ಹುಣಸೆಹುಳಿ ಘಮ ಕಮರದ ಕಾಡಿನ ಮಧ್ಯೆ ವಿಶೇಷ ನಾಗರಪಂಚಮಿ

| Published : Aug 14 2024, 12:46 AM IST

ಸಾರಾಂಶ

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಆಚರಣೆಗಳ ತವರು. ಆಧುನಿಕ ಕಾಲಘಟ್ಟದಲ್ಲೂ ಕಾಡುಗೊಲ್ಲ ಸಮುದಾಯವು ಎರಡನೇ ಶ್ರಾವಣ ಸೋಮವಾರ ವಿಶೇಷ ನಾಗರಪಂಚಮಿ ಆಚರಣೆ ಮಾಡಿ ತಮ್ಮ ಸಂಸ್ಕೃತಿಯನ್ನ ಅನಾವರಣಗೊಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಚಿತ್ರದುರ್ಗ ಜಿಲ್ಲೆ ಬುಡಕಟ್ಟು ಆಚರಣೆಗಳ ತವರು. ಆಧುನಿಕ ಕಾಲಘಟ್ಟದಲ್ಲೂ ಕಾಡುಗೊಲ್ಲ ಸಮುದಾಯವು ಎರಡನೇ ಶ್ರಾವಣ ಸೋಮವಾರ ವಿಶೇಷ ನಾಗರಪಂಚಮಿ ಆಚರಣೆ ಮಾಡಿ ತಮ್ಮ ಸಂಸ್ಕೃತಿಯನ್ನ ಅನಾವರಣಗೊಸಿದ್ದಾರೆ.

ಸಾಮಾನ್ಯವಾಗಿ ನಾಗರಪಂಚಮಿ ಎಂದಾಕ್ಷಣ ನಾಗರಕ್ಕೆ ಹಾಲೆರೆಯುವುದು ಸಾಮಾನ್ಯ. ಆದರೆ, ಕಾಟಪ್ಪನಹಟ್ಟಿಯ ಕಾಡುಗೊಲ್ಲ ಸಮುದಾಯ ನಾಗರಪಂಚಮಿಯಂದು ಹುಣಸೆಹುಳಿ ಮತ್ತು ಅನ್ನವನ್ನು ನೈವೈದ್ಯ ಮಾಡುವುದು ವಿಶೇಷ. ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ನೆಲೆಸಿದ ಕಾಡುಗೊಲ್ಲ ಸಮುದಾಯದ ಮಳ್ಳಿಗ ವಂಶಸ್ಥರು ವಿಶೇಷ ನಾಗರಪಂಚಮಿ ಹಬ್ಬವನ್ನು ಅನಾದಿಕಾಲದಿಂದಲ್ಲೂ ಆಚರಣೆ ಮಾಡುತ್ತಾ ಬಂದಿದ್ದಾರೆ.

ತಾಲೂಕಿನ‌ ಪರಶುರಾಮಪುರ ಹೋಬಳಿಯ ದೊಡ್ಡಚೆಲ್ಲೂರು ಕಮರದ ಅರಣ್ಯ ಪ್ರದೇಶದಲ್ಲಿರುವ ಪುರಾತನ ನಾಗರಕಲ್ಲು, ಹುತ್ತಕ್ಕೆ ಅನ್ನ, ಹುಣಸೆ ಹುಳಿಯಿಂದ ತಯಾರಾದ ಸಾಂಬರನ್ನು ನೈವೇದ್ಯ ಮಾಡುತ್ತಾರೆ. ಶ್ರಾವಣ ಮಾಸದ ಎರಡನೇ ಸೋಮವಾರ ಉಪವಾಸದಿಂದಲೇ ಕಟ್ಟುನಿಟ್ಟಿನ ವ್ರತದೊಂದಿಗೆ ನಗರದ ಎತ್ತಪ್ಪ, ರಂಗನಾಥಸ್ವಾಮಿ ದೇವಾಲಯದಿಂದ ಕಾಲ್ನಡಿಗೆಯಲ್ಲಿ ಸುಮಾರು 37 ಕಿ.ಮೀ ದೂರವಿರುವ ಕಮರದ ಅರಣ್ಯ ಪ್ರದೇಶಕ್ಕೆ ಹೋಗುತ್ತಾರೆ‌. ಅಲ್ಲಿಯ ನಾಗರಕಲ್ಲುಗಳಿಗೆ ಬೀಟೆ, ಕಮರ ಸೊಪ್ಪು, ಹೂಗಳಿಂದ ನಾಗರಕಲ್ಲು, ಹುತ್ತವನ್ನು ಅಲಂಕಾರ ಮಾಡಿ ಪೂಜೆ ಸಲ್ಲಿಸುವುದು ಪ್ರತೀತಿ.

ಹರಕೆಗಳನ್ನು ಮಾಡಿಕೊಂಡು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಕಂಕಣ ಭಾಗ್ಯ, ಸಂತಾನ, ಉದ್ಯೋಗ, ವ್ಯಾಪಾರ ಹೀಗೆ ಅನೇಕ ಬೇಡಿಕೆಗಳನ್ನು ಬೇಡಿಕೊಳ್ಳುತ್ತಾರೆ. ಬೇಡಿಕೆ ಈಡೇರಿದ ನಂತರ ಬೆಳ್ಳಿ ಆಭರಣ, ಅನ್ನ ಸಂತರ್ಪಣೆ, ತಲೆಕೂದಲು (ಮುಡಿ) ಕೊಡುವ ಮೂಲಕ ಬೇಡಿಕೆ ತೀರಿಸುತ್ತಾರೆ. ವಂಶಸ್ಥರು, ನೆಂಟರು, ನವವಿವಾಹಿತರು ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸುತ್ತಾರೆ.

ಈ ವೇಳೆ ಗೌಡರ ಚಿಕ್ಕಣ್ಣ, ರಾಜಣ್ಣ, ರಂಗನಾಥ, ಅಜ್ಜಯ್ಯ, ಮಂಜುನಾಥ, ವೀರಭದ್ರಪ್ಪ, ತಿಪ್ಪೇಸ್ವಾಮಿ, ಪೂಜಾರಿ ಸುರೇಶ, ದಾಸಪ್ಪರಾದ ರಂಗಸ್ವಾಮಿ, ವೀರೇಶ್, ತಿಪ್ಪೇಸ್ವಾಮಿ ನೂರಾರು ಭಕ್ತರು ಭಾಗವಹಿಸಿದ್ದರು.

----

12ಸಿಎಲ್ ಕೆ 3

ಚಳ್ಳಕೆರೆ ತಾಲೂಕಿನ ದೊಡ್ಡಚೆಲ್ಲೂರು ಗ್ರಾಮದ ಕಮರದ ಅರಣ್ಯದಲ್ಲಿ ನಾಗರಪಂಚಮಿ ಆಚರಿಸಿದ ಕಾಡುಗೊಲ್ಲ ಸಮುದಾಯ.

---

12ಸಿಎಲ್ ಕೆ 03

ವಿಶೇಷ ಹೂಗಳಿಂದ ಅಲಂಕರಿಸಿದ ನಾಗರಕಲ್ಲು ಹುತ್ತ.