ಪ್ರತಿಯೊಬ್ಬ ಅರ್ಚಕ, ಆಗಮಿಕ ಹಾಗೂ ಉಪಾದಿವಂತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ಹೊಂದಲಾಗಿದೆ ಎಂದರು. ಕಳೆದ ಕೆಲವು ವರ್ಷಗಳಿಂದ ಜಿಲ್ಲಾ ಸಂಘದ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ಕುಂಠಿತಗೊಂಡಿದ್ದವು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಸದಸ್ಯರ ಅಹವಾಲುಗಳನ್ನು ಆಲಿಸಿ, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮೂಲಕ ರಾಜ್ಯದಲ್ಲೇ ಮಾದರಿ ಸಂಘವನ್ನಾಗಿ ರೂಪಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ನೂತನ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಅರ್ಚಕರು, ಆಗಮಿಕರು ಹಾಗೂ ಉಪಾದಿವಂತರ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯುವಂತೆ ಸಂಘಟನೆಯನ್ನು ಬಲಪಡಿಸಿ, ಅರ್ಚಕರ ಧ್ವನಿಯನ್ನು ರಾಜ್ಯಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಹಾಸನ ಜಿಲ್ಲಾ ಅರ್ಚಕರ ಆಗಮಿಕರ ಹಾಗೂ ಉಪಾದಿವಂತರ ಜಿಲ್ಲಾ ಸಂಘದ ನೂತನ ಅಧ್ಯಕ್ಷ ವಳಗೇರಹಳ್ಳಿ ಶ್ರೀಧರಮೂರ್ತಿ ತಿಳಿಸಿದರು.ನಗರದ ಶ್ರೀ ಚನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆದ ಹಾಸನ ಜಿಲ್ಲಾ ಅರ್ಚಕರ ಆಗಮಿಕರ ಹಾಗೂ ಉಪಾದಿವಂತರ ವಾರ್ಷಿಕ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಅವರು ಮಾತನಾಡಿ, ಈ ಹಿಂದೆ ಸೋಮಶೇಖರ್ ಅವರು ಜಿಲ್ಲಾ ಸಂಘದ ಅಧ್ಯಕ್ಷರಾಗಿ ಸಂಘದ ಚಟುವಟಿಕೆಗಳನ್ನು ಮುನ್ನಡೆಸಿದ್ದು, ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಈಗಾಗಲೇ ಚನ್ನರಾಯಪಟ್ಟಣ ತಾಲೂಕು ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘವನ್ನು ಸಕ್ರಿಯವಾಗಿ ಮುನ್ನಡೆಸಲಾಗಿದೆ. ಅದೇ ಮಾದರಿಯಲ್ಲಿ ಇದೀಗ ಜಿಲ್ಲಾ ಸಂಘವನ್ನು ಜಿಲ್ಲೆಯಾದ್ಯಂತ ವಿಸ್ತರಿಸಿ, ಪ್ರತಿಯೊಬ್ಬ ಅರ್ಚಕ, ಆಗಮಿಕ ಹಾಗೂ ಉಪಾದಿವಂತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ಹೊಂದಲಾಗಿದೆ ಎಂದರು. ಕಳೆದ ಕೆಲವು ವರ್ಷಗಳಿಂದ ಜಿಲ್ಲಾ ಸಂಘದ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ಕುಂಠಿತಗೊಂಡಿದ್ದವು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಸದಸ್ಯರ ಅಹವಾಲುಗಳನ್ನು ಆಲಿಸಿ, ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮೂಲಕ ರಾಜ್ಯದಲ್ಲೇ ಮಾದರಿ ಸಂಘವನ್ನಾಗಿ ರೂಪಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ನೂತನ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಚನ್ನರಾಯಪಟ್ಟಣ ತಾಲೂಕು ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಶ್ರೀಧರಮೂರ್ತಿ ಅವರು ತಾಲೂಕು ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೂರಾರು ಸದಸ್ಯರ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಸಂಘಕ್ಕೆ ಹೊಸ ಚೈತನ್ಯ ದೊರೆಯುವ ವಿಶ್ವಾಸವಿದೆ ಎಂದರು. ಹಾಸನ ಜಿಲ್ಲಾ ಸಂಘದ ಚಟುವಟಿಕೆಗಳು ಕಳೆದ ನಾಲ್ಕು ವರ್ಷಗಳಿಂದ ಮಂದಗತಿಯಾಗಿದ್ದವು. ಇದೀಗ ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಸಂಘವು ಮತ್ತಷ್ಟು ಕ್ರಿಯಾಶೀಲವಾಗಿ ಮುನ್ನಡೆಯಲಿದೆ. ಹಾಸನಾಂಬೆ ಹಾಗೂ ಶ್ರೀ ಚನ್ನಕೇಶವ ದೇವರ ಆಶೀರ್ವಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮೇಲೆ ಸದಾ ಇರಲಿ ಎಂದು ಆಶಿಸಿದರು.ಸಭೆಯಲ್ಲಿ ಹಾಸನ ಜಿಲ್ಲಾ ಅರ್ಚಕರ ಆಗಮಿಕರ ಹಾಗೂ ಉಪಾದಿವಂತರ ಜಿಲ್ಲಾ ಸಂಘದ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಳಗೇನಹಳ್ಳಿ ಶ್ರೀಧರಮೂರ್ತಿ, ಉಪಾಧ್ಯಕ್ಷರಾಗಿ ಶಿವನಂಜಯ್ಯ ಕೆ.ಆರ್ ಹಾಗೂ ವೆಂಕಟೇಶ್ ಜಿ.ಎಸ್, ಕಾರ್ಯದರ್ಶಿಯಾಗಿ ಧನಂಜಯಮೂರ್ತಿ, ಸಹಕಾರ್ಯದರ್ಶಿಗಳಾಗಿ ಸಂತೋಷ್ ಹಾಗೂ ಗೋವಿಂದರಾಜು, ಸಂಚಾಲಕರಾಗಿ ಚಂದ್ರಣ್ಣ ಹಾಗೂ ಕಿರಣ್ ಕಾರೇಹಳ್ಳಿ, ಕಾರ್ಯಾಧ್ಯಕ್ಷರಾಗಿ ಸೋಮಶೇಖರಯ್ಯ, ಗೌರವ ಅಧ್ಯಕ್ಷರಾಗಿ ಪುಟ್ಟಣ್ಣಯ್ಯ ಸೇರಿದಂತೆ ಒಟ್ಟು ೩೩ ಮಂದಿ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಅಭಿನಂದಿಸಿ, ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.