ನಾಲಾ-ಗಟಾರುಗಳ ಸಮರ್ಪಕ ಸ್ವಚ್ಛತೆ ಇಲ್ಲ, ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆಯೂ ಇಲ್ಲ. ಇದರ ಪರಿಣಾಮ, ಶುಕ್ರವಾರ ಸುರಿದ ಧಾರಾಕಾರ ಮಳೆಗೆ ವಾಣಿಜ್ಯನಗರಿ ಹುಬ್ಬಳ್ಳಿಯ ಹಲವು ರಸ್ತೆಗಳು ಚರಂಡಿಗಳಾಗಿ ಮಾರ್ಪಟ್ಟಿವೆ.
ಹುಬ್ಬಳ್ಳಿ:
ನಾಲಾ-ಗಟಾರುಗಳ ಸಮರ್ಪಕ ಸ್ವಚ್ಛತೆ ಇಲ್ಲ, ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆಯೂ ಇಲ್ಲ. ಇದರ ಪರಿಣಾಮ, ಶುಕ್ರವಾರ ಸುರಿದ ಧಾರಾಕಾರ ಮಳೆಗೆ ವಾಣಿಜ್ಯನಗರಿ ಹುಬ್ಬಳ್ಳಿಯ ಹಲವು ರಸ್ತೆಗಳು ಚರಂಡಿಗಳಾಗಿ ಮಾರ್ಪಟ್ಟಿವೆ. ಈ ಮೂಲಕ ಒಳಚರಂಡಿಗಳ ಅವ್ಯವಸ್ಥೆ ಬಟಾಬಯಲಾಗಿದೆ. ನಗರದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳ ಮೇಲೆ ಕಸ-ತ್ಯಾಜ್ಯ ಹರಡಿಕೊಂಡು ದುರ್ವಾಸನೆ ಹರಡಿದೆ. ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಲ್ಲಿನ ತುಳಜಾಭವಾನಿ ದೇವಸ್ಥಾನ ಸರ್ಕಲ್, ಅದರ ಹಿಂಭಾಗ ಹಾಗೂ ಮೂರುಸಾವಿರ ಮಠದ ಎದುರಿನ ರಸ್ತೆಗಳು ಚರಂಡಿ ನೀರಿನಿಂದ ತುಂಬಿ ಅಸಹನೀಯ ಸ್ಥಿತಿ ನಿರ್ಮಾಣವಾಗಿದೆ. ಚರಂಡಿ ದುರಸ್ತಿಗಾಗಿ ಎರಡು ತಿಂಗಳ ಹಿಂದೆಯೇ ರಸ್ತೆ ಅಗೆದು ತಗ್ಗು ತೆಗೆಯಲಾಗಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಶುಕ್ರವಾರದ ಮಳೆಗೆ ಚರಂಡಿ ನೀರು ರಸ್ತೆಗೆ ಹರಿದ ಪರಿಣಾಮ ಶನಿವಾರವೂ ಜನರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಯಿತು.
ಕಮರಿಪೇಟೆ, ಹಳೇ ಹುಬ್ಬಳ್ಳಿಯ ಹೆಗ್ಗೇರಿ, ಲಿಂಗರಾಜನಗರ ಹಾಗೂ ಉಣಕಲ್ಲ ನಾಲಾಗಳು ತುಂಬಿ ಹರಿದ ಪರಿಣಾಮ ಸುತ್ತಮುತ್ತಲಿನ ನಿವಾಸಿಗಳು ತೊಂದರೆ ಅನುಭವಿಸಿದರು. ನಾಲಾಗಳಲ್ಲಿನ ಕಸ-ತ್ಯಾಜ್ಯ ನೀರಿನೊಂದಿಗೆ ಮನೆಗಳಿಗೆ ನುಗ್ಗಿದೆ. ಗೋಕುಲ್ ರಸ್ತೆ, ವಿದ್ಯಾನಗರ, ಅಕ್ಷಯ ಪಾರ್ಕ್, ಲಿಂಗರಾಜನಗರ, ನವನಗರ ಹಾಗೂ ಹಳೇ ಹುಬ್ಬಳ್ಳಿಯ ಈಶ್ವರ ದೇವಸ್ಥಾನ ರಸ್ತೆ ಸೇರಿದಂತೆ ಹಲವು ಕಡೆ ಮೊಣಕಾಲುದ್ದ ನೀರು ನಿಂತಿರುವುದು ಶನಿವಾರ ಕಂಡುಬಂದಿತು.ಶನಿವಾರ ಬೆಳಗ್ಗೆ ನೀರು ಇಳಿದರೂ ರಸ್ತೆಗಳ ಮೇಲೆ ಹೂಳು, ಪ್ಲಾಸ್ಟಿಕ್ ಹಾಗೂ ಕಸ ಉಳಿದಿತ್ತು. ದುರ್ವಾಸನೆಯ ಜತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ರಾತ್ರಿಯಿಡೀ ನೀರು ಹೊರಹಾಕುವ ಕಾಯಕ:ಇಲ್ಲಿನ ನವನಗರ, ಶಾಂತಿನಗರ ಹಾಗೂ ಅನ್ನದಾನೇಶ್ವರ ನಗರದ ತಗ್ಗು ಪ್ರದೇಶಗಳ 30ಕ್ಕೂ ಹೆಚ್ಚು ಮನೆಗಳಿಗೆ ಶುಕ್ರವಾರ ಸುರಿದ ಮಳೆ ನೀರು ನುಗ್ಗಿದೆ. ನಿವಾಸಿಗಳು ರಾತ್ರಿಯಿಡೀ ನೀರು ಹೊರಹಾಕುವಲ್ಲಿ ನಿರತರಾಗಿದ್ದರು. ಮನೆಗಳಲ್ಲಿನ ಅಡುಗೆ ಸಾಮಗ್ರಿ, ಬಟ್ಟೆಬರೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿವೆ ಎಂದು ಅಳಲು ತೋಡಿಕೊಂಡರು. ಇನ್ನು ಹೊಸೂರು ವೃತ್ತದ ಹತ್ತಿರದ ಕಾಟನ್ ಮಾರ್ಕೆಟ್ನಲ್ಲಿರುವ ಸಾಂಸ್ಕೃತಿಕ ಭವನದ ಕೆಳಗೆ ಮಳೆನೀರು, ಕೆಸರು ನುಗ್ಗಿದೆ.
ಪ್ರತಿ ವರ್ಷ ಮಳೆ ಬಂದಾಗ ಇದೇ ಸಮಸ್ಯೆ ಎದುರಾಗುತ್ತಿದೆ. ನಾಲಾ ಸ್ವಚ್ಛಗೊಳಿಸಿದ್ದೇವೆ ಎನ್ನುವ ಪಾಲಿಕೆ, ಒಂದೇ ಮಳೆಗೆ ರಸ್ತೆಗಳ ಮೇಲೆ ತೇಲಿಬರುವ ಕಸಕ್ಕೆ ಕಡಿವಾಣ ಹಾಕುತ್ತಿಲ್ಲ. ತಾತ್ಕಾಲಿಕ ಕ್ರಮಗಳನ್ನು ಬಿಟ್ಟು ನಾಲಾ ಸ್ವಚ್ಛತೆ, ಚರಂಡಿ ದುರಸ್ತಿ ಹಾಗೂ ಮಳೆ ನೀರು ಹರಿವಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.ಶಿರಗುಪ್ಪಿಯಲ್ಲಿ ಮನೆ ಕುಸಿತಶುಕ್ರವಾರದ ಧಾರಾಕಾರ ಮಳೆಗೆ ತಾಲೂಕಿನ ಶಿರಗುಪ್ಪಿ ಗ್ರಾಮದ ತುಳಸವ್ವ ಚನ್ನದಾಸರ ಅವರ ಮನೆ ಶನಿವಾರ ಬೆಳಗ್ಗೆ ಭಾಗಶಃ ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು, ಕುಟುಂಬದ ಸದಸ್ಯರಿಗೆ ಬೇರೆಡೆ ವಾಸಿಸುವಂತೆ ಸೂಚಿಸಿ, ಪರಿಹಾರ ನೀಡುವ ಭರವಸೆ ನೀಡಿದ್ದಾರೆ.