ದಕ್ಷಿಣ ಪದವೀಧರ ಶಿಕ್ಷಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ

| Published : Apr 10 2025, 01:01 AM IST

ದಕ್ಷಿಣ ಪದವೀಧರ ಶಿಕ್ಷಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಪದವೀಧರ ಶಿಕ್ಷಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಹೇಳಿದರು. ನಗರದ ವಿವೇಕಾನಂದ ಬಿ.ಇಡಿ ಕಾಲೇಜು, ಬಾಣಾವರ ಹಾಗೂ ಅರಸೀಕೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚಿಗೆ ಭೇಟಿ, ನೀಡಿ ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಲಾ, ಕಾಲೇಜುಗಳ ಮೂಲ ಸೌಕರ್ಯ ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ವಾರ್ಷಿಕ ಎರಡು ಕೋಟಿ ರು.ಅನುದಾನ ನೀಡುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ದಕ್ಷಿಣ ಪದವೀಧರ ಶಿಕ್ಷಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಹೇಳಿದರು.

ನಗರದ ವಿವೇಕಾನಂದ ಬಿ.ಇಡಿ ಕಾಲೇಜು, ಬಾಣಾವರ ಹಾಗೂ ಅರಸೀಕೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚಿಗೆ ಭೇಟಿ, ನೀಡಿ ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಲಾ, ಕಾಲೇಜುಗಳ ಮೂಲ ಸೌಕರ್ಯ ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ವಾರ್ಷಿಕ ಎರಡು ಕೋಟಿ ರು.ಅನುದಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಕಾಂಪೌಂಡ್, ಶೌಚಾಲಯ ಒಳಗೊಂಡಂತೆ ವಿವಿಧ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಬಂದಿವೆ. ವಿಧಾನ ಪರಿಷತ್ ಕೋಟಾದಲ್ಲಿ ಬರುವ ಅನುದಾನವನ್ನು ಉತ್ತಮ ಕಾರ್ಯಗಳಿಗೆ ಬಳಕೆ ಮಾಡುವಂತೆ ತಿಳಿಸಲಾಗಿದೆ.

ಕೆಲ ಪದವಿ ಕಾಲೇಜುಗಳಲ್ಲಿ ಕ್ಯಾಂಟಿನ್ ಸೌಲಭ್ಯದ ಬೇಡಿಕೆಯಿಟ್ಟಿದ್ದಾರೆ. ಸಾಧಕ, ಬಾಧಕಗಳನ್ನು ಪರಿಶೀಲಿಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದೆ. ಅತಿಥಿ ಉಪನ್ಯಾಸಕರ ಸಂಕಷ್ಟವನ್ನು ಪರಿಷತ್ತಿನಲ್ಲಿ ತೆರದಿಟ್ಟಿದ್ದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ದಕ್ಷಿಣ ಪದವೀಧರ ಶಿಕ್ಷಕರ ಕೇತ್ರ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಯಳನಡು ಜಗದ್ಗುರು ಜ್ಞಾನಪ್ರಭು ಶ್ರೀಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಜನಸೇವೆಗೆ ದೊರೆತಿರುವ ಅವಕಾಶವನ್ನು ಪರಿಷತ್ ಸದಸ್ಯರು ಸದ್ಭಳಕೆ ಮಾಡಿಕೊಳ್ಳಬೇಕು. ಆಗ ಮಾತ್ರವೇ ಸುಧಾರಣೆ ಸಾಧ್ಯವಾಗಲಿದೆ. ವಿಧಾನ ಪರಿಷತ್ತಿನ ಸದಸ್ಯರೊಬ್ಬರು ಮೊದಲ ಬಾರಿಗೆ ನಮ್ಮ ವಿದ್ಯಾಸಂಸ್ಥೆಗೆ ಆಗಮಿಸಿ ಕುಂದುಕೊರತೆ ಆಲಿಸಿರುವುದು ಪ್ರಶಂಸನೀಯ. ಇಂತಹ ಉದಾರ ವ್ಯಕ್ತಿತ್ವದ ಜನಪ್ರತಿನಿಧಿಗಳು ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲಿ ಎಂದು ಶ್ರೀಗಳು ಆಶಿಸಿದರು.

ಜೆಡಿಎಸ್ ಮುಖಂಡ ಎನ್.ಆರ್‌.ಸಂತೋಷ್ ಮಾತನಾಡಿ, ವಿಧಾನ ಪರಿಷತ್ತಿನ ಚುನಾವಣೆ ಗೆಲುವಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶಕ್ತಿಮೀರಿ ದುಡಿದಿದ್ದಾರೆ. ತಾಲೂಕನ್ನು ಬರದ ಸೀಮೆಯ ಅಪಖ್ಯಾತಿಯಿಂದ ತೊಳೆಯುವ ಅಗತ್ಯವಿದ್ದು ಹೆಚ್ಚಿನ ಅನುದಾನ ನೀಡಬೇಕು. ಕೇಂದ್ರದಲ್ಲಿ ಪ್ರಧನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ರಾಜ್ಯ ಪ್ರತಿನಿಧಿಸಿ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಹಲವು ಯೋಜನೆಗಳನ್ನು ರಾಜ್ಯಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ರಾಜ್ಯದಲ್ಲಿ ಎನ್‌ಡಿಎ ಬಲಗೊಳಿಸಲು ಸಂಸದರು, ಶಾಸಕರ ಜತೆ ಶಕ್ತಿಮೀರಿ ಹೋರಾಟ ನಡೆಸಲಾಗುವುದು ಎಂದರು. ಇದೇ ವೇಳೆ ಬಾಣಾವರ ಹಾಗೂ ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ ಮಾಹಿತಿ ವಿನಿಮಯ ಮಾಡಿಕೊಂಡರು.

ಉಪನ್ಯಾಸಕ ಶೇಖರ್ ಸಂಕೋಡನಹಳ್ಳಿ ಮಾತನಾಡಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಸಂಘಟಿತ ಹೋರಾಟ ನಡೆಸಿದ್ದಾರೆ. ವಾಸ್ತವ ಮನಗಂಡು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೂ ಪರಿಷತ್ತಿನ ಸದಸ್ಯರು ಅಗತ್ಯ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾದ್ಯಕ್ಷ ಎ.ಬಿ.ಗುರುಸಿದ್ದೇಶ್, ಶಶಿಧರ್, ಗ್ರಾಪಂ ಸದಸ್ಯ ಉಮೇಶ್ ಭೋವಿ, ಮುಖಂಡರಾದ ಡಾ.ರವಿಕುಮಾರ್, ಮೋಹನ್ ಕುಮಾರ್, ಹರ್ಷವರ್ಧನ್ ರಾಜ್, ಉಪೇಂದ್ರ, ಜಯದೇವ್, ಲೋಕೇಶ್ ಸೇರಿದಂತೆ ಹಲವರು ಸಾಥ್ ನೀಡಿದರು.