ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೈ ಹಿಡಿದು ಗೆಲುವಿನ ಲಹರಿಗೆ ಮರಳಿದ ಸಿ.ಪಿ.ಯೋಗೇಶ್ವರ್

| Published : Nov 24 2024, 01:47 AM IST / Updated: Nov 24 2024, 12:44 PM IST

CP Yogeshwar
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೈ ಹಿಡಿದು ಗೆಲುವಿನ ಲಹರಿಗೆ ಮರಳಿದ ಸಿ.ಪಿ.ಯೋಗೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

 ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ್ದು, ಇದು ಅವರ ರಾಜಕೀಯ ಜೀವನದಲ್ಲಿ ಆರನೇ ಗೆಲುವಾಗಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಸೈನಿಕ ಕೈಹಿಡಿದು ಗೆಲುವಿನ ಲಹರಿಗೆ ಮರಳಿದ್ದಾರೆ.

ಚನ್ನಪಟ್ಟಣ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ್ದು, ಇದು ಅವರ ರಾಜಕೀಯ ಜೀವನದಲ್ಲಿ ಆರನೇ ಗೆಲುವಾಗಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಸೈನಿಕ ಕೈಹಿಡಿದು ಗೆಲುವಿನ ಲಹರಿಗೆ ಮರಳಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಒಟ್ಟು 9 ಬಾರಿ ಸ್ಪರ್ಧೆ ಮಾಡಿದ್ದು, 6 ಬಾರಿ ಗೆದ್ದು, ಮೂರು ಬಾರಿ ಸೋಲಿನ ಕಹಿಯನ್ನುಂಡಿದ್ದಾರೆ. 1999 ರ ವಿಧಾನಸಭೆ ಚುನಾವಣೆ 2004, 2008, 2011, 2013 ಹಾಗೂ ಇದೀಗ 2024 ರಲ್ಲಿ ಅವರು ಗೆಲುವು ಸಾಧಿಸಿದ್ದಾರೆ. 2009-2018 ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಹಾಗೂ2009 ರ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.

ಪಕ್ಷೇತರರಾಗಿ ಮೊದಲ ಗೆಲುವು:

1999 ರಲ್ಲಿ ಪಕ್ಷೇತರರಾಗಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದ ಯೋಗೇಶ್ವರ್ ಮೊದಲ ಚುನಾವಣೆಯಲ್ಲಿಯೇ ಘಟಾನುಘಟಿಗಳಾದ ಎಂ.ವರದೇಗೌಡ ಹಾಗೂ ಸಾದತ್ ಅಲಿಖಾನ್ ಅವರನ್ನು ಪರಾಭವಗೊಳಿಸಿ, ವಿಧಾನಸಭೆಯ ಮೆಟ್ಟಿಲೇರಿದ್ದರು. ಆ ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾದ ಯೋಗೇಶ್ವರ್, 2004 ಮತ್ತು 2008 ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ವಿಜಯ ಸಾಧಿಸಿದರು.

2009 ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, 2009 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮೊದಲ ಸೋಲಿನ ಕಹಿಯುಂಡರು. ಅ ನಂತರ ತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಹುರಿಯಾಳಾಗಿ ಸ್ಪರ್ಧಿಸಿದ ಅವರು, ಜೆಡಿಎಸ್ ಅಭ್ಯರ್ಥಿ ಎಂ.ಸಿ.ಅಶ್ವತ್ಥ್ ವಿರುದ್ಧ ಪರಾಜಿತರಾದರು.

2011 ರಲ್ಲಿ ಜೆಡಿಎಸ್ ಶಾಸಕ ಎಂ.ಸಿ.ಅಶ್ವತ್ಥ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎದುರಾದ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ ಯೋಗೇಶ್ವರ್‌ ಸಿಂ.ಲಿಂ.ನಾಗರಾಜು ಅವರನ್ನು ಸೋಲಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿ, ಬಿಜೆಪಿ ಸರ್ಕಾರದಲ್ಲಿ ಸಚಿವರಾದರು.

2013 ರ ವೇಳೆಗೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗೇಶ್ವರ್ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಂಡರು. ಆದರೆ ಆ ಚುನಾವಣೆಯಲ್ಲಿ ಸಿಪಿವೈಗೆ ಟಿಕೆಟ್ ನೀಡದ ಕಾಂಗ್ರೆಸ್ ಮಾಜಿ ಶಾಸಕ ಸಾದತ್ ಅಲಿಖಾನ್‌ಗೆ ಮಣೆ ಹಾಕಿತು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಏರಿದ ಯೋಗೇಶ್ವರ್ ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದರು.

ಆ ನಂತರ ಕಾಂಗ್ರೆಸ್‌ನೊಂದಿಗೆ ಮತ್ತೆ ಗುರುತಿಸಿಕೊಂಡ ಯೋಗೇಶ್ವರ್, ೨೦೧೮ರಲ್ಲಿ ಮತ್ತೆ ಬಿಜೆಪಿ ತೆಕ್ಕೆಗೆ ಜಾರಿದರು. ೨೦೧೮ ಹಾಗೂ ೨೦೨೩ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸತತ ಎರಡು ಸೋಲುಂಡರು. ಇದೀಗ ಅವರ ಪುತ್ರ ನಿಖಿಲ್ ವಿರುದ್ಧ ಜಯಗಳಿಸಿದ್ದಾರೆ.

ಸಿಪಿವೈಗೆ ಅದೃಷ್ಟ ತಂದ ಉಪ ಚುನಾವಣೆ!

ಯೋಗೇಶ್ವರ್ ಪಾಲಿಗೆ ಉಪಚುನಾವಣೆ ಅದೃಷ್ಟಶಾಲಿ. 2011 ರ ಉಪಚುನಾವಣೆ ಹಾಗೂ ಈ ಬಾರಿಯ ಉಪಚುನಾವಣೆಯೂ ಅವರಿಗೆ ಅದೃಷ್ಟವಾಗಿಯೇ ಪರಿಣಮಿಸಿದೆ. ೨೦೦೯ರಲ್ಲಿ ಎದುರಾದ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರಾದರೂ, 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದರು. ಇದೀಗ 2024 ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಉಪಚುನಾವಣೆ ಸಿಪಿವೈಗೆ ಕಳೆದುಕೊಂಡಿದ್ದ ಶಾಸಕ ಸ್ಥಾನವನ್ನು ಮತ್ತೆ ತಂದುಕೊಟ್ಟಿದೆ.

ಒಮ್ಮೆಯೂ ಕಾಂಗ್ರೆಸ್‌ನಿಂದ ಸೋತಿಲ್ಲ

ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿದ್ದ 5 ಚುನಾವಣೆಯಲ್ಲಿ ಯೋಗೇಶ್ವರ್ ನಾಲ್ಕು ಬಾರಿ ಸೋಲಿನ ಸುಳಿಗೆ ಸಿಲುಕಿದ್ದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಒಮ್ಮೆಯೂ ಸೋಲು ಅನುಭವಿಸಿಲ್ಲ ಎಂಬುದು ವಿಶೇಷ. ೨೦೦೮, ೨೦೧೮ ಹಾಗೂ ೨೦೨೩ರ ವಿಧಾನಸಭೆ ಚುನಾವಣೆ ಹಾಗೂ ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದಾಗ ಅವರಿಗೆ ಸೋಲಾಗಿದೆ. ೨೦೧೧ರ ವಿಧಾನಸಭೆ ಉಪಚುನಾವಣೆಯಲ್ಲಿ ಒಮ್ಮೆ ಮಾತ್ರ ಬಿಜೆಪಿಯಿಂದ ಸ್ಫರ್ಧಿಸಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ೨೦೦೪, ೨೦೦೮ ಹಾಗೂ ಇದೀಗ ೨೦೨೪ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಅವರು ಮೂರೂ ಬಾರಿಯೂ ಗೆಲುವು ಸಾಧಿಸಿದ್ದಾರೆ.

ರಿಸ್ಕ್ ತೆಗೆದುಕೊಂಡು ಸಕ್ಸಸ್ ಆದ ಸೈನಿಕ

ಇರುವ ಸ್ಥಾನ ತ್ಯಜಿಸಿ ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಯೋಗೇಶ್ವರ್ ಎತ್ತಿದ ಕೈ ಎನಿಸಿದ್ದಾರೆ. ೨೦೦೯ರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ರಿಸ್ಕ್ ಅನ್ನು ಸೈನಿಕ ತೆಗೆದುಕೊಂಡಿದ್ದರು. ಆ ಚುನಾವಣೆಯಲ್ಲಿ ಸೋಲು ಅನುಭವಿಸಿದರಾದರೂ, ಮರಳಿ ೨೦೧೧ರ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಸಚಿವರೂ ಆದರು.

ಇನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸಹ ರಿಸ್ಕ್ ತೆಗೆದುಕೊಂಡು ಯೋಗೇಶ್ವರ್ ಅದರಲ್ಲಿ ಸಕ್ಸಸ್ ಆಗಿದ್ದಾರೆ. ಉಪಚುನಾವಣೆಯಲ್ಲಿ ಯೋಗೇಶ್ವರ್ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಉಮೇದಿನಲ್ಲಿದ್ದರಾದರೂ ಎನ್‌ಡಿಎ ಟಿಕೆಟ್ ವಿಚಾರದಲ್ಲಿ ಮೂಡಿದ್ದ ಗೊಂದಲದ ಕಾರಣಕ್ಕೆ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಚನ್ನಪಟ್ಟಣ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಣಕ್ಕಿಳಿಯುವ ರಿಸ್ಕ್ ತೆಗೆದುಕೊಂಡಿದ್ದ ಯೋಗೇಶ್ವರ್ ಅದರಲ್ಲಿ ಸಕ್ಸಸ್ ಆಗಿದ್ದಾರೆ.

ಎಚ್‌ಡಿಕೆ ಕುಟುಂಬದ ವಿರುದ್ಧ ಎರಡು ಸೋಲು-ಗೆಲುವು

ಚನ್ನಪಟ್ಟಣ ಕ್ಷೇತ್ರದ ಮಟ್ಟಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುಟುಂಬದ್ದು, ಇದು ನಾಲ್ಕನೇ ಸೆಣಸಾಟವಾಗಿದ್ದು, ಇಬ್ಬರು ಎರಡು ಬಾರಿ ಗೆಲುವು ಕಂಡಿದ್ದಾರೆ.

2013 ರ ವಿಧಾನಸಭೆ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಗೆಲುವು ಸಾಧಿಸಿದ್ದರು.

ಇನ್ನು 2018  ಹಾಗೂ 2023 ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಇದೀಗ ಉಪಚುನಾವಣೆಯಲ್ಲಿ ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿರುವ ಯೋಗೇಶ್ವರ್ ತಂದೆಯ ವಿರುದ್ಧದ ಎರಡು ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.