ಸಾರಾಂಶ
ಪಾಲಕರು ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಜಲಾಶಯದಲ್ಲಿ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ಪಾಲಕರು ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಜಲಾಶಯದಲ್ಲಿ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.ಇಲ್ಲಿನ ಜಯನಗರದ ನಿವೃತ್ತ ಶಿಕ್ಷಕ ನಾಗೇಶ ಅವರ ಪುತ್ರ ರಾಹುಲ್ (17) ಆತ್ಮಹತ್ಯೆ ಮಾಡಿಕೊಂಡವ. ನಗರದ ಬೇತಲ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿತ್ಯ ಮೊಬೈಲ್ ನೋಡುತ್ತಿರುವುದರ ಬಗ್ಗೆ ಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪಾಲಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ತಾಲೂಕಿನ ಸಾಣಾಪುರ ಸಮತೋಲನ ಜಲಾಶಯದಲ್ಲಿ ಜೂ.11ರಂದು ಜಿಗಿದ್ದಿದ್ದ. ವಿದ್ಯಾರ್ಥಿಯ ಶವ ಬುಧವಾರ ಸಂಜೆ ಪತ್ತೆಯಾಗಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಿಜಯನಗರ ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ:
ನಿಗದಿತ ಸಮಯದಲ್ಲಿ ವಿಜಯನಗರ ಕಾಲುವೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಆನೆಗೊಂದಿ ಭಾಗದ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಕುರಿತು ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ ಮಾತನಾಡಿ, ಕಾಲುವೆಗಳ ಅಭಿವೃದ್ಧಿಗಾಗಿ ಸರ್ಕಾರ ಆಧುನಿಕರಣ ಗೊಳಿಸಲು ಮುಂದಾಗಿದ್ದು, ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಎಡಿಬಿ ಅನುದಾನದಲ್ಲಿ ವಿಜಯನಗರ ಕಾಲುವೆಗಳ ಆಧುನಿಕರಣ ಕಾಮಗಾರಿ ನಡೆಯುತ್ತಿವೆ. ಇದೇ ಸೆಪ್ಟೆಂಬರ್ 2024ರಲ್ಲಿ ಅದರ ಕಾರ್ಯ ವ್ಯಾಪ್ತಿ ಮುಗಿಯುತ್ತಿದೆ. ಆದರೆ ಬಹಳಷ್ಟು ಕಡೆ ಸೇತುವೆಗಳ ನಿರ್ಮಾಣ, ಕಾಲುವೆಯ ಕೆಳಭಾಗದಲ್ಲಿ ಆಗಿರುವ ಡ್ಯಾಮೇಜ್ ಸರಿಪಡಿಸುವುದು ಬಾಕಿ ಇದೆ ಎಂದರು.ಮುನಿರಾಬಾದ್ ನೀರಾವರಿ ಇಲಾಖೆಯ ಅಭಿಯಂತರ ಬಸವರಾಜ್ ಮನವಿ ಸ್ವೀಕರಿಸಿದರು.ವಿಜಯನಗರ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಈ. ಮಲ್ಲಿಕಾರ್ಜುನ, ಉಪಾಧ್ಯಕ್ಷ ಘನಮಠಸ್ವಾಮಿ ಎಚ್.ಎಂ., ಆನೆಗೊಂದಿ ನೀರು ಬಳಕೆದಾರರ ಸಂಘದ ನಿರ್ದೇಶಕ ಚಂದ್ರಶೇಖರ ಭತ್ತದ್, ಚಂದ್ರಶೇಖರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಎಚ್.ಎಂ. ವಿರೂಪಾಕ್ಷಸ್ವಾಮಿ ಸೇರಿದಂತೆ ಇತರರು ಇದ್ದರು.