ಹುಬ್ಬಳ್ಳಿ:

ಸಮಾಜದ ಅಭಿವೃದ್ಧಿಗೆ ಸೇವಾ ಮನೋಭಾವ ಅತ್ಯಗತ್ಯ. ಹಾಗೆಯೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಘ-ಸಂಸ್ಥೆಗಳು ಹಾಗೂ ಕಾರ್ಯಕರ್ತರಿಗೆ ಸಮಯೋಚಿತ ಸಹಾಯ-ಸಹಕಾರ ನೀಡಬೇಕು ಎಂದು ಸ್ವರ್ಣ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಹಾಗೂ ಉದ್ಯಮಿ ಡಾ. ಸಿ.ಎಚ್. ವಿ.ಎಸ್.ವಿ. ಪ್ರಸಾದ್ ಹೇಳಿದರು.ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ವತಿಯಿಂದ ನಗರದ ಕರ್ನಾಟಕ ಜಿಮಖಾನಾ ಕ್ಲಬ್‍ನಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆಗಳು ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾದುದು, ಇಂತಹ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತರಿಸಬೇಕು ಎಂದು ಹೇಳಿದರು.

ಬಳಿಕ ಹುಬ್ಬಳ್ಳಿ ಮಹಿಳಾ ಠಾಣೆಗೆ ಕಂಪ್ಯೂಟರ್‌, ವಿದ್ಯಾನಗರದ ರೋಟರಿ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ಮೂವರು ಟೀಚರ್ಸ್‍ಗೆ ಇಡೀ ಒಂದು ವರ್ಷದ ವೇತನ ಹಾಗೂ ಮೂವರು ನರ್ಸಿಂಗ್ ವಿದ್ಯಾರ್ಥಿಗಳ ಕಾಲೇಜು ಶುಲ್ಕದ ಮೊತ್ತದ ಚೆಕ್‍ ವಿತರಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ 3170 ಜಿಲ್ಲಾಧ್ಯಕ್ಷ ಡಾ. ಲೆನ್ನಿ ಡೆ. ಕೋಸ್ಟಾ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ರೋಟರಿ ಎಲೈಟ್ ಅಧ್ಯಕ್ಷರಾಗಿ ಪ್ರಶಾಂತ ಕುರಹಟ್ಟಿ, ಕಾರ್ಯದರ್ಶಿಯಾಗಿ ಸಂಜಯ ಪೀರಾಪುರ ಸೇರಿದಂತೆ ಪದಾಧಿಕಾರಿಗಳು ಪದಗ್ರಹಣ ವಹಿಸಿದರು.

ಐಬಿಎಂಆರ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವಿನಯಚಂದ್ರ ಮಹೇಂದ್ರಕರ ಸೇರಿದಂತೆ ಅತಿಥಿಗಳನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿಶ್ವಶಾಂತಿಗಾಗಿ ಮೌನಾಚರಣೆ ನಡೆಸಲಾಯಿತು.