ದಲಿತ, ದಮನಿತರಿಗೆ ಧ್ವನಿಯಾಗಿ ನಿಂತಿದ್ದು ಶರಣ ಚಳವಳಿ, ಶರಣ ಧರ್ಮ. ವೈಚಾರಿಕತೆ, ವೈಜ್ಞಾನಿಕತೆಯ ಆಲೋಚನೆಯು ಧರ್ಮಾತೀತವಾಗಿದೆ. ಬೌದ್ಧಿಕ ಅಸ್ಪೃಶ್ಯತೆ ಮೀರುವುದೇ ಬಹಳ ದೊಡ್ಡ ಕೆಲಸ.

ಧಾರವಾಡ:

ಒಂಭತ್ತನೆಯ ಶತಮಾನಗಳ ಹಿಂದೆ ನಡೆದು ಹೋದ ಸಮಾಜಮುಖಿ ಚಳವಳಿ ಇಂದಿಗೂ ತನ್ನ ಚಿಂತನೆ, ಅಧ್ಯಯನ, ಓದು-ಬರಹದ ಮೂಲಕ ನಿರಂತರ ಚಲನೆಯಲ್ಲಿದೆ. ಶರಣರ ಆಂದೋಲನ ತನ್ನ ಮೌಲ್ಯವನ್ನು ಎಂದಿಗೂ ಕಳೆದುಕೊಂಡಿಲ್ಲ. ಅದುವೇ ಶರಣರ ಜಾಗೃತಿಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಗೌರಮ್ಮ ಬೆಲ್ಲದ ದತ್ತಿ ಅಂಗವಾಗಿ ಆಯೋಜಿಸಿದ್ದ `ಶರಣರು ಕಟ್ಟಬಯಸಿದ ಮಾನವತಾ ಧರ್ಮ’ ಉಪನ್ಯಾಸದಲ್ಲಿ ಮಾತನಾಡಿದ ಅವರು, ದಲಿತ, ದಮನಿತರಿಗೆ ಧ್ವನಿಯಾಗಿ ನಿಂತಿದ್ದು ಶರಣ ಚಳವಳಿ, ಶರಣ ಧರ್ಮ. ವೈಚಾರಿಕತೆ, ವೈಜ್ಞಾನಿಕತೆಯ ಆಲೋಚನೆಯು ಧರ್ಮಾತೀತವಾಗಿದೆ. ಬೌದ್ಧಿಕ ಅಸ್ಪೃಶ್ಯತೆ ಮೀರುವುದೇ ಬಹಳ ದೊಡ್ಡ ಕೆಲಸ. ವ್ಯಕ್ತಿ ಆಧಾರಿತ, ಲಿಂಗಾಧಾರಿತ ಶ್ರೇಣಿಕರಣ ಧಿಕ್ಕರಿಸಿ ಹುಟ್ಟುಕೊಂಡಿರುವುದೇ ಮಾನವ ಧರ್ಮ ಎಂದು ಗುರುತಿಸಿಕೊಳ್ಳುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ, ಯಾವುದನ್ನು ಹೇಳುತ್ತೇವೆಯೋ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ದಾಸೋಹದ ಕಲ್ಪನೆ, ಸಮಸಮಾಜದ ಪರಿಕಲ್ಪನೆ ಕಟ್ಟಿಕೊಟ್ಟ ಬಸವಣ್ಣನವರ ಸತ್ಯಶುದ್ಧ ಕಾಯಕ, ದಾಸೋಹ ಮುಂತಾದ ಸರ್ವಕಾಲಕ್ಕೂ ಅನ್ವಯಿಸುವಂತವು. ಎಲ್ಲರನ್ನೂ ಒಳಗೊಳ್ಳುವ ಮಾನವತಾ ಧರ್ಮದ ಚಿಂತನೆ, ತತ್ವಗಳೇ ಶ್ರೇಷ್ಠ ಧರ್ಮ, ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಹೇಶ ಬೆಲ್ಲದ ಇದ್ದರು. ಡಾ. ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.