಪ್ರೌಢ ಶಾಲೆಗಳು, ವಸತಿ ಶಾಲೆಗಳನ್ನು ತರುವುದರ ಮೂಲಕ ಹಿಂದುಳಿದ ಗಡಿ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಅಂದು ನೆಟ್ಟ ಶಿಕ್ಷಣದ ಸಸಿ ಇಂದು ಬೆಳೆದು ಅನೇಕ ಭಾಗದಲ್ಲಿ ಶಿಕ್ಷಣದ ದಾಹ ನಿಗಿಸಿದೆ. ಮಕ್ಕಳೆ ದೇವರು, ಶಾಲೆಯೇ ಜೀವಂತ ದೇವಾಲಯ ಎಂಬ ಪರಿಕಲ್ಪನೆ ಶ್ರೀಗಳಲ್ಲಿ ಇತ್ತು. ಶ್ರೀ ಸಿದ್ದೇಶ್ವರ ಶ್ರೀಗಳು ಪ್ರವಚನಗಳ ಮೂಲಕ ಜಿಲ್ಲೆಯ ಜನರಿಗೆ ಹೃದಯ ಶ್ರೀಮಂತನಾಗಿಸಿದರೆ, ಬಂಥನಾಳದ ಶ್ರೀಗಳು ಶಿಕ್ಷಣ ದಾಸೋಹ ನೀಡಿದ್ದಾರೆ. ಮಹಾನ ಶರಣರು, ಸಂತರ ಆದರ್ಶಗಳು ನಮಗೆಲ್ಲ ಪ್ರೇರಣೆಯಾಗಲಿವೆ ಎಂದು ಹೇಳಿದರು.ಹೊರ್ತಿ ಗ್ರಾಮ ದೊಡ್ಡ ಗ್ರಾಮವಾಗಿದ್ದು, ಇಲ್ಲಿ ಈ ಹಿಂದೆಯೇ ಸರ್ಕಾರಿ ಪ್ರೌಢಶಾಲೆ ಉದ್ಘಾಟನೆಯಾಗಬೇಕಾಗಿತ್ತು. ಶ್ರೀ ರೇವಣಸಿದ್ದೇಶ್ವರನ ಕೃಪಾರ್ಶೀವಾದ ಇಂದು ಭಾರತದ ಶ್ರೇಷ್ಠ ತತ್ವಜ್ಞಾನಿ ಭಾರತದ ಸಂಸ್ಕೃತಿ ಪರಂಪರೆಯನ್ನು ವಿಶ್ವಕ್ಕೆ ಸಾರಿದ ದಾರ್ಶನಿಕ ಯುಗ ಪುರುಷ ಸ್ವಾಮಿವಿವೇಕಾನಂದರ ಜಯಂತ್ಯುತ್ಸವ ದಿನ ಪ್ರೌಢ ಶಾಲೆ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ. ಯುವ ಸಮುದಾಯಕ್ಕೆ ಸ್ವಾಮಿ ವಿವೇಕಾನಂದರ ಆದರ್ಶಗಳು ಪ್ರೇರಣೆಯಾಗಲಿ ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೊಂಡ ಮಾತನಾಡಿ, ಶಿಕ್ಷಣ ಮುನುಷ್ಯನಿಗೆ ಆಭರಣವಿದ್ದಂತೆ. ವಿದ್ಯೆ, ವಿನಯ,ಸಂಸ್ಕಾರ ಕಲಿಸುತ್ತದೆ. ಡಾ.ಅಂಬೇಡ್ಕರ್ ಶಿಕ್ಷಣದಿಂದ ಇಡೀ ದೇಶ ಬದಲಾವಣೆ ಮಾಡಿದ್ದಾರೆ. ಶಿಕ್ಷಣ ಸಮಾಜ,ಮನುಷ್ಯ ಬದಲಾವಣೆಯ ದಿವ್ಯ ಔಷಧಿ ಎಂದರು.ಇಲಿಯಾಸ ಬೋರಾಮಣಿ, ಭೀಮಣ್ಣಾ ಕೌಲಗಿ, ಮಹಾದೇವ ಗಡ್ಡದ, ಶ್ರೀಮಂತ ಇಂಡಿ ,ಜಟ್ಟೆಪ್ಪ ರವಳಿ, ಗುರಣ್ಣಗೌಡ ಪಾಟೀಲ, ಬಿ.ಸಿ ಸಾಹುಕಾರ ಸೇರಿದಂತೆ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕ ವೃಂದ್ದ, ಸಿಬಂದ್ದಿ, ಗ್ರಾಮದ ಮುಖಂಡರು ಇದ್ದರು.
ಸರಕಾರಿ ಶಾಲೆಗಳು ಸುಸಜ್ಜಿತಗೊಂಡಲ್ಲಿ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಈ ಭಾಗದಲ್ಲಿ ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ಆದರೆ ಬಡವರಿಗೆ, ದೀನದುರ್ಬಲರಿಗೆ ಆರ್ಥಿಕ ಅಸಮಾನತೆಯುಳ್ಳವರಿಗೆ ಶಿಕ್ಷಣ ಪಡೆಯುವುದು ಕಷ್ಟ. ಎಷ್ಟೋ ಜನರು ಬೇರೆ, ಬೇರೆ ಸಮಾಜಗಳಲ್ಲಿ ಕೂಡಾ ಬಡವರಿದ್ದಾರೆ. ಇಂತಹ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಸರಕಾರಿ ಪ್ರೌಢ ಶಾಲೆ ತಂದಿರುವೆ. ಇಂದು ಅನೇಕ ಮಠ ಮಾನ್ಯಗಳು, ಬುದ್ದಿಜೀವಿಗಳು, ಶಿಕ್ಷಣದ ಬಗ್ಗೆ ಕಾಳಜಿಯುಳ್ಳವರು ಶಿಕ್ಷಣ ಸಂಸ್ಥೆ ಕಟ್ಟಿ ಸಾಮಾಜಿಕ ಕಾರ್ಯ ಮಾಡಿರುವುದು ಅಭಿನಂದನಾರ್ಹ ಕೆಲಸ. ಇಂದು ತಾಲೂಕಿನಲ್ಲಿ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.ಯಶವಂತರಾಯಗೌಡ ಪಾಟೀಲ, ಶಾಸಕರು