ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿದ ಪೆನ್ಸಿಲ್ವೇನಿಯಾ ವಿವಿ ತಂಡ

| Published : Jan 06 2024, 02:00 AM IST / Updated: Jan 06 2024, 02:58 PM IST

ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿದ ಪೆನ್ಸಿಲ್ವೇನಿಯಾ ವಿವಿ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ನವೋದಯ ತಂಡಗಳ ವಿಶೇಷ ಅಧ್ಯಯನಕ್ಕೆ ಪೆನ್ಸಿಲ್ವೇನಿಯಾ ವಿವಿ ತಂಡ ಎಸ್‌ಸಿಡಿಸಿಸಿ ಬ್ಯಾಂಕ್‌ ಭೇಟಿ ನೀಡಿತು.

ಕನ್ನಡಪ್ರಭ ವಾರ್ತೆ 

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನವೋದಯ ಸ್ವ ಸಹಾಯ ಗುಂಪುಗಳ ಕಾರ್ಯ ದಕ್ಷತೆ ಹಾಗೂ ಸಂಘಟನೆಯನ್ನು ಗುರುತಿಸಿಕೊಂಡು ಅಮೆರಿಕದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಅಧ್ಯಯನ ತಂಡ ಶುಕ್ರವಾರ ಎಸ್‌ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿತು. ಪೆನ್ಸಿಲ್ವೇನಿಯಾ ವಿವಿ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ನೇತೃತ್ವದಲ್ಲಿ 12 ಮಂದಿಯ ತಂಡ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ನವೋದಯ ಸ್ವಸಹಾಯ ಸಂಘದ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು. 

ಈ ಸಂದರ್ಭ ಮಾತನಾಡಿದ ಪ್ರೊ. ಫೆಮಿಡಾ ಹ್ಯಾಂಡಿ, ಇಂದಿನ ಸ್ಪರ್ಧಾತ್ಮಕ ಆರ್ಥಿಕ ಪರಿಸ್ಥಿತಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಮೋಘ ಸಾಧನೆ ಮಾಡಿರುವುದು ಪ್ರಶಂಸನೀಯ. ಇದರೊಂದಿಗೆ ಗ್ರಾಮೀಣ ಮಹಿಳೆಯರ ಏಳಿಗೆಗಾಗಿ ಹುಟ್ಟಿಕೊಂಡ ನವೋದಯ ಸ್ವಸಹಾಯ ಗುಂಪುಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ಸೂಚಿಸಿದರು. 

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ನವೋದಯ ಸ್ವಸಹಾಯ ಗುಂಪುಗಳ ಕಾರ್ಯ ನಿರ್ವಹಣೆಯ ಬಗ್ಗೆ ತಂಡಕ್ಕೆ ಮಾಹಿತಿ ನೀಡಿದರು. ಬ್ಯಾಂಕ್ ಹಾಗೂ ಸ್ವಸಹಾಯ ಗುಂಪುಗಳ ಕಾರ್ಯದಕ್ಷತೆ ದೇಶದಲ್ಲಿ ಗಮನಾರ್ಹ ಸಾಧನೆ ಮಾಡಿರುವುದರಿಂದಲೇ ಅಮೆರಿಕದ ಪೆನ್ಸಿಲ್ವೇನಿಯಾ ವಿವಿ ತಂಡ ವಿಶೇಷ ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸಿದೆ. 

ಪ್ರೊ .ಫೆಮಿಡಾ ಹ್ಯಾಂಡಿ ನೇತೃತ್ವದಲ್ಲಿ 10ನೇ ಬಾರಿಗೆ ಅಮೆರಿಕಾ ತಂಡ ಎಸ್ ಸಿಡಿಸಿಸಿ ಬ್ಯಾಂಕಿಗೆ ಭೇಟಿ ನೀಡುತ್ತಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನವೋದಯ ಸ್ವ ಸಹಾಯ ಗುಂಪು ಸರ್ವ ವಿಧದಲ್ಲೂ ಮುನ್ನಡೆಯನ್ನು ಕಂಡು ಯಶಸ್ವಿ 23 ವರ್ಷಗಳನ್ನು ಪೂರೈಸಿದೆ ಎಂದರು. ನಿಟ್ಟೆ ವಿಶ್ವವಿದ್ಯಾಲಯದ ಪ್ರೊ ವಿನೋದ್ ದೀಕ್ಷಿತ್ ಅವರು ಅಧ್ಯಯನ ತಂಡವನ್ನು ಪರಿಚಯಿಸಿ, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿ ಬಾರಿಯೂ ಅಧ್ಯಯನ ತಂಡ ಆಗಮಿಸಿದಾಗ ಉತ್ತಮವಾದ ಸಹಕಾರವನ್ನು ನೀಡುತ್ತಾ ಬಂದಿರುವುದನ್ನು ಸ್ಮರಿಸಿದರು. 

ಎಸ್‌ಸಿಡಿಸಿಸಿ ಬ್ಯಾಂಕ್ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ತನ್ನ ಕಾರ್ಯಸಾಧನೆಯಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ , ನಿರ್ದೇಶಕರಾದ ವಾದಿರಾಜ ಶೆಟ್ಟಿ , ಸದಾಶಿವ ಉಳ್ಳಾಲ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ , ಟ್ರಸ್ಟ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಹಾಗೂ ಬ್ಯಾಂಕ್ ಅಧಿಕಾರಿಗಳು ಇದ್ದರು.