ಮಾವನ ಸೋಲಿನ ಸೇಡು ತೀರಿಸಿಕೊಂಡ ಅಳಿಯ

| Published : Jun 05 2024, 12:30 AM IST

ಸಾರಾಂಶ

ಎಐಸಿಸಿ ಅಧ್ಯಕ್ಷರಾದ ಖರ್ಗೆಯವರ ತವರು, ಮೇಲಾಗಿ ಅವರ ಅಳಿಯ ರಾಧಾಕೃಷ್ಣ ಅವರೇ ಸ್ಪರ್ಧಾ ಅಖಾಡದಲ್ಲಿದ್ದ ಕಾರಣದಿಂದಾಗಿ ಜಿದ್ದಾಜಿದ್ದಿ ಹಾಗೂ ರಣರೋಚಕ ಕಣವಾಗಿ ದೇಶಾದ್ಯಂತ ಕಲಬುರಗಿ ಗಮನ ಸೆಳೆದಿತ್ತು

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ವಿಭಾಗೀಯ ಕೇಂದ್ರ ಕಲಬುರಗಿ (ಪಜಾ ಮೀಸಲು) ಲೋಕಸಭೆ ಮತಕ್ಷೇತ್ರ ಕೈವಶವಾಗಿದೆ.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಮನಿ ಅವರು ಇಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್‌ ಪಕ್ಷದ ರಾಧಾಕೃಷ್ಣ ದೊಡ್ಮನಿಯವರು6, 52, 321 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಉಮೇದುವಾರ, ಇಲ್ಲಿಂದ ಪುನರಾಯ್ಕೆ ಬಯಸಿದ್ದ ಡಾ. ಉಮೇಶ ಜಾಧವ್‌ ಅವರನ್ನ 27, 205 ಮತಗಳ ಅಂತರಿಂದ ಮಣಿಸಿದ್ದಾರೆ. ಇಲ್ಲಿ ಬಿಜೆಪಿಯ ಉಮೇಶ ಜಾಧವ್‌ ಅವರಿಗೆ 6, 25, 116 ಮತಗಳು ಬಂದಿವೆ.

ಎಐಸಿಸಿ ಅಧ್ಯಕ್ಷರಾದ ಖರ್ಗೆಯವರ ತವರು, ಮೇಲಾಗಿ ಅವರ ಅಳಿಯ ರಾಧಾಕೃಷ್ಣ ಅವರೇ ಸ್ಪರ್ಧಾ ಅಖಾಡದಲ್ಲಿದ್ದ ಕಾರಣದಿಂದಾಗಿ ಜಿದ್ದಾಜಿದ್ದಿ ಹಾಗೂ ರಣರೋಚಕ ಕಣವಾಗಿ ದೇಶಾದ್ಯಂತ ಕಲಬುರಗಿ ಗಮನ ಸೆಳೆದಿತ್ತು.ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ , ರಾಜ್ಯದ ಸಚಿವರಾಗಿರುವ ಪ್ರಿಯಾಂಕ್‌ ಖರ್ಗೆ ಇಬ್ಬರೂ ಈ ಕ್ಷೇತ್ರದಲ್ಲಿನ ರಾಧಾಕೃಷ್ಣ ಅವರ ಗೆಲುವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದರು.

ರಾಧಾಕೃಷ್ಣ ಜನತಾ ಜನಾರ್ಧನರ ಆಶಿರ್ವಾವದ ಪಡೆದು ವಿಜಯದ ನಗೆ ಬೀರಿ ಕಳೆದ ಲೋಕ ಸಮರದಲ್ಲಿನ ಮಾವನ ಸೋಲಿನ ಸೇಡು ತೀರೀಸಿಕೊಂಡರೆ, ಇತ್ತ ಎಐಸಿಸಿ ಅಧ್ಯಕ್ಷರಾದ ಡಾ. ಖರ್ಗೆವರು ಈ ಚುನಾವಣೆಯನ್ನು ತುಂಬ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ತಮ್ಮ ಅಳಿಯ ರಾಧಾಕೃಷ್ಣರನ್ನ ಇಲ್ಲಿಂದ ಗೆಲ್ಲಿಸುವ ಮೂಲಕ ತಮ್ಮ 2019 ರ ಲೋಕ ಸಮರದಲ್ಲಿನ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಾಂದ್ರೆಸ್‌ ಪಕ್ಷದ ಕಲಬುರಗಿ ವಿಜಯವನ್ನ ವಿಶ್ಲೇಷಿಸಲಾಗುತ್ತಿದೆ.

2019ರಲ್ಲಿ ಕಲಬುರಗಿ ಕ್ಷೇತ್ರದಿಂದ ಕಣದಲ್ಲಿದ್ದ ಡಾ. ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿಯ ಡಾ. ಉಮೇಶ ಜಾಧವ್‌ ಅವರ ಮುಂದೆ 95 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲುಂಡಿದ್ದರು. ಆದರೆ ಈ ಬಾರಿ ಕಳೆದ ಚುನಾವಣೆಯ ಸೋಲಿನ ಕಹಿಗೆ ಮದ್ದರೆಯುವ ತವಕದಲ್ಲಿದ್ದ ಡಾ. ಖರ್ಗೆಯವರು ಈ ಚುನಾವಣೆಯಲ್ಲಿ ತುಂಬ ಬಾವುಕರಾಗಿ ಮತ ಹಾಕದೆ ಹೋದಲ್ಲಿ ತಮ್ಮ ಮಣ್ಣಿಗಾದರೂ ಬನ್ನಿ ಎಂದು ಕ್ಷೇತ್ರದ ಜನತೆಗೆ ಕರೆ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.