ಸಾರಾಂಶ
ಸೊರಬ: ಯಾವುದೇ ಸಂಘ-ಸಂಸ್ಥೆಗಳು ವ್ಯವಸ್ಥಿತವಾಗಿ ಮುನ್ನೆಡೆದು ಯಶಸ್ವಿಯಾಗಬೇಕಾದರೆ ಅದರಲ್ಲಿನ ಸದಸ್ಯರ ಹೊಂದಾಣಿಕೆ ಮನೋಭಾವ ಮುಖ್ಯವಾಗಿರುತ್ತದೆ. ಆದ್ದರಿಂದ ಸದಸ್ಯರು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ ಕ್ರಿಯಾಶೀಲರಾಗಿ ಮುನ್ನಡೆಯಬೇಕು ಎಂದು ಶ್ರೀ ಪಾರ್ವತಿ ದೇವಸ್ಥಾನ ಸಮಿತಿ ಅಧ್ಯಕ್ಷ, ಉದ್ಯಮಿ ಚಂದ್ರಶೇಖರ ನಿಜಗುಣ ನುಡಿದರು.ಪಟ್ಟಣದ ಚಾಮರಾಜಪೇಟೆಯ ಶ್ರೀ ಪಾರ್ವತಿ ದೇವಸ್ಥಾನ ಮತ್ತು ಶ್ರೀ ಎಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೊರಬ ವಲಯದ ಚಾಮರಾಜಪೇಟೆ ಕಾರ್ಯಕ್ಷೇತ್ರ ಮತ್ತು ಮರೂರು ಕಾರ್ಯ ಕ್ಷೇತ್ರದ ಸದಸ್ಯರಿಂದ ಹಮ್ಮಿಕೊಂಡಿದ್ದ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳಾ ಸಬಲೀಕರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಗುರಿಯಾಗಿದ್ದು, ಇಂದು ಮಹಿಳೆಯರು ಸ್ವಾವಲಂಭಿ ಜೀವನದ ಜೊತೆಗೆ ಕುಟುಂಬದ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದಕ್ಕೆ ಕಾರಣ ಧರ್ಮಸ್ಥಳ ಯೋಜನೆಯಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈವರೆಗಿನ ಸಾಧನೆ, ಮಹಿಳಾ ಸಬಲೀಕರಣಕ್ಕಾಗಿ ಮಾತೃಶ್ರೀ ಹೇಮಾವತಿ ಅಮ್ಮನವರು ನೀಡಿರುವ ವಿಶೇಷ ಯೋಜನೆಗಳು ಮತ್ತು ಜ್ಞಾನ ವಿಕಾಸ ಕಾರ್ಯಕ್ರಮ ಕಾರಣವಾಗಿದೆ ಎಂದರು.ಹಿಂದುಗಳ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಧರ್ಮಸ್ಥಳ ಯೋಜನೆಯ ಕಾರ್ಯ ಪ್ರಶಂಸನೀಯ. ಇದರಿಂದ ಪಟ್ಟಣ ಅಥವಾ ಗ್ರಾಮದ ಜನರಲ್ಲಿ ಭಕ್ತಿ ಭಾವನೆ ಬೆಳೆಯುತ್ತದೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅರಿವು ಮೂಡಿಸಿದಂತಾಗುತ್ತದೆ ಎಂದರು. ನಂತರ ಶ್ರೀ ಪಾರ್ವತಿ ದೇವಸ್ಥಾನ ಮತ್ತು ಎಲ್ಲಮ್ಮ ದೇವಿ ದೇವಸ್ಥಾನ ಮತ್ತು ಆವರಣವನ್ನು ಮಹಿಳೆಯಿರಿಂದ ಸ್ವಚ್ಛತಾ ನಿರ್ವಹಣೆ ಮಾಡಲಾಯಿತು.ಈ ವೇಳೆ ಪವಿತ್ರ ಧಾರ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೆಲವು ಕುಹಕಿಗಳಿಂದ ನಡೆಯುತ್ತಿರುವ ಅಪಪ್ರಚಾರಕ್ಕೆ ಮಂಜುನಾಥಸ್ವಾಮಿ ತಕ್ಷಣ ಶಿಕ್ಷೆ ವಿಧಿಸಲಿ ಎಂದು ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.ಒಕ್ಕೂಟದ ಅಧ್ಯಕ್ಷರಾದ ಕರಿಯಪ್ಪ, ದೇವಸ್ಥಾನ ಸಮಿತಿಯ ಸದಸ್ಯರಾದ ಅಶೋಕ್ ಶೇಟ್, ವಲಯದ ಮೇಲ್ವಿಚಾರಕ ಉಮೇಶ್ ಪೂಜಾರಿ, ಸೇವಾ ಪ್ರತಿನಿಧಿಗಳಾದ ಸುಷ್ಮಾ, ಉಷಾ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಜರಿದ್ದರು.