ಮತದಾರರ ಮನ ಸೆಳೆಯುವ ವಿಶೇಷ ಮತಗಟ್ಟೆ

| Published : May 07 2024, 01:04 AM IST

ಸಾರಾಂಶ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವಿಶೇಷ ಮತಗಟ್ಟೆ ಸ್ಥಾಪಿಸುವ ಮೂಲಕ ಶೇ. 100ರಷ್ಟು ಮತದಾನ ಆಗುವಂತೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

ಹುಬ್ಬಳ್ಳಿ:

ಮಂಗಳವಾರ ನಡೆಯುವ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಜ್ಜಾಗಿದ್ದು, ಜಿಲ್ಲೆಯಲ್ಲಿ ಯಶಸ್ವಿ ಮತದಾನಕ್ಕಾಗಿ ಒಟ್ಟು 72 ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ.

ಸೋಮವಾರ ಎಲ್ಲ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ತೆರಳಿ ಯಶಸ್ವಿ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ವಿಶೇಷ ಮತಗಟ್ಟೆ ಸ್ಥಾಪಿಸುವ ಮೂಲಕ ಶೇ. 100ರಷ್ಟು ಮತದಾನ ಆಗುವಂತೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಜಿಲ್ಲೆಯಲ್ಲಿ ಸ್ಥಾಪಿಸಲಾದ 40 ಮಹಿಳಾ ಸಿಬ್ಬಂದಿಗಳು ನಿರ್ವಹಿಸುವ ಸಖಿ ಮತಗಟ್ಟೆ, 8 ಯುವ ಸಿಬ್ಬಂದಿಗಳು ನಿರ್ವಹಿಸುವ ಯುವ ಮತಗಟ್ಟೆ, 8 ವಿಶೇಷ ಚೇತನ ಸಿಬ್ಬಂದಿ ಕಾರ್ಯನಿರ್ವಹಿಸುವ ವಿಶೇಷ ಚೇತನರ ಮತಗಟ್ಟೆ, 8 ಜನಾಂಗದ ವಿಶೇಷತೆ (ಎಥಿನಿಕ್) ಆಧಾರಿತ ಮತದಾನ ಕೇಂದ್ರ ಹಾಗೂ 8 ಥೀಮ್ ಆಧಾರಿತ ವಿಶೇಷ ಮತಗಟ್ಟೆ ತೆರೆಯಲಾಗಿದೆ.

ಧಾರವಾಡ, ಹು-ಧಾ ಪೂರ್ವ, ಹು-ಧಾ ಪಶ್ಚಿಮ, ಹು-ಧಾ ಸೆಂಟ್ರಲ್, ಕುಂದಗೋಳ, ಕಲಘಟಗಿ, ಹಾಗೂ ನವಲಗುಂದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಸಖಿ ಮತಗಟ್ಟೆ ಸೇರಿ ಒಟ್ಟು 35 ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. ಇವುಗಳ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಯುವ ಮತಗಟ್ಟೆ, ಒಂದು ಅಂಗವಿಕಲರ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಥೀಮ್ ಮತಗಟ್ಟೆ ಸೇರಿ 4 ವಿಶೇಷ ಮತಗಟ್ಟೆಗಳಂತೆ 7 ವಿಧಾನಸಭಾ ಕ್ಷೇತ್ರದಲ್ಲಿ 28 ಮತಗಟ್ಟೆ ತೆರೆಯಲಾಗಿದೆ.

ಆಕರ್ಷಣೆಯ ಗೋಡೆ ಬರಹ:

ಜಿಲ್ಲೆಯಲ್ಲಿ ಸ್ಥಾಪಿಸಲಾದ ಸಖಿ ಮತಗಟ್ಟೆಗಳೆಲ್ಲ ನೇರಳೆ(ಪರ್ಪಲ್‌) ಬಣ್ಣದಲ್ಲಿ ಹೊಳೆಯುತ್ತಿವೆ. ಮತಗಟ್ಟೆಗೆ ತೆರಳುವ ಮಾರ್ಗದಲ್ಲಿ ಮತದಾನ ಜಾಗೃತಿ ಮೂಡಿಸುವ ಗುಲಾಬಿ, ನೇರಳೆ ಬಣ್ಣದ ಬ್ಯಾನರ್‌, ಕಟೌಟ್‌ ಹಾಕಲಾಗಿದೆ. ಮತಗಟ್ಟೆಯನ್ನು ನೇರಳೆ ಮತ್ತು ಬಿಳಿ ಬಣ್ಣದ ಬಲೂನ್‌ಗಳಿಂದ ಶೃಂಗರಿಸಲಾಗಿದೆ.

ಧಾರವಾಡದ ಪ್ರಜೆಂಟೇಶನ್‌ ಬಾಲಕಿಯರ ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ವಿಶೇಷ ಮತಗಟ್ಟೆಯಲ್ಲಿ "ಧಾರವಾಡ ಪೇಢಾ " ಚಿತ್ರ ಬಿಡಿಸಲಾಗಿದೆ. ಧಾರವಾಡದ ಆಜಾದ್‌ ಪಾರ್ಕ್‌ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಧಾರವಾಡದ ನ್ಯಾಯಾಲಯದ ಚಿತ್ರ ಬಿಡಿಸಲಾಗಿದೆ. ಹುಬ್ಬಳ್ಳಿಯ ಹೊಸ ಕಿಲ್ಲಾದಲ್ಲಿರುವ ಸರ್ಕಾರಿ ಮರಾಠಿ ಶಾಲೆಯಲ್ಲಿ ಗ್ಲಾಸ್‌ ಹೌಸ್‌, ಗಂಟಿಕೇರಿಯಲ್ಲಿರುವ ಶಾಂತಿನಾಥ ಪ್ರೌಢಶಾಲೆಯಲ್ಲಿ ರಾಣಿಚೆನ್ನಮ್ಮ ಚಿತ್ರ, ಕಿಮ್ಸ್‌ನಲ್ಲಿ ಕೆಯುಡಿ ವಿವಿಯ ಚಿತ್ರ ಬಿಡಿಸಲಾಗಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಕೇಂದ್ರಕ್ಕೆ ಲಂಬಾಣಿ ಜನಾಂಗದ ಸಾಂಪ್ರದಾಯಿಕ ಉಡುಪು ಚಿತ್ರ ಬಿಡಿಸಲಾಗಿದೆ. ಹೀಗೆ ಆಯಾ ಸ್ಥಳೀಯ ಆಕರ್ಷಣೀಯ ಸ್ಥಳ, ವಸ್ತುಗಳ ಚಿತ್ರ ರಚಿಸಿ, ಮತಗಟ್ಟೆಗಳ ಅಂಧ ಹೆಚ್ಚಿಸಲಾಗಿದೆ.

ಮತದಾನ ಕುರಿತು ಜಾಗೃತಿ ಬರಹ:

ಪ್ರತಿ ಮತಗಟ್ಟೆಗಳಲ್ಲೂ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸುವ ಬರವಣಿಗೆಗಳನ್ನು ಹಾಕಲಾಗಿದೆ. ಮತದಾನ ನಿಮ್ಮ ಹಕ್ಕು ಹಾಗೂ ನಿಮ್ಮ ಜವಾಬ್ದಾರಿ, ನನ್ನ ಮತ ನನ್ನ ಧ್ವನಿ, ನನ್ನ ಮತ ನನ್ನ ಹಕ್ಕು, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ, ನನ್ನ ಮತ ನನ್ನ ಶಕ್ತಿ ಸೇರಿದಂತೆ ಹಲವು ಘೋಷಣೆ ಬರೆದು ಮತದಾನದ ಮಹತ್ವದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ.

ಪೆಂಡಾಲ್‌ ವ್ಯವಸ್ಥೆ:

ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತಗಟ್ಟೆಗಳಲ್ಲೂ ಅಂಗವಿಕಲರಿಗೆ ಅನುಕೂಲಕ್ಕಾಗಿ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಬಿಸಿಲಿನ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತದಾನಕ್ಕೆ ಆಗಮಿಸುವ ಮತದಾರರಿಗೆ ನೆರಳಿನ ಆಶ್ರಯ ನೀಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಮತಗಟ್ಟೆಯ ಮುಂದೆ ಪೆಂಡಾಲ್‌ ವ್ಯವಸ್ಥೆ ಮಾಡಿರುವುದು ಮತ್ತೊಂದು ವಿಶೇಷ. ಜತೆಗೆ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ.