ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್, ರಿಂಗ್ ಬಗ್ಗೆ ಏನೂ ಗೊತ್ತಿಲ್ಲ. ಈ ವಿಷಯ ತನಿಖೆ ನಡೆಯುತ್ತಿದೆ. ಸತ್ಯ ಹೊರ ಬರಲಿ
ಬಳ್ಳಾರಿ: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ನಾಡಿನ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಕಪಾಳಮೋಕ್ಷ ಮಾಡಿದ್ದಾರೆ. ಈ ಫಲಿತಾಂಶದಿಂದಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನಾಡಿನ ಅಭಿವೃದ್ಧಿ ಹಾಗೂ ಜನಕಲ್ಯಾಣದ ಕಡೆ ಗಮನ ಹರಿಸಬೇಕು ಎಂದು ವಿಪ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪದವೀಧರರು, ಶಿಕ್ಷಕರು ಹಾಗೂ ವಿದ್ಯಾವಂತ ಯುವಕರನ್ನು ನಿರಂತರವಾಗಿ ಕಡೆಗಣಿಸಿದ್ದೇ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಪ್ರಮುಖ ಕಾರಣವಾಗಿದೆ. ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರು, ಕೃಷಿ ಕೂಲಿಕಾರರು, ಕಾರ್ಮಿಕರು, ರೈತರು ಹಾಗೂ ಬಡಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷಿಸಿದೆ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಇನ್ನಾದರೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ರಾಜ್ಯದ ಪ್ರಗತಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಸಿದ್ದು ವಿರುದ್ಧ ಡಿಕೆ ಸ್ಟಿಂಗ್: ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್, ರಿಂಗ್ ಬಗ್ಗೆ ಏನೂ ಗೊತ್ತಿಲ್ಲ. ಈ ವಿಷಯ ತನಿಖೆ ನಡೆಯುತ್ತಿದೆ. ಸತ್ಯ ಹೊರ ಬರಲಿ ಎಂದರು.
ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ ಬಹುದೊಡ್ಡ ನಾಯಕ. ಸಿದ್ಧರಾಮಯ್ಯಗೆ ಈ ರೀತಿಯಲ್ಲಿ ಮಾಡಿಯೇ ಖುರ್ಚಿಯಿಂದ ಕೆಳಗೆ ಇಳಿಸಿದರು ಡಿ.ಕೆ.ಶಿವಕುಮಾರ್ ಎಂದು ಆರೋಪಿಸಿದರು. ಮಾನ, ಮರ್ಯಾದೆ ಇದ್ದವರು ಈ ರೀತಿ ಮಾಡಬಾರದು. ಸಿದ್ಧರಾಮಯ್ಯನವರಿಗೆ ಈ ರೀತಿ ಅಪಮಾನ ಮಾಡುತ್ತಾ ಹೋದರೆ ಕಾಂಗ್ರೆಸ್ ಹೇಳಲು ಹೆಸರಿಲ್ಲದಂತಾಗುತ್ತದೆ ಎಂದು ತಿಳಿಸಿದರು.ತಂದೆಗೆ ತಕ್ಕ ಮಗ ಮೋದಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರವಿಕುಮಾರ್, ಮೋದಿ ಅವರ ತಂದೆಯ ಬಗ್ಗೆ ಮಾತನಾಡುವ ಮೂಲಕ ಖರ್ಗೆ ಅವರು ತಮ್ಮ ರಾಜಕೀಯ ಹತಾಶೆ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.
ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಡಾ.ಮಹಿಪಾಲ್, ಎಸ್. ಗುರುಲಿಂಗನಗೌಡ, ಮುರಹರಗೌಡ ಗೋನಾಳ್, ಎಚ್.ಹನುಮಂತಪ್ಪ, ಕೆ.ಎಸ್. ದಿವಾಕರ್, ಡಾ.ಬಿ.ಕೆ. ಸುಂದರ್, ಸಾಧನಾ ಹಿರೇಮಠ, ಸುಗುಣ, ಅಡವಿಸ್ವಾಮಿ, ಎಚ್.ರವಿ, ರಾಮಚಂದ್ರಪ್ಪ, ಉರುಕುಂದಪ್ಪ ಸೇರಿದಂತೆ ಪಕ್ಷದ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.ನ.2ರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಪಾದಯಾತ್ರೆ
ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಪ್ರಚೋದನೆ ನೀಡುತ್ತಿದೆ. ಇದನ್ನು ಖಂಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆಯಡಿ ನ.2ರಿಂದ 6ರವರೆಗೆ ರಾಜ್ಯದ 10 ವಿಭಾಗಗಳಲ್ಲಿ ಬಿಜೆಪಿ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎನ್.ರವಿಕುಮಾರ್ ತಿಳಿಸಿದರು.ಚುನಾವಣೆಗಳಲ್ಲಿ ನಿರಂತರ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕರು ಹತಾಶೆಯಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ಜನವಿರೋಧಿ ಧೋರಣೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಪಾದಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.