ಷೇರುದಾರ ಸದಸ್ಯರಿಗೆ ವಿಶೇಷ ಭದ್ರತೆ ನೀಡುವುದು ಸೇರಿದಂತೆ ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಹಕಾರಿ ಸಚಿವಾಲಯ ತೆರೆದು ಸಹಕಾರಿಗೆ ಪೂರಕವಾಗಿರುವ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಷೇರುದಾರ ಸದಸ್ಯರಿಗೆ ವಿಶೇಷ ಭದ್ರತೆ ನೀಡುವುದು ಸೇರಿದಂತೆ ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಹಕಾರಿ ಸಚಿವಾಲಯ ತೆರೆದು ಸಹಕಾರಿಗೆ ಪೂರಕವಾಗಿರುವ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಸಸರವಳ್ಳಿ ಗ್ರಾಮದ ಅರೆಹದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶನಿವಾರ ಏರ್ಪಡಿಸಿದ್ದ ಸುವರ್ಣ ಮಹೋತ್ಸವದಲ್ಲಿ ಸುವರ್ಣ ಸಹಕಾರ ಸೌಧ ಉದ್ಘಾಟಿಸಿ ಮಾತನಾಡಿ, ಇಂದು ರೈತಾಪಿ ಜನರಿಗೆ ಮಾನವೀಯ ನೆಲೆಯಲ್ಲಿ ಮತ್ತು ಸೇವಾ ಭಾವದಲ್ಲಿ ಸಾಲ ಸೌಲಭ್ಯವೂ ಸೇರಿದಂತೆ ಅವರ ಅಭಿವೃದ್ಧಿ ಚಿಂತನೆ ಬಯಸಿ ಸಹಕಾರ ನೀಡುವ ಕಾರ್ಯ ಆಗಬೇಕಿದೆ ಎಂದರು.

ಸಹಕಾರ ಭಾವ ಸಾಧ್ಯವಾಗುವುದಿದ್ದರೆ ಅದು ಸಹಕಾರಿ ಸಂಸ್ಥೆಗಳ ಮೂಲಕ ಎಂದ ಅವರು, ಸಹಕಾರಿ ಸಂಸ್ಥೆಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತೆ ಯೋಜನೆ ತಂದಿರುವ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರ್ಯದಿಂದ ಜನರು ಸಹಕಾರಿ ಸಂಸ್ಥೆಯ ಮೇಲೆ ವಿಶೇಷ ನಂಬಿಕೆ ಇಡುವಂತಾಗಿದೆ ಎಂದರು.

ಸುವರ್ಣ ಮಹೋತ್ಸವ ಉದ್ಘಾಟಿಸಿದ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಎನ್. ವಿದ್ಯಾಧರ ಮಾತನಾಡಿ, ಸಹಕಾರಿ ಸಂಸ್ಥೆಗಳನ್ನು ಕಟ್ಟುವುದು ಸುಲಭ, ಆದರೆ ಅದನ್ನು ಉಳಿಸಿ ಬೆಳೆಸುವುದು ಅತ್ಯಂತ ಕಠಿಣ. ಅದರಲ್ಲಿಯೂ ಮಲೆನಾಡು ಭಾಗದಲ್ಲಿ ಹಲವು ಸವಾಲುಗಳ ನಡುವೆ ಸಹಕಾರಿ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತಿದೆ. ಸರ್ಕಾರ ಮಾಡುವ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡುತ್ತಿದೆ. ಕೇವಲ ಸಾಲ ವಿತರಣೆಗೆ ಮಾತ್ರ ಸೀಮಿತವಾಗದೆ ಸೂಪರ್ ಮಾರ್ಕೆಟ್ ಗಳಂತಹ ಕಾರ್ಯದೊಂದಿಗೆ ಜನರಿಗೆ ಸೇವೆ ನೀಡುವುದಕ್ಕೆ ಸಾಧ್ಯವಿದೆ ಎನ್ನುವುದನ್ನು ಅರೆಹದ ಸಹಕಾರಿ ಸಂಘ ತೋರಿಸಿದೆ ಎಂದರು.

ವಿಪ ಸದಸ್ಯ ಧನಂಜಯ ಸರ್ಜಿ, ಆಪ್ಸ್ಕೊಸ್ ಅಧ್ಯಕ್ಷ ಬಿ.ಎ.ಇಂದೂಧರ ಗೌಡ, ಅಕ್ಷಯ ಸೌರ್ಹಾದದ ಅಧ್ಯಕ್ಷ ದಿನೇಶ್ ಬರದವಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎಂ.ಜಿ.ರಾಮಚಂದ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೆಗಡೆ ಹಾಗೂ ಚೈತನ್ಯ ವಿಶೇಷ ಶಿಕ್ಷಣ ಶಾಲೆ ಸಂಸ್ಥಾಪಕಿ ಶಾಂತಲಾ ಸುರೇಶ್ ಅವರಿಗೆ ವಿಶೇಷ ಸೇವಾ ಸನ್ಮಾನ ಹಾಗೂ ಸಂಸ್ಥೆಗೆ ದುಡಿದವರಿಗೆ ಸೇವಾ ಸನ್ಮಾನ ನೀಡಲಾಯಿತು. ಸಂಘದ ಅಧ್ಯಕ್ಷ ಟಿ.ಎಸ್.ಅಶೋಕ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸಿ.ಎಸ್.ಗಣಪತಿರಾವ್, ಉಪಾಧ್ಯಕ್ಷ ರಜನೀಶ್ ಹೆಗಡೆ, ನಿರ್ದೇಶಕರಾದ ನಿರಂಜನ ಎಚ್.ಕೆ. ಅನುಪಮ, ಮಧುರಾ, ಸಿಇಒ ಜಿ.ಎಂ. ಮಂಜುನಾಥ್, ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಡಾ.ರಾಜನಂದಿನಿ ಕಾಗೋಡು, ರಾಜಶೇಖರ್ ಗಾಳಿಪುರ ಮತ್ತಿತರರು ಇದ್ದರು.

ಜಿ.ಎಸ್. ಕೃಷ್ಣಮೂರ್ತಿ ಸ್ವಾಗತಿಸಿ, ಗಣಪತಿ ಗುಂಜುಗೋಡು ನಿರೂಪಿಸಿದರು. ಸುವರ್ಣ ಮಹೋತ್ಸವದ ಅಂಗವಾಗಿ ಪ್ರದರ್ಶನ ಏರ್ಪಡಿಸಲಾಗಿತ್ತು.