ಸಾರಾಂಶ
ನಿವೇಶನ ಹಂಚಿಕೆ ವಿಚಾರದಲ್ಲಿ ಅಶ್ರಯ ಸಮಿತಿ ಸದಸ್ಯರು ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಎ, ಅರ್, ಅಶೋಕ್ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ, ಬೇಲೂರು
ನಿವೇಶನ ಹಂಚಿಕೆ ವಿಚಾರದಲ್ಲಿ ಅಶ್ರಯ ಸಮಿತಿ ಸದಸ್ಯರು ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಎ, ಅರ್, ಅಶೋಕ್ ಕಿಡಿಕಾರಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತರಿಗೆ ನಿವೇಶನ ಹಂಚಲು ಈ ಹಿಂದೆ ನಡೆದ ಅಶ್ರಯ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ ಶಾಸಕರ ನೇತೃತ್ವದಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಹಿಂಭಾಗದಲ್ಲಿ ಇರುವ ಗುಡಿಸಲಿನ ನಿವಾಸಿಗಳಿದ್ದು ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಆಗುತ್ತಿದೆ ಎಂಬ ದೂರು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಸಂಬಂಧ ೫೭ ಗುಡಿಸಲು ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಿ ಅವರನ್ನು ಸ್ಥಳಾಂತರ ಮಾಡಿದರೆ ಸರ್ಕಾರಿ ಶಾಲೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಟ್ಟಂತಾಗುತ್ತದೆ ಎಂಬುದು ಸ್ಥಳೀಯ ಸಂಘ ಸಂಸ್ಥೆಗಳ ನಿಲುವಾಗಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಾತಿನಿಧ್ಯ ಅವರಿಗೆ ನೀಡಲಾಗಿದೆ. ನಂತರ ಎರಡನೆಯ ಸ್ಥಾನದಲ್ಲಿ ನಿವೇಶನ ರಹಿತ ಪತ್ರಕರ್ತರಿಗೆ ಆದ್ಯತೆ ನೀಡಲಾಗುತ್ತಿದೆ. ಮೂರನೇ ಹಂತದಲ್ಲಿ ಚನ್ನಕೇಶವ ದೇಗುಲ ಮಾರ್ಗದರ್ಶಿಗಳಿಗೆ ಹಾಗೂ ನಿವೇಶನ ರಹಿತ ಪುರಸಭೆ ಪೌರ ಕಾರ್ಮಿಕರಿಗೆ ಹಂಚಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನಿವೇಶನ ವಿಚಾರಕ್ಕೆ ಸಂಬಂಧಪಟ್ಟ ಸಭೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸಿದ್ದಾರೆ. ಇಲ್ಲಿ ಯಾರೊ ಒಬ್ಬರನ್ನು ಓಲೈಕೆ ಮಾಡಲು ನಿವೇಶನ ಹಂಚಿಕೆ ಮಾಡುತ್ತಿಲ್ಲ ಎಂಬುದನ್ನು ನಮ್ಮ ಮೇಲೆ ಆರೋಪ ಮಾಡುವವರು ಅರಿತುಕೊಳ್ಳಬೇಕು . ನಿವೇಶನ ಹಂಚಿಕೆಯ ವಿಚಾರದ ಬಗ್ಗೆ ಮಾಹಿತಿ ಕೊರತೆ ಇದ್ದು ಯಾವುದೇ ಅವ್ಯವಹಾರ ಮಾಡಲು ಅವಕಾಶವಿಲ್ಲ. ಇಲ್ಲಿ ಯಾರು ಸಹ ಸ್ವಂತ ಲಾಭಕ್ಕಾಗಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಕೈ ಹಾಕುತ್ತಿಲ್ಲ. ಡೀಲ್ ಮಾಡುವ ಅಭ್ಯಾಸ ಯಾರಿಗಿದೆ ಎಂಬುದನ್ನು ಅವರ ಮನಸಾಕ್ಷಿಯನ್ನೆ ಕೇಳಿಕೊಳ್ಳಲಿ ಎಂದು ಅಶ್ರಯ ಸಮಿತಿ ಸದಸ್ಯ ಇಕ್ಬಾಲ್ ಅಹಮದ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಿವೇಶನ ಜಾಗವನ್ನು ಶಾಸಕರೊಂದಿಗೆ ವೀಕ್ಷಿಸುವ ವೇಳೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಇನ್ನು ಸರ್ವೇ ನಂಬರ್ ೧೪೭ ರಲ್ಲಿ ರಾಯಪುರ ಬಳಿ ೧೯೧ ನಿವೇಶನಗಳನ್ನು ಗುರುತು ಮಾಡಿದ್ದು ನಂತರ ಬಂಟೇನಹಳ್ಳಿಯಲ್ಲಿರುವ ಸರ್ವೇ ನಂ ೧೫೮ ರಲ್ಲಿ ೩ ಎಕರೆ ೧೭ ಕುಂಟೆ ಜಾಗವಿದ್ದು ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬರಲಿದೆ. ಈ ಸಂದರ್ಭದಲ್ಲಿ ನಮ್ಮ ಪುರಸಭೆ ಸದಸ್ಯರ ಜೊತೆ ಚರ್ಚಿಸಿ ಪುರಸಭೆ ವ್ಯಾಪ್ತಿಯಲ್ಲಿ ಕಡುಬಡವರಿಗೆ ನಿವೇಶನವನ್ನು ಎರಡನೇ ಹಂತದಲ್ಲಿ ಹಂಚಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದರು.ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರ ಸೂಚನೆಯಂತೆ ಈಗಾಗಲೇ ರಾಯಪುರ ಬಳಿ ನಿವೇಶನ ಹಂಚಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಾಗಿದ್ದು ಸಭೆಯಲ್ಲಿ ಸಹ ಚರ್ಚೆಯಾಗಿದೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಮೊದಲ ಹಂತದಲ್ಲಿ ಗುಡಿಸಲು ನಿವಾಸಿಗಳು, ಪತ್ರಕರ್ತರು, ಪೌರಕಾರ್ಮಿಕರು, ಮಾರ್ಗದರ್ಶಿಕರಿಗೆ ಹಂಚಲಾಗುತ್ತದೆ. ಎರಡನೇ ಹಂತದಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಪಟ್ಟಿಯನ್ನು ತಯಾರು ಮಾಡಲು ಸೂಚನೆ ನೀಡಿದ್ದು ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಪತ್ರಿಕಾ ಪ್ರಕಟಣೆಯನ್ನು ಶಾಸಕರ ನಿರ್ದೇಶನದಂತೆ ಮಾಡಿದ್ದು ಅರ್ಜಿಗಳನ್ನು ಸಹ ವಿತರಿಸಲಾಗುತ್ತಿದೆ. ಎಷ್ಟು ಅರ್ಜಿಗಳು ಬರುತ್ತದೆ ಎಂದು ನೋಡಿ ಅಶ್ರಯ ಸಮಿತಿ ಸಭೆಯಲ್ಲಿ ಅದನ್ನು ಚರ್ಚಿಸಿ ನಂತರ ಅದನ್ನು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಿ ಅಲ್ಲಿಂದ ಅವರ ಸಲಹೆ ಸೂಚನೆ ಮೇರೆಗೆ ನಿವೇಶನ ಹಂಚಲು ಅಧ್ಯಕ್ಷರ ಹಾಗೂ ಸದಸ್ಯರೊಟ್ಟಿಗೆ ತೀರ್ಮಾನಿಸಲಾಗುವುದು.ಸುಜಯ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ
ತಾವು ನಿರ್ಮಾಣ ಮಾಡಿರುವ ಖಾಸಗಿ ವಾಣಿಜ್ಯ ಸಂಕೀರ್ಣಕ್ಕೆ ಎಷ್ಟು ಕಂದಾಯ ಕಟ್ಟುತ್ತಿದ್ದೀರಿ?. ಪುರಸಭೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವಂತೆ ಮಾತನಾಡುವ ಅಶ್ರಯ ಸಮಿತಿ ಸದಸ್ಯ ಇಕ್ಬಾಲ್ ಗಾಜಿನ ಮನೆಯಲ್ಲಿದ್ದರೂ ಬೇರೆ ಮನೆಗೆ ಕಲ್ಲು ತೂರುವ ನೈತಿಕ ಹಕ್ಕು ಅವರಿಗೆ ಏನಿದೆ.ಎ.ಆರ್ ಅಶೋಕ್ ಪುರಸಭೆ ಅಧ್ಯಕ್ಷ