ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿಅನ್ಯಕೋಮಿನ ಪರಿಚಿತ ಯುವತಿಯನ್ನು ದ್ವಿಚಕ್ರ ವಾಹನ ಮೇಲೆ ಕರೆದುಕೊಂಡು ಹೋಗುತ್ತಿದ್ದ ಹಿಂದು ಯುವಕನ ಮೇಲೆ ಅಪರಿಚಿತ ಯುವಕರ ಗುಂಪು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕುವ ಮೂಲಕ ನೈತಿಕ ಪೊಲೀಸ್‌ಗಿರಿ ನಡೆಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಅಪ್ರಾಪ್ತರನ್ನು ವಶಕ್ಕೆ ಪಡೆದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಆಗಿದ್ದೇನು?:
ನಗರದ ಖಾಸಗಿ ಕಾಲೇಜಿನಲ್ಲಿ ಬಿಎ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದ ಹಿಂದು ಯುವಕ ಹಾಗೂ ಮುಸ್ಲಿಂ ಯುವತಿ ಮೊದಲಿಂದಲೂ ಚಿರಪರಿಚಿತರು. ಏ.18 ರಂದು ಯುವಕ ತನ್ನ ದ್ವಿಚಕ್ರ ವಾಹನದ ಮೇಲೆ ಯುವತಿಯನ್ನು ಕಾಲೇಜಿಗೆ ಕರೆದುಕೊಂಡು ಬಂದಿದ್ದಾನೆ. ಕಾಲೇಜು ಮುಗಿದ ಬಳಿಕ ಇಬ್ಬರೂ ಜತೆಯಾಗಿ ಮನೆಗೆ ಮರಳುತ್ತಿರುವುದನ್ನು ಕಂಡ ಅಪರಿಚಿತ ದುಷ್ಕರ್ಮಿಗಳ ಗುಂಪು ಕಾರಿನಲ್ಲಿ ಬಂದು ದ್ವಿಚಕ್ರ ವಾಹನಕ್ಕೆ ಅಡ್ಡಗಟ್ಟಿ ನೀನು ಮುಸ್ಲಿಂ ಹುಡುಗಿಯೊಂದಿಗೆ ಏಕೆ ಹೋಗುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾನೆ.ಈ ವೇಳೆ ಯುವಕ ಮತ್ತು ಯುವತಿ ನಾವು ಇಬ್ಬರು ಮೊದಲಿಂದಲೂ ಪರಿಚಯಸ್ಥರು, ಅಷ್ಟೇ ನಮ್ಮ ಕುಟುಂಬಸ್ಥರು ಪರಿಯಸ್ಥರು ಎಂದು ತಿಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪುಂಡರು ಫೋನ್ ಮಾಡಿ ತಮ್ಮ ಸ್ನೇಹಿತರಿಗೆ ಬರುವಂತೆ ತಿಳಿಸಿದ್ದಾರೆ. ದ್ವಿಚಕ್ರ ವಾಹನದ ಮೇಲೆ ಬಂದ ನಾಲ್ವರು ಆ ಯುವಕನನ್ನು ಅವಾಚ್ಯ ಶಬ್ದಗಳಿಂದ ಬೈದು ಅಂಗಿ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಬಳಿಕ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ನೈತಿಕ ಪೊಲೀಸ್‌ಗಿರಿ ನಡೆಸಿದ ದುಸ್ಕರ್ಮಿಗಳ ವಿರುದ್ಧ ಮುಸ್ಲಿಂ ಯುವತಿ ನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಆರು ಜನ ಅಪ್ರಾಪ್ತರನ್ನು ವಶಕ್ಕೆ ಪಡೆದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿಲ್ಲ. ಅಲ್ಲದೇ ನಗರದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದು.-ಯಡಾ ಮಾರ್ಟಿನ, ಆಯುಕ್ತರು ನಗರ ಪೊಲೀಸ್ ಬೆಳಗಾವಿ.