ಪರಿಪೂರ್ಣ ವಿದ್ಯಾರ್ಥಿಯಾಗಲು ಸದೃಢ ದೇಹ, ಬುದ್ಧಿ ಮುಖ್ಯ

| Published : Dec 29 2024, 01:17 AM IST

ಸಾರಾಂಶ

ಹೊನ್ನಾಳಿ: ಸದೃಢ ದೇಹ ಹಾಗೂ ಸದೃಢ ಬುದ್ಧಿ ಇವೆರಡು ಮನುಷ್ಯನಿಗೆ ಬಹುಮುಖ್ಯ. ಇವೆರಡು ಇದ್ದರೆ ಮಾತ್ರ ವಿದ್ಯಾರ್ಥಿ ಪರಿಪೂರ್ಣನಾಗಲು ಸಹಾಯಕವಾಗುತ್ತವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಹೊನ್ನಾಳಿ: ಸದೃಢ ದೇಹ ಹಾಗೂ ಸದೃಢ ಬುದ್ಧಿ ಇವೆರಡು ಮನುಷ್ಯನಿಗೆ ಬಹುಮುಖ್ಯ. ಇವೆರಡು ಇದ್ದರೆ ಮಾತ್ರ ವಿದ್ಯಾರ್ಥಿ ಪರಿಪೂರ್ಣನಾಗಲು ಸಹಾಯಕವಾಗುತ್ತವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಇಲ್ಇಯ ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠದಡಿ ನಡೆಯುತ್ತಿರುವ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ವಿ.ವಿ.ಮಟ್ಟದಲ್ಲಿ ನಡೆದ ಅನೇಕ ಕ್ರೀಡಾ ಸ್ಪರ್ಧೆಗಳಲ್ಲಿ ಚಾಂಪಿಯನ್ ಶೀಲ್ಡ್ ಗೆದ್ದ ಹಿನ್ನೆಲೆ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕ ವರ್ಗವನ್ನು ಅಭಿನಂದಿಸಿ ಅವರು ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳು ಹಾಗೂ ಚಾಂಪಿಯನ್‌ಶಿಪ್‌ಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಆದ್ದರಿಂದ ಕ್ರೀಡಾ ಸಾಧಕರು ಹಾಗೂ ಅವರನ್ನು ರೂಪಿಸಿದ ಉಪನ್ಯಾಸಕರ ಶ್ರಮ ಅಭಿನಂದನಾರ್ಹ ಎಂದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ನರಗಟ್ಟಿ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ನಮ್ಮ ಕಾಲೇಜಿಗೆ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಪ್ರಶಸ್ತಿಗಳು ಬಂದಿವೆ. ಇದಕ್ಕೆ ವಿದ್ಯಾರ್ಥಿಗಳ ಸತತ ಅಭ್ಯಾಸ ಕಾರಣ. ಅದರ ಜತೆಗೆ ಶ್ರೀಮಠದ ಶ್ರೀಗಳು, ಪ್ರಾಂಶುಪಾಲರು ಹಾಗೂ ಇತರ ಉಪನ್ಯಾಸಕ ವರ್ಗ ನಮಗೆ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು.

2024-2025ನೇ ಸಾಲಿನ ರಾಜ್ಯಮಟ್ಟದ ಅನೇಕ ಟ್ರೋಫಿಗಳನ್ನು ನಮ್ಮ ಕ್ರೀಡಾಪಟುಗಳು ತಮ್ಮದಾಗಿಸಿಕೊಂಡಿದ್ದಾರೆ. 2024-25ನೇ ಸಾಲಿನಲ್ಲಿ ಬಾಸ್ಕೆಟ್‌ಬಾಲ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಹ್ಯಾಂಡ್‌ಬಾಲ್, ಬಾಸ್ಕೆಟ್‌ ಬಾಲ್, ನೆಟ್‌ಬಾಲ್, ಬ್ಯಾಡ್ಮಿಂಟನ್, ಕಬಡ್ಡಿ, ಖೋ ಖೋ, ಗುಡ್ಡಗಾಡು ಓಟ, ಅಥ್ಲೆಟಿಕ್ ಸೇರಿದಂತೆ ಅನೇಕ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು.

ನೆಟ್‌ಬಾಲ್ ಹಾಗೂ ಹ್ಯಾಂಡಲ್‌ಬಾಲ್‌ನ ಮಹಿಳಾ ತಂಡದಲ್ಲಿ ಪೂಜಾ, ಸುಜಾತ, ದೇವಿಕಾ ಬಾಯಿ, ರಮ್ಯ, ಲಕ್ಷ್ಮೀ, ನಂದಿನಿ, ಸುಕನ್ಯಾ, ಧರಣಿ, ಮಂಜುಳಾ ಹಾಗೂ ಸಿಂಚನ ಹಾಗೂ ಪುರುಷರ ತಂಡದಲ್ಲಿ ಶರತ್, ಆಕಾಶ್, ವಿಜಯಕುಮಾರ್, ಮಂಜುನಾಥ, ಸಾಯಿ ಕುಮಾರ್, ಗಿರೀಶ್, ಶರತ್, ಬಸವರಾಜ, ಶಶಾಂಕ್ ಹಾಗೂ ರಿಜ್ವಾನ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಚಿತ್ರದುರ್ಗದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ವಿಭಾಗದ ಪುರುಷ ಹಾಗೂ ಮಹಿಳೆಯರ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಚಾಂಪಿಯನ್‌ಶಿಪ್ ಗೆದ್ದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ದೊಡ್ಡಗೌಡರ, ಕಚೇರಿ ಅಧೀಕ್ಷಕ ಲೋಕೇಶ್ವರ್, ಸಹಾಯಕ ಪ್ರಾಧ್ಯಾಪಕ ನಾಗೇಶಪ್ಪ, ಗಂಗಾಧರ್, ಶರತ್, ಸೌಮ್ಯ, ಸಂಗೀತಾ, ರೇಣುಕಾ, ಸತೀಶ್, ಉಪನ್ಯಾಸರು ಹಾಜರಿದ್ದರು.