ಸಾರಾಂಶ
ಅಪರೂಪದ ಘಟನೆ । ಓಲಾ ಬೈಕ್‌ನಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟ ಹಕ್ಕಿ
ಎಂ. ಪ್ರಹ್ಲಾದ್ಕನ್ನಡಪ್ರಭ ವಾರ್ತೆ ಕನಕಗಿರಿ
ತನ್ನ ಸಂತತಿಯನ್ನು ಬೆಳೆಸಲು ಪಕ್ಷಿಗಳು ಮನುಷ್ಯ ಹಾಗೂ ಪ್ರಾಣಿಗಳ ದಾಳಿಗೆ ತುತ್ತಾಗದ ಹಾಗೇ ಗಿಡ, ಮರಗಳಲ್ಲಿ ಗೂಡು ಕಟ್ಟುವುದು ಸಾಮಾನ್ಯ. ಆದರೆ, ಗುಬ್ಬಚ್ಚಿಯೊಂದು ದ್ವಿಚಕ್ರ ವಾಹನದಲ್ಲಿ ಗೂಡು ಕಟ್ಟಿ ವಾಹನದೊಳಗೆ ಮೊಟ್ಟೆ ಇಟ್ಟಿರುವ ಅಪರೂಪ ಪಟ್ಟಣದಲ್ಲಿ ಕಾಣಸಿಗುತ್ತಿದೆ.ಪಟ್ಟಣದ ನವಲಿ ರಸ್ತೆಯಲ್ಲಿರುವ ಬಸವರಾಜ ಕೋರಿ ನಿವಾಸದಲ್ಲಿ ಎಲೆಕ್ಟ್ರಿಕಲ್ ಓಲಾ ಬೈಕ್‌ನಲ್ಲಿ ಕರಿ ಬಣ್ಣದ ಗುಬ್ಬಚ್ಚಿಯೊಂದು ಗೂಡು ಕಟ್ಟಿ ಮೊಟ್ಟೆ ಇಟ್ಟಿದೆ. ವಾಹನ ಬಂದು ಮನೆ ಮುಂದೆ ನಿಂತು ನಿಶ್ಯಬ್ದವಾದ ಕೂಡಲೇ ಗುಬ್ಬಚ್ಚಿ ಬೈಕ್ ಸೀಟ್ ಮೇಲೆ ಕುಳಿತು ನಂತರ ಗೂಡಿಗೆ ಪ್ರವೇಶಿಸುತ್ತದೆ.
ನೀರು, ಆಹಾರಕ್ಕೆ ನವಲಿ ರಸ್ತೆಯಲ್ಲಿನ ಬಸವರಾಜ ಅವರ ಮನೆ ಅನುಕೂಲಕರವಾಗಿದ್ದರಿಂದ ವಾಹನದಲ್ಲಿ ಗೂಡು ಕಟ್ಟಿರುವ ಸಾಧ್ಯತೆಯಿದೆ. ಇದನ್ನರಿತ ಬೈಕ್ ಓನರ್ ಬಸವರಾಜ ಅವರು ಗುಬ್ಬಚ್ಚಿಯ ಚಲನ ವಲನವನ್ನು ದೂರದಿಂದಲೇ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.ಆದರೆ, ದ್ವಿಚಕ್ರ ವಾಹನ ಕೆಲಸದ ನಿಮಿತ್ತ ಬೇರೆಡೆಗೆ ತೆರಳಿದಾಗ ತೊಂದರೆಯಾಗುವುದರಿಂದ ಗುಬ್ಬಚ್ಚಿ ತಾನಿಟ್ಟಿದ್ದ ಮೊಟ್ಟೆಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಿದೆ ಎನ್ನಲಾಗಿದೆ. ಆದರೆ, ಈ ಹಿಂದಿನಿಂದಲೂ ಪಕ್ಷಿಗಳ ಬಗ್ಗೆ ಕಾಳಜಿ ಇರುವ ಬಸವರಾಜ ಅವರು, ಗುಬ್ಬಚ್ಚಿ ಪುನಃ ಬಂದು ಕೂರಬಹುದು ಎನ್ನುವ ನಿರೀಕ್ಷೆಯಲ್ಲಿ ಕಟ್ಟಿದ ಗೂಡನ್ನು ತೆರವು ಮಾಡದೇ ತನ್ನ ಬೈಕ್‌ನಲ್ಲಿ ಉಳಿಸಿಕೊಂಡಿದ್ದಾರೆ.
ಕಳೆದ 12 ದಿನಗಳಿಂದ ಬೈಕ್‌ನಲ್ಲಿ ಗುಬ್ಬಚ್ಚಿಯೊಂದು ಗೂಡು ಕಟ್ಟಿ, ಮೊಟ್ಟೆ ಇಟ್ಟಿತ್ತು. ಆರೈಕೆಗೆ ತೊಂದರೆಯಾಗಿದ್ದರಿಂದ ಮೊಟ್ಟೆಯನ್ನು ಬೇರೆಡೆ ತೆಗೆದುಕೊಂಡು ಹೋಗಿದೆ. ಗುಬ್ಬಿಚ್ಚಿ ಕಟ್ಟಿದ ಗೂಡು ಮಾತ್ರ ಈಗಲೂ ಹಾಗೇ ಇದೆ. ಇಂದಲ್ಲ ನಾಳೆ ಗುಬ್ಬಚ್ಚಿ ಮರಳಿ ಗೂಡಿಗೆ ಬಂದು ಸೇರುವ ನಿರೀಕ್ಷೆ ಇದೆ ಎಂದು ಪಕ್ಷಿಪ್ರೇಮಿ ಬಸವರಾಜ ಕೋರಿ ತಿಳಿಸಿದ್ದಾರೆ.ಸಾಮಾನ್ಯವಾಗಿ ಹಕ್ಕಿಗಳು ಮನುಷ್ಯನ ಆವಾಸಸ್ಥಾನದ ಸುತ್ತಮುತ್ತಲಿನಲ್ಲಿ ತಮ್ಮ ಗೂಡು ಕಟ್ಟಿಕೊಳ್ಳುತ್ತವೆ. ಕಾರಣ ಮನುಷ್ಯನ ಚಲನ-ವಲನ ಇರುವ ಕಾರಣದಿಂದ ವೈರಿ ಜೀವಿಗಳ ದಾಳಿಯಿಂದ ಸುರಕ್ಷಿತವಾಗಿರಲು ಅನುಕೂಲವಾಗಲಿದೆ. ಆದರೆ ಇಲ್ಲಿ ದಿನನಿತ್ಯ ಓಡಾಡುವ ಬೈಕ್‌ನಲ್ಲಿ ತನ್ನ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದು ವಿಶೇಷ ಎಂದು ಪರಿಸರ ಪ್ರೇಮಿ ಪಂಪಾರೆಡ್ಡಿ ಹೇಳಿದ್ದಾರೆ.