ಸಾರಾಂಶ
ಬಿಸಿಎನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಲಕ್ಷ್ಮೇಶ್ವರ: ವಿದ್ಯಾರ್ಥಿ ಜೀವನದಲ್ಲಿ ಒಂದು ಉನ್ನತ ಗುರಿಯನ್ನು ಹೊತ್ತು ಸಾಗಬೇಕು, ಇತ್ತೀಚಿನ ದಿನಗಳಲ್ಲಿ ಗೊತ್ತು ಗುರಿಯಿಲ್ಲದೇ ಬದುಕಿನಲ್ಲಿ ಸಾಗುವವರ ಸಂಖ್ಯೆ ಹೆಚ್ಚಿದೆ. ಆದರೆ ಹಾಗಾಗುವುದಕ್ಕೆ ಅವಕಾಶ ನೀಡದೆ ದೊರೆತಿರುವ ಉತ್ತಮ ಅವಕಾಶಗಳನ್ನು ಪಡೆದು ನಿರ್ದಿಷ್ಟ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಸಾಗುವದು ಅವಶ್ಯವಾಗಿದೆ ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ನಾಗರಾಜ ಕುಲಕರ್ಣಿ ಅಭಿಪ್ರಾಯಪಟ್ಟರು.ಅವರು ಗುರುವಾರ ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಸಿರಿ ವಿಜ್ಞಾನ, ವಾಣಿಜ್ಯ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಾದವರು ಸಮಯಕ್ಕೆ ಮಹತ್ವ ನೀಡಿ ಅಭ್ಯಾಸ ಸಮಯದಲ್ಲಿ ಸಮಯ ಪ್ರಜ್ಞೆ ಇರಲಿ ಜೊತೆಗೆ ನಿಮ್ಮ ಗುರಿಯ ಬಗ್ಗೆ ಏಕಾಗ್ರತೆ ಇರಲಿ, ಜಾಗತಿಕ ಶೈಕ್ಷಣಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸ್ವಯಂ ಪ್ರೇರಣೆ ಪ್ರಮುಖವಾಗಿದೆ. ಸಂಸ್ಥೆಯ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು, ಮೊಬೈಲ್, ದೂರದರ್ಶನಗಳಿಂದ ದೂರವಿರುವುದು ಉತ್ತಮ ಫಲಿತಾಂಶವನ್ನು ತಂದುಕೊಡುತ್ತದೆ ಎನ್ನುವುದನ್ನು ಮನಗಾಣಬೇಕು, ಇಂದು ಗ್ರಾಮೀಣ ಭಾಗದಿಂದ ಬಂದ ಅನೇಕರು ಸಾಕಷ್ಟು ಸಾಧನೆ ಮಾಡಿರುವುದನ್ನು ನೋಡಬಹುದಾಗಿದ್ದು ಅಂತಹ ಪ್ರತಿಭೆ ನಿಮ್ಮಲ್ಲಿಯೂ ಅಡಗಿರುತ್ತದೆ. ಅದರ ಸದುಪಯೋಗ ಪಡೆಯುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯ ವಿಜಯಕುಮಾರ ವಹಿಸಿದ್ದರು. ಅತಿಥಿಗಳಾಗಿ ಡಿ.ಎಂ. ಪೂಜಾರ, ಪದವಿ ಉಪನ್ಯಾಸಕರಾದ ಖುಷಾ ಅರಳಿ, ಸುಧಾ ಎಚ್., ವಿದ್ಯಾ ಬಾಲೆಹೊಸೂರು, ಪಂಚಾಕ್ಷರಿ ಹೂಗಾರ, ಮೇಘಾ ವಾಲೀಕಾರ, ನಾಜ್ ಹೆಸರೂರ ಹಾಗೂ ಪ.ಪೂ. ಕಾಲೇಜ್ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಸ್ರೀನ್‌ಬಾನು, ಸಖೀನಾ, ಭವ್ಯಶ್ರೀ, ಕವನಾ ಮುಂತಾದವರು ನಿರೂಪಿಸಿದರು.